ಬೆಳಗ್ಗಿನ ತಿಂಡಿ ಮಾಡುವುದು ಎಲ್ಲರಿಗೂ ಒಂದು ಟಾಸ್ಕ್. ಪ್ರತಿ ಬಾರಿ ನೀವು ಡಿಫರೆಂಟ್ ಆಗಿ ಏನಾದರೂ ಟ್ರೈ ಮಾಡಬೇಕು ಎಂದುಕೊಂಡರೆ ಇಲ್ಲಿದೆ ಒಂದು ಹೊಸ ರುಚಿ. ನೀವು ಸಾಮಾನ್ಯವಾಗಿ ಇಡ್ಲಿ ಮಾಡುವಾಗ ಒಂದು ಹೆಚ್ಚಿನ ಸಾಮಾಗ್ರಿಯನ್ನು ಹಾಕಿದರೆ ಇಡ್ಲಿಯ ಸ್ವಾದವನ್ನೇ ಬದಲಿಸಬಹುದು. ಹೌದು ನೀವೊಮ್ಮೆ ಸಬ್ಬಕ್ಕಿ ಇಡ್ಲಿ (Sago Idli) ಮಾಡಿ ಡಿಫರೆಂಟ್ ರುಚಿಯನ್ನು ಆನಂದಿಸಿ.
ಬೇಕಾಗುವ ಪದಾರ್ಥಗಳು:
ಇಡ್ಲಿ ರವೆ/ ಅಕ್ಕಿ ರವೆ – 1 ಕಪ್
ಸಬ್ಬಕ್ಕಿ – ಮುಕ್ಕಾಲು ಕಪ್
ಹುಳಿ ಮೊಸರು – ಒಂದೂವರೆ ಕಪ್
ನೀರು – 1 ಕಪ್
ತುರಿದ ತೆಂಗಿನಕಾಯಿ – ಕಾಲು ಕಪ್
ಅಡುಗೆ ಸೋಡಾ – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಸಾಸಿವೆ – ಅರ್ಧ ಟೀಸ್ಪೂನ್
ಮುರಿದ ಗೋಡಂಬಿ – 10
ಹಸಿರು ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ – ಕೆಲವು
ಎಣ್ಣೆ – 2 ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ ರವೆ ಹಾಗೂ ಸಬ್ಬಕ್ಕಿಯನ್ನು ತೆಗೆದುಕೊಂಡು, ಚೆನ್ನಾಗಿ ತೊಳೆಯಿರಿ. ಬಳಿಕ ನೀರನ್ನು ಸಂಪೂರ್ಣವಾಗಿ ಹರಿದು ಹೋಗುವಂತೆ ಮಾಡಿ.
* ಈಗ ಮಿಶ್ರಣಕ್ಕೆ ಮೊಸರು, ನೀರು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಈ ಮಿಶ್ರಣವನ್ನು ರಾತ್ರಿಯಿಡೀ ಅಥವಾ 6-8 ಗಂಟೆ ಮುಚ್ಚಿ ಇಡಿ.
* ಬೆಳಗ್ಗೆ ಹಿಟ್ಟು ಒಣಗಿದೆ ಎನಿಸಿದರೆ ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
* ಈಗ ಒಂದು ಸಣ್ಣ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ಬಳಿಕ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಗೋಡಂಬಿ ಸೇರಿಸಿ ಸ್ವಲ್ಪ ಫ್ರೈ ಮಾಡಿ, ಬಳಿಕ ಇಡ್ಲಿ ಹಿಟ್ಟಿಗೆ ಹಾಕಿ ಮಿಶ್ರಣ ಮಾಡಿ.
* ಬಳಿಕ ಮಿಶ್ರಣಕ್ಕೆ ತೆಂಗಿನ ತುರಿ, ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.
* ಈಗ ಬೇಕಿಂಗ್ ಸೋಡಾ ಹಾಕಿ. ನೀವು ಬೇಕಿಂಗ್ ಸೋಡಾ ಇಷ್ಟಪಡುವುದಿಲ್ಲ ಎಂದರೆ ಹಾಕುವುದು ಬೇಡ.
* ನೀವೀಗ ಇಡ್ಲಿ ತಟ್ಟೆಗಳಲ್ಲಿ ಹಿಟ್ಟನ್ನು ಹಾಕಿ, 15 ನಿಮಿಷ ಹಬೆಯಲ್ಲಿ ಬೇಯಿಸಿಕೊಳ್ಳಿ.
* ಇದೀಗ ರುಚಿಯಾದ ಸಬ್ಬಕ್ಕಿ ಇಡ್ಲಿ ತಯಾರಾಗಿದ್ದು, ಇದನ್ನು ನಿಮ್ಮಿಷ್ಟದ ಚಟ್ನಿ ಅಥವಾ ಸಾಗುವಿನೊಂದಿಗೆ ಸವಿಯಿರಿ.