ಕಾಪುವಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯುವ ತುಳುನಾಡಿನ ಏಳು ಜಾತ್ರೆಗಳಲ್ಲಿ ಒಂದಾದ ಕಾಪುವಿನ ಕಾಲಾವಧಿ ಸುಗ್ಗಿಮಾರಿ ಪೂಜೆಯು ಮಾ. 21 ಮತ್ತು 22ರಂದು ನಡೆಯಲಿದೆ ಎಂದು ಮಾರಿಗುಡಿಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಕಾಪು ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ ಈ ಬಗ್ಗೆ ಮಾಹಿತಿ ನೀಡಿ, ಐತಿಹಾಸಿಕ ಹಿನ್ನೆಲೆ ಮತ್ತು ಪ್ರಸಿದ್ಧಿ ಪಡೆದಿರುವ ಮೂರು ಮಾರಿಗುಡಿಗಳಲ್ಲಿ 2023 ನೇ ಸಾಲಿನ ಸುಗ್ಗಿ ಮಾರಿಪೂಜೆಗೆ ಪೂರ್ವಭಾವಿಯಾಗಿ ಮಾ. 14 ಮೀನ ಸಂಕ್ರಮಣದಂದು ಕುರಿ ಬಿಡುವ ಸಂಪ್ರದಾಯ ನಡೆಯಲಿದೆ. ಬಳಿಕ ಅದರ ಮುಂದಿನ ಮಂಗಳವಾರ ಮತ್ತು ಬುಧವಾರ (ಮಾ. 21 ಮತ್ತು 22) ದಂದು ಸುಗ್ಗಿ ಮಾರಿಪೂಜೆ ನಡೆಯಲಿದೆ ಎಂದು ತಿಳಿಸಿದರು.
ಕಾಪುವಿನ ಮೂರು ಮಾರಿಗುಡಿಗಳಲ್ಲಿ ವರ್ಷಕ್ಕೆ ಮೂರು ಬಾರಿ ಸುಗ್ಗಿ, ಆಟಿ ಮತ್ತು ಜಾರ್ದೆ ಮಾರಿಪೂಜೆ ನಡೆಯುತ್ತದೆ. ಇದರಲ್ಲಿ ಸುಗ್ಗಿ ಮಾರಿಪೂಜೆ ಅತ್ಯಂತ ವೈಭವದಿಂದ ನಡೆಯುತ್ತಿದ್ದು ಎರಡರಿಂದ ಮೂರು ಲಕ್ಷದಷ್ಟು ಜನ ಭಾಗವಹಿಸುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮಾತ್ರವಲ್ಲದೇ ಕಾಸರಗೋಡು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮುಂಬಯಿ, ಬೆಂಗಳೂರು ಸೇರಿದಂತೆ ಹೊರರಾಜ್ಯ, ಹೊರರಾಷ್ಟ್ರಗಳಿಂದಲೂ ಭಕ್ತರು ಪಾಲ್ಗೊಳ್ಳುವುದು ವಿಶೇಷವಾಗಿದೆ.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಶ್ರೀ ಮೂರನೇ (ಕಲ್ಯ) ಮಾರಿಗುಡಿಯ ಕಾರ್ಯ ನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಪ್ರಬಂಧಕ ಲಕ್ಷ್ಮೀಕಾಂತ್ ದೇವಾಡಿಗ ಉಪಸ್ಥಿತರಿದ್ದರು.