ಮಧ್ಯಪ್ರದೇಶದ ಭೋಪಾಲ್ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಯೋಧ ಮುರಳೀಧರ ರೈ (37) ಅವರ ಅಂತ್ಯಸಂಸ್ಕಾರ ಸರಕಾರಿ ಗೌರವಗಳೊಂದಿಗೆ ಬುಧವಾರ ಶಕ್ತಿನಗರದಲ್ಲಿ ನೆರವೇರಿತು.ಪಾರ್ಥಿವ ಶರೀರವನ್ನು ಶಕ್ತಿನಗರದ ಮುಗ್ರೋಡಿ ಸಂಜಯನಗರದ ಅವರ ಮನೆಯಿಂದ ಮೆರವಣಿಗೆ ಮೂಲಕ ಆಂಜನೇಯ ಸಭಾಭವನ ಮೈದಾನಕ್ಕೆ ತಂದು ಅಲ್ಲಿ ಸರಕಾರಿ ಗೌರವ ಸಲ್ಲಿಸಲಾಯಿತು. ಅನಂತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಪಾಲಿಕೆ ಸದಸ್ಯರಾದ ಶಕೀಲಾ ಕಾವಾ, ಸುಧೀರ್ ಶೆಟ್ಟಿ, ವನಿತಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಸಶಸ್ತ್ರ ಸೀಮಾಬಲ್ನಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ಮಾಡುತ್ತಿದ್ದ ಮುರಳೀಧರ ರೈ ಅವರು ರವಿವಾರ ಮಲಗಿದ ಬಳಿಕ ಹೃದಯಾಘಾತವಾಗಿತ್ತು. ಅವರು ಮೃತಪಟ್ಟಿರುವುದು ಸೋಮವಾರ ಬೆಳಗ್ಗೆ ಗೊತ್ತಾಗಿತ್ತು.