ಎರಡು ವರ್ಷಗಳಿಗೊಮ್ಮೆ ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ನಡೆಯುವಂತಹ ಢಕ್ಕೆಬಲಿ ಎಂಬ ಸೇವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಏಳು ಉತ್ಸವಗಳಲ್ಲಿ ಒಂದು. ಏಕೆಂದರೆ ಇಲ್ಲಿ ಯಾವುದೇ ವಿಕೃತಿಗಳಿಲ್ಲದ ಸೊಬಗಿನ ಪ್ರಕೃತಿ ಇದೆ. ಸಂಜೆಯಾಗುತ್ತಿದ್ದಂತೆ ಅಲಂಕಾರ ಪ್ರಾರಂಭವಾಗುತ್ತದೆ. ನಡು ಇರುಳಲ್ಲಿ ನಿಸರ್ಗ ಪೂರ್ಣ ಸೊಬಗಿನಿಂದ ವಿಜೃಂಭಿಸುತ್ತದೆ. ಆಗ ಕಟ್ಟುಕಟ್ಟಳೆಗಳು ನೆರವೇರುತ್ತದೆ. ಬೆಳಗಾಗುತ್ತಿದ್ದಂತೆ ಆರಾಧನೆ ಮುಗಿಯುತ್ತದೆ. ಪ್ರಕೃತಿ ಮತ್ತೆ ಅಲಂಕರಣಗಳನ್ನು ಕಳಚಿಕೊಂಡು ನೈಜ ಸ್ಥಿತಿಗೆ ಬರುತ್ತದೆ. ಇಂತಹ ರೂಪಾoತರವು ಆರಾಧನಾ ಪರ್ವದಲ್ಲಿ ಮಾತ್ರ ಕಾಣಬಹುದಾದ ಇಲ್ಲಿಯ ವೈಶಿಷ್ಟ.
ಇದೇ ಬರುವ ಫೆಬ್ರವರಿ 11 ರಂದು ಶನಿವಾರ ಪಡುಬಿದ್ರಿ ಶ್ರೀ ಖಡ್ಗೆಶ್ವರಿ ಬ್ರಹ್ಮಸ್ಥಾನದಲ್ಲಿ ಶ್ರೀಮತಿ ಮತ್ತು ಶ್ರೀ ಉಮೇಶ್ ಶೆಟ್ಟಿ ಪೇಟೆಮನೆ ಹಾಗೂ ಕುಟುಂಬಸ್ಥರಿಂದ ಢಕ್ಕೆಬಲಿ ಸೇವೆಯು ಶ್ರೀ ಸನ್ನಿಧಿಯ ಪ್ರೇರಣೆಯಂತೆ ಜರುಗಲಿದೆ. ಅದೇ ದಿನ ಮದ್ಯಾಹ್ನ ಗಂಟೆ 12.30 ರಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕೂಡ ನಡೆಯಲಿದೆ. ಬಳಿಕ ಗಂಟೆ 4 ಕ್ಕೆ ದೇವಸ್ಥಾನದಿಂದ ಫಲಪುಷ್ಪ ತಾಂಬೂಲ ಪರಿಕರ ಹೊರೆಕಾಣಿಕೆ ಮೆರವಣಿಗೆಯಲ್ಲಿ ಬಂಟ ಸಮಾಜ ಬಾಂಧವರೆಲ್ಲರೂ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.