ಜನವರಿ 24 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಈ ದಿನದ ಸಂಭ್ರಮದಲ್ಲಿ ಯಾವ ಕಲ್ಪನೆಗೂ ಎಟುಕದಂತಹ ಕಾರ್ಯಸಿದ್ದಿಯ ತತ್ಪರತೆಯಲ್ಲೆ ಗೆಲುವು ಸಾಧಿಸುವಂತಹ ಹೆಣ್ಣು ಮಕ್ಕಳ ಬದುಕು ಭವಿಷ್ಯದ ಬಗ್ಗೆ ಯೋಚಿಸಬೇಕು.ಸರಕಾರ, ಸಮಾಜ, ಹಾಗೂ ಪಾಲಕರು ಹೆಚ್ಚಿನ ಮಹತ್ವ ಹೆಣ್ಣು ಮಕ್ಕಳ ಭವಿಷ್ಯದ ಬೆಳವಣಿಗೆಗೆ ಕೊಟ್ಟಲ್ಲಿ ಅವರ ಬದುಕು ಸುಖ ಶಾಂತಿ ಸಮೃದ್ದಿಯಿಂದ ತುಂಬಿ ಬಾಳು ಬಂಗಾರವಾಗಲಿದೆ.
ಇಂದಿನ ಮಕ್ಕಳೆ ಮುಂದಿನ ಜನಾಂಗ ಭವ್ಯ ಭಾರತ ಕಟ್ಟುವ ಸರದಾರರು ಇವರು . ” ಬೆಳೆವ ಸಿರಿ ಮೊಳಕೆ ಯಲ್ಲಿ ನೋಡು” ಎಂಬಂತೆ ಶಿಸ್ತು, ಸರಳತೆ, ಶ್ರದ್ಧೆ, ಪ್ರಾಮಾಣಿಕತೆ, ಶೌರ್ಯ, ಧೈರ್ಯ, ವಿನಯ, ವಿಧೇಯತೆ ಯಂತಹ ಉತ್ತಮ ಗುಣಗಳು ಬಾಲ್ಯದಲ್ಲೇ ಮಕ್ಕಳಿಗೆ ಕಲಿಸಿದರೆ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದಂತೆ . ಪಾಲಕರು ಕೆಲಸದ ಒತ್ತಡದಲ್ಲಿ ಮಕ್ಕಳ ಲಾಲನೆಪಾಲನೆಗೆ ಹೆಚ್ಚಿನ ಗಮನ ಕೊಡಲು ಅಸಮರ್ಥರಾಗುತ್ತಿದ್ದಾರೆ. ಚಿಕ್ಕ ಮಕ್ಕಳು ಮೃದು ಹಾಗೂ ಅನುಕರಣೆಯ ಸ್ವಭಾವ ಹೊಂದಿದ್ದು ಹೆತ್ತವರ ನಡೆ -ನುಡಿ ಆಚಾರ- ವಿಚಾರ ಉಡುಗೆ – ತೊಡುಗೆಯನ್ನು ಅನುಸರಿಸುವುದರಿಂದ ತಂದೆ ತಾಯಿಗಳು ಮೊದಲು ಆದರ್ಶ ಪ್ರಾಯವಾಗಿರ ಬೇಕು. ಕೇವಲ ಹೆಣ್ಣುಮಕ್ಕಳ ದಿನಾಚರಣೆ ಆಚರಿಸಿ ಕೊಂಡರೆ ಸಾಲದು. ವಿದ್ಯೆ ವಿನಯ ನೀಡಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿಯು ಬೇಕು.ಮಕ್ಕಳ ಮನೋವಿಕಾಸವು ಆಯಾ ಮನೆ ಮತ್ತು ಪರಿಸರವನ್ನು ಅವಲಂಬಿಸಿರುತ್ತದೆ. ಅತಿ ಹೆಚ್ಚು ನಿರ್ಬಂಧ ವಾಗಲಿ, ಶಿಸ್ತಾಗಲಿ, ಶಿಕ್ಷೆಯಾಗಲಿ, ಪ್ರೀತಿ ಯಾಗಲಿ, ನಿರ್ಲಕ್ಷ್ಯ ಇರಿಸ ಬಾರದು.ಮಕ್ಕಳ ಮನಸ್ಸು ಗೆಲ್ಲುವುದು ಅನಿವಾರ್ಯ.
ದೇಶದ ಭವಿಷ್ಯತ್ತಾದ ಬಹುತೇಕ ಹೆಣ್ಣು ಮಕ್ಕಳು ಮೂಲಭೂತ ಸೌಕರ್ಯಗಳಿಲ್ಲದೆ ಬೆಳೆಯುತ್ತಿದ್ದಾರೆ. ಹೆಣ್ಣು ಅಂದರೆ ಬಾಲ್ಯದಲ್ಲಿ ತಂದೆ ತಾಯಿಗಳ ಆಶ್ರಯ, ಯೌವ್ವನದಲ್ಲಿ ಪತಿಯ ಆಶ್ರಯ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಕಾಲ ಕಳೆಯ ಬೇಕು. ಇದು ಮನು ಸೃತಿಯಲ್ಲಿ ಬರುವ ಮಾತು. ಆದರೆ ಎಲ್ಲಾ ವಿಷಯಗಳ ನಡುವೆ ಹೆಣ್ಣೊಬ್ಬಳು ನಾಗರೀಕತೆಯ ಉತ್ತುಂಗಕ್ಕೆರುವ ಹಮ್ಮಿನಲ್ಲಿ ಎಲ್ಲರಿಗೂ ಆಶ್ರಯ ದಾತಳಾದ ಎಷ್ಟೋ ನಿದರ್ಶನಗಳು ಇದೆ. ದುಃಖಿತರ, ಶೋಷೀತರ ಕಷ್ಟ ಕಾರ್ಪಣ್ಯಗಳಲ್ಲಿ ತೊಳಲಾಡುವ ವರಿಗೆ ಆಶ್ರಯದಾತಳಾಗಿ ತಾನು ಸಾಧಿಸಿದ ಹೆಜ್ಜೆ ಗುರಿತುಗಳು ಬೇರೆಯವರಿಗೆ ಮಾದರಿಯಾಗುವಂತೆ ಮಾಡಬಲ್ಲಳು.
ಯಾವುದನ್ನು ಮಕ್ಕಳು ಇಷ್ಟ ಪಡುತ್ತಾರೊ ಅದನ್ನು ಕಲಿಸಿ . ಎಲ್ಲಾ ಕ್ಷೇತ್ರದಲ್ಲೂ ಗೋಲ್ಡ್ ಮೆಡಲ್ ನಿರೀಕ್ಷೆಯು ಬೇಡಾ. ಹವ್ಯಾಸ ಹೊರೆಯಾಗದೆ ವಯಸ್ಸಿಗೆ, ಮನಸ್ಸಿಗೆ ಹಿತವಾದರೆ ಆತ್ಮವಿಶ್ವಾಸವೂ ಬೆಳೆಯುತ್ತದೆ. ಮಕ್ಕಳ ತಕರಾರು ಗೊಂದಲಗಳನ್ನು ಆಲಿಸಿ ಪ್ರೋತ್ಸಾಹಿಸಿ ಬೇಡಿಕೆ ಯೋಗ್ಯವಾಗಿದ್ದರೆ ಪೂರೈಸಿ ಬದುಕಿನಲ್ಲಿ ಒತ್ತಡ, ಸಂಘರ್ಷಗಳ ಸರಿಯಾಗಿ ನಿಭಾಯಿಸಲಾಗದೆ ಖಿನ್ನತೆ, ಆತಂಕ, ನಿದ್ರಾಹೀನತೆ, ಧೂಮಪಾನ ಮಧ್ಯಪಾನ ಹಾಗೂ ಮಾದಕ ಸೇವನೆಗೆ ಶರಣಾಗುವಿಕೆಯಂತ ಅಭ್ಯಾಸ ತಗಲಿರುವುದು ಗಮನಕ್ಕೆ ಬಂದರೆ ಸೂಕ್ತಚಿಕಿತ್ಸೆ ನೀಡಲು ತಡಮಾಡಬಾರದು. ಇತ್ತೀಚೆಗೆ ನಡೆದ ಸಮೀಕ್ಷೆ ಯೊಂದರ ವರದಿಯಂತೆ ಧೂಮಪಾನ, ಮದ್ಯಪಾನದಂತ ಚಟಗಳಿಗೆ ಹೆಣ್ಣುಮಕ್ಕಳು ಒಳಗಾಗುತ್ತಿರುವು ಸ್ಪಷ್ಟವಾಗಿದೆ . ಆದ್ದರಿಂದ ಮಕ್ಕಳಿಗೆ ಜವಾಬ್ದಾರಿ ಕಲಿಸುವ ವಿಚಾರದಲ್ಲಿ ಪಾಲಕರು ಎಡವುತ್ತಿದ್ದಾರೆ ಎಂದೆನಿಸುತ್ತದೆ. ಮಕ್ಕಳೊಂದಿಗೆ ಮಕ್ಕಳಾಗಿ ಇರಿ. ಪ್ರೀತಿಯಿಂದ ಇಡಿ ಜಗತ್ತನ್ನೇ ಗೆಲ್ಲಬಹುದು ನಮ್ಮ ಮಕ್ಕಳ ಮನಸ್ಸು ಗೆಲ್ಲಲಾರದೆ.
ಭಾರತದ ಅನೇಕ ಹೆಣ್ಣುಮಕ್ಕಳು ತಮ್ಮ ತಮ್ಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಜಗತ್ತಿನ ಅತ್ಯಂತ ಎತ್ತರದ ಯುದ್ದ ಭೂಮಿಯಾಗಿರುವ ಸಿಯಾಬಿನ್ ಗ್ಲೇಸಿಯರ್ನ ಕೂಮಾರ್ ಪೋಸ್ಟ್ ನಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಯನ್ನು ಸೇನೆ ನಿಯೋಜಿಸಿದೆ. ಇದು ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಹಾಗೂ ಪ್ರೇರಣೆ ದೊರೆತಂತೆ .ಹೆಮ್ಮೆಯ ಹೆಣ್ಣು ಮಕ್ಕಳು ತನ್ನ ಕನಸನ್ನು ಸಾಕಾರಗೊಳಿಸಿಕೊಂಡು ಜಗತ್ತೆ ಗುರುತಿಸುವಂತಹ ಅಮೋಘ ಸಾಧನೆ ಮಾಡಿದ ಅಸಾಧಾರಣ ಅಪರೂಪದ ಹೆಣ್ಣು ಎನಿಸಿಕೊಂಡವರು ಅನೇಕರಿದ್ದಾರೆ.
ಹೆಣ್ಣು ಮಗುವೊಂದಕ್ಕೆ ಅತ್ಯುತ್ತಮ ಮಾರ್ಗ ದರ್ಶನ, ಸರಿಯಾದ ವಿದ್ಯೆ ಸಲಹೆ ಸೂಚನೆಗಳನ್ನು ಕೊಟ್ಟಲ್ಲಿ ವಿಶ್ವವೇ ಗುರುತಿಸುವಂತೆ ಮಾಡಬಲ್ಲಳು. ವಿದ್ಯಾವಂತ ಹೆಣ್ಣು ಗುಲಾಮಳಾಗುವುದಾಗಲಿ ಅಬಲೆ ಅನಿಸಿಕೊಳ್ಳುವುದಾಗಲಿ ಸಾಧ್ಯವಿಲ್ಲ. ತಾನು ಪಡೆದ ವಿದ್ಯೆಯಿಂದ ಗುರಿಯ ಕುರಿತು ಯೋಚಿಸುತ್ತಾಳೆ. ಹೆಣ್ಣು ಮಕ್ಕಳ ಸ್ಥಿತಿ ಗತಿಗಳು ವಿಭಿನ್ನ ನೆಲೆಯಲ್ಲಿ ರೂಪುಗೊಳ್ಳುತ್ತಿದ್ದು.ಎಲ್ಲಾ ರಂಗದಲ್ಲೂ ವಿಂಚುತ್ತಿದ್ದಾಳೆ. ಕಿರುತೆರೆ, ಬೆಳ್ಳಿತೆರೆ, ಸಾಮಾಜಿಕ ,ಶೈಕ್ಷಣಿಕ, ರಾಜಕೀಯ, ಕ್ರೀಡೆ, ಹೀಗೆ ಹೆಣ್ಣು ಕಾಲಿರಿಸದ ಕಾರ್ಯ ಕ್ಷೇತ್ರವೆ ಇಲ್ಲ. ಎಲ್ಲಾ ರಂಗದಲ್ಲೂ ಹೆಣ್ಣು ತನ್ನನ್ನು ತಾನು ರೂಪಿಸಿಕೊಂಡಿದ್ದಾಳೆ.
ಹರೆಯದ ವಯಸ್ಸಿಗೆ ಬೇಕು ಬೇಡಗಳ ಪರಿವೆ ಇಲ್ಲದೆ ಒಳ್ಳೆಯದು ಕೆಟ್ಟದರ ಕುರಿತು ಚಿಂತಿಸಿ ವಿವೇಚಿಸದೆ ಜೀವನ ಶೈಲಿ ಬದಲಾಯಿಸಿ ಕೊಂಡಿರುವ ಮಕ್ಕಳನ್ನು ಸ್ನೇಹಿತರಂತೆ ಕಂಡು ಆತ್ಮೀಯತೆಯಿಂದ ತಿಳಿ ಹೇಳಿ. ಹೆತ್ತವರು ಶಿಸ್ತಿನ ಹೆಸರಿನಲ್ಲಿ ಮಕ್ಕಳನ್ನು ಬ್ಯೆದು ಗದರಿಸಿ, ಭಯಪಡಿಸಿದರೆ ನೀವೆಂದು ಕೊಂಡ ಹಾಗೆ ಒಳ್ಳೆಯ ಫಲಿತಾಂಶ ಸಿಗದು. ಚೈತನ್ಯ ದಾಯಕ ಬಾಲ್ಯದ ಮೇಲೆ ದೌರ್ಜನ್ಯ ಎಸಗುವುದು ಸರಿ ಅಲ್ಲ . ಮಕ್ಕಳು ಪ್ರೀತಿಯ, ಮಮತೆಯ ಮಡಿಲಲ್ಲಿ ಸುಖ ಕಂಡು ಸರಿಮಾರ್ಗದಲ್ಲಿ ನಡೆಯುತ್ತಾರೆ. ನಿಮ್ಮ ಕೋಪ ತಾಪ, ಬೇಸರ, ಹೊಡೆತ ಕ್ಷಣಿಕ ಬದಲಾವಣೆಯಿರ ಬಹುದಷ್ಟೆ.
ಇತ್ತೀಚೆಗೆ ಪಾಲಕರು ಹೆಣ್ಣು ಗಂಡು ಎನ್ನುವ ಭೇದವಿಲ್ಲದೆ. ಮಕ್ಕಳ ಭವಿಷ್ಯವನ್ನು ಕಲ್ಪಿಸುತ್ತಾರೆ. ಗಂಡು ಮಗುವಿನ ತೀವ್ರ ಮೋಹ ಕಡಿಮೆ ಆಗಿದೆ.ಲಿಂಗಪತ್ತೆ, ಹೆಣ್ಣುಭ್ರೂಣಹತ್ಯೆಯಂತಹ ಅಪರಾಧಗಳು ಕಡಿಮೆ ಆಗುತ್ತಿರುವುದು ಸಂತೋಷ ದಾಯಕ ಬೆಳವಣಿಗೆ. ಆದಿಯಿಂದಲೂ ಹೆಣ್ಣಿಗೆ ನದಿ, ಸಂಪತ್ತು, ಹೂ, ಭೂಮಿ, ಪ್ರಕೃತಿ, ಧನ-ಕನಕ ಮೊದಲಾದ ಅಮೂಲ್ಯ ವಸ್ತುಗಳಿಗೆ ಹೋಲಿಸುತ್ತಿದ್ದರು. ಸಹನೆ ಸಾಧನೆ, ತಾಳ್ಮೆಗಳಲ್ಲಿ ಎತ್ತಿದ ಕೈಯವಳು. ಆದರೆ ಶೌರ್ಯ, ವೀರತ್ವ, ಪರಾಕ್ರಮದಲ್ಲಿ ಎಲ್ಲರನ್ನು ಮೀರಿದ ಮಮತಾಮಯಿ ಹೃದಯ.
ಜನವರಿ 24 ರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಕೆಲವೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂಭ್ರಮದ ನಡುವೆ ಎಲ್ಲೋ ವರದಕ್ಷಿಣೆ, ಹೆಣ್ಣು ಭ್ರೂಣಹತ್ಯೆ, ಹೆಣ್ಣುಮಕ್ಕಳ ಶೋಷಣೆ, ಬಲಾತ್ಕಾರಗಳಂತಹ ಕ್ರೂರ ಕೃತ್ಯದಂತ ಸಂಕಷ್ಟಗಳಿಗೆ ಮುಗ್ದ ಜೀವಗಳು ಇನ್ನೂ ಬಲಿಯಾಗುತ್ತಿದೆ.
ಎನೆ ಕಲಿಸುವುದಿದ್ದರು ಮೆಚ್ಚುಗೆಯಿಂದ ಹೆಮ್ಮೆ ಯಿಂದ ಕಲಿಸಬೇಕು. ಹೆಣ್ಣಾದ ಕಾರಣಕ್ಕೆ ಅಡುಗೆ, ಮನೆ ಕೆಲಸ ನೀನು ಕಲಿಯಲೇ ಬೇಕು ಎಂದು ಕಡ್ಡಾಯ ಮಾಡುವುದಕ್ಕಿಂತ ಸ್ವಂತ ವ್ಯಕ್ತಿತ್ವ ಬೆಳೆಸುಕೊಳ್ಳಲು ಪರಾಧೀನತೆಯಿಲ್ಲದೆ ಸ್ವತಂತ್ರ ಬಾಳನ್ನು ಬದುಕಲು ಕಲಿಯಲು ಕೆಲಸಗಳನ್ನು ಗಂಡು ಹೆಣ್ಣು ಇಬ್ಬರೂ ಕಲಿಯಬೇಕು ಎನ್ನುವ ಅರಿವು ಬೇಳೆಸುವುದು ಉತ್ತಮ.
ಭಾರತ ಮಾತೆಯರ ಹೆಮ್ಮೆಯ ಪುತ್ರಿಯರಾಗಿ ಬಾಳಿ ಬೆಳಗಿ ಹೆಚ್ಚಿನ ಯಶಸ್ಸುಗಳಿಸಿ ಕೀರ್ತಿಶಾಲಿಗಳಾಗಲಿ ಎಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಈ ಶುಭ ದಿನದಲ್ಲಿ ಹಾರೈಕೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ