“ಮಮ್ಮಾಯಿದೂತೆ, ಊರುಗುದಾತೆ, ನಂಬಿನಾಯಗ್ ವೈದ್ಯನಾತೆ’ ಎನ್ನುವ ಕೀರ್ತಿಯೊಂದಿಗೆ ತುಳುನಾಡಿನಾದ್ಯಂತ ಪ್ರಸಿದ್ಧವಾದ, ಸತ್ಯದ ದೈವವಾಗಿ ನಂಬಿ ಬರುವ ಭಕ್ತರಿಗೆ ಭವರೋಗ ವೈದ್ಯನಾಗಿ, ಅಭಯ-ರಕ್ಷಣೆ ನೀಡುವ ಮಣಿಪಾಲದ ಶ್ರೀ ಬಬ್ಬುಸ್ವಾಮಿಗೆ ಸರಳ-ಸುಂದರ-ಶಾಸ್ತ್ರೀಯ ಆಯ ಪ್ರಮಾಣದ ದೈವಸ್ಥಾನ ನಿರ್ಮಿಸಿದ್ದು, ಪ್ರಸ್ತುತ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಮುಚ್ಚಯವು ಭವ್ಯ ದೈವಸ್ಥಾನವಾಗಿ ವಿಜೃಂಭಿಸುತ್ತ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ.
ಪ್ರಕೃತಿಯ ಆರಾಧನೆಯೊಂದಿಗೆ ಗೋಳಿಮರದ ಅಡಿಯಲ್ಲಿರುವ ದೈವಸ್ಥಾನದಲ್ಲಿ ಎಲ್ಲ ಪರಿವಾರ ದೈವಗಳ ಆರಾಧನೆ ಸಂಪನ್ನಗೊಳ್ಳುತ್ತಿದೆ. ಆಕರ್ಷಕ ಸ್ವಾಗತ ಗೋಪುರ, ಹೂ, ಗಿಡಗಳ ಅಲಂಕಾರ ದೈವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಆಹ್ಲಾದ ನೀಡುತ್ತಿದೆ. ಪ್ರತೀ ವರ್ಷ ಮಾರ್ಚ್ನಲ್ಲಿ ನಡೆಯುವ ಸಿರಿಸಿಂಗಾರದ ನೇಮದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಮಾ. 10ರ ಸಂಜೆ ಹೊರೆಕಾಣಿಕೆಯಿಂದ ಚಾಲನೆಗೊಳ್ಳುವ ಈ ವರ್ಷದ ನೇಮೋತ್ಸವ ಮಾ. 12ರ ವರೆಗೆ ಜರಗಲಿದೆ. ಇಲ್ಲಿ ಜರಗುವ ಅನ್ನಸಂತರ್ಪಣೆಯಲ್ಲಿ ವರ್ಷಂಪ್ರತಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದು, ಈ ವರ್ಷ ಮಾ. 11ರಂದು ನಡೆಯುವ ಮಹಾ ಅನ್ನಸಂತರ್ಪಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.