ಚಿತ್ರ, ವರದಿ : ಕಿರಣ್ ಬಿ ರೈ ಕರ್ನೂರು
ಪುಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಇವರ ಪರಿಕಲ್ಪನೆಯೊಂದಿಗೆ ಕರ್ನಾಟಕದ ೬೭ ನೇ ರಾಜ್ಯೋತ್ಸವವನ್ನು ಒಂದು ವಿಶೇಷ ರೀತಿಯಲ್ಲಿ ಆಚರಿಸಿ ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ನಮ್ಮ ಭಾಷಾ ಅಸ್ಮಿತತೆಯೊಂದಿಗೆ ಒಗ್ಗೂಡಿಸುವ ಉದ್ದೇಶ ಹೊಂದಿದ ಕೋಟಿ ಕಂಠ ಗಾಯನ ಎನ್ನುವುದು ಒಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ನಾವು ಪುಣೆಯಲ್ಲಿರುವ ಕನ್ನಡಿಗರೆಲ್ಲ ಸೇರಿಕೊಂಡು ಈ ಸಂಭ್ರಮದಲ್ಲಿ ಭಾಗಿಗಳಾಗುತ್ತಿರುವುದು ನಮಗೆಲ್ಲ ಹೆಮ್ಮೆಯ ಕ್ಷಣಗಳಾಗಿವೆ . ಇದೊಂದು ಸತ್ಚಿಂತನೆಯ ಕಾರ್ಯಕ್ರಮವಾಗಿದ್ದು ನಾವು ಮಹಾರಾಷ್ಟ್ರದ ಮಣ್ಣಿನಲ್ಲಿದ್ದರೂ ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯೊಂದಿಗೆ ಬೆರೆತುಕೊಂಡು ನಮ್ಮ ನಾಡಿನ ಭಾಷೆ ಹಾಗೂ ಸಂಸ್ಕೃತಿಯನ್ನೂ ಪೋಷಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದೇವೆ . ಇಂತಹ ಕಾರ್ಯಕ್ರಮ ನಮ್ಮ ರಾಜ್ಯೋತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ನುಡಿದರು .
ಅವರು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿತ ಪುಣೆ ಬಂಟರ ಸಂಘದ ಸಂಯೋಜನೆಯೊಂದಿಗೆ ೬೭ ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಸಚಿವ ಸುನಿಲ್ ಕುಮಾರ್ ರವರ ಪರಿಕಲ್ಪನೆಯಂತೆ ಪುಣೆ ಬಂಟರ ಭವನದಲ್ಲಿ ನಡೆದ’ ನನ್ನ ಹಾಡು- ನನ್ನ ನಾಡು “ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡುತ್ತಾ ನಮ್ಮ ನಾಡು ಕನ್ನಡ ಭಾಷೆ ಹಾಗೂ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದ ನಾಡಾಗಿದ್ದು ಇದನ್ನು ಉಳಿಸಿ ಪೋಷಿಸುವ ಕಾರ್ಯವನ್ನು ನಾವು ಎಲ್ಲಿಯೇ ಇದ್ದರೂ ಮಾಡಬೇಕಾಗಿದೆ . ನಮ್ಮ ಸಂಘದ ವತಿಯಿಂದ ಭವಿಷ್ಯದಲ್ಲಿ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು .
ವೇದಿಕೆಯಲ್ಲಿ ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಂಚೂರು ,ಮಾಜಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ , ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ ,ಉಪಾಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು , ಪದಾಧಿಕಾರಿ ಬಾಲಕೃಷ್ಣ ಶೆಟ್ಟಿ ,ಪುಣೆ ತುಳುಕೂಟದ ಮಾಜಿ ಅಧ್ಯಕ್ಷರಾದ ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ,ಪುಣೆ ಬಂಟರ ಸಂಘದ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ ,ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು ,ಸುಧೀರ್ ಶೆಟ್ಟಿ ಕೆಂಜಾರು ಕೊಳಕೆಬೈಲು ,ಕಿಶೋರ್ ಹೆಗ್ಡೆ ,ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ, ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು . ಮೊದಲಿಗೆ ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು . ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಸದಸ್ಯರು ,ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳ ಸದ್ಸ್ಯೆಯರೂ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ವಿವಿಧ ನಾಡಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು .