ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿರುವ ಆಳ್ವಾಸ್ ಶಿಕ್ಷಣ ಫೌಂಡೇಷನ್ (ಎಇಎಫ್) ಕ್ಯಾಂಪಸ್ನಲ್ಲಿ ಡಿಸೆಂಬರ್ 21 ರಿಂದ 27 ವರೆಗೆ ಭಾರತದ ಮೊದಲ ಅಂತಾರಾಷ್ಟ್ರೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಜಾಂಬೂರಿ ನಡೆಯಲಿದೆ. ಈ ಜಾಂಬೂರಿಯಲ್ಲಿ 50,000 ಸ್ಕೌಟ್ಸ್ ಹಾಗೂ ಗೈಡ್ ಗಳು ಸೇರಿದಂತೆ ಒಟ್ಟು 63,000 ಮಂದಿ ಭಾಗವಹಿಸಲಿದ್ದಾರೆ.
10 ದೇಶಗಳಿಂದ 10,000 ಮಂದಿ ತರಬೇತಿ ನೀಡುವವರು ಹಾಗೂ 3,000 ಮಂದಿ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇದೇ ಮೊದಲು ಎನ್ನಲಾಗಿದೆ. ಈ ಕಾರ್ಯಕ್ರಮದ ಕುರಿತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. “ಈ ಜಾಂಬೂರಿಯಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಮೇಳಗಳು ಇರಲಿವೆ. ಕೃಷಿ ಮೇಳ, ವಿಜ್ಞಾನ ಮೇಳ, ಆಹಾರ ಮೇಳ ಸೇರಿದಂತೆ ವಿವಿಧ ಮೇಳಗಳು ಇರಲಿವೆ. ಸುಮಾರು ಏಳು ಎಕರೆ ಪ್ರದೇಶದಲ್ಲಿ ಈ ಮೇಳ ನಡೆಯಲಿದೆ. 42 ಬಗೆಯ ಸಾಹಸ ಕಸರತ್ತುಗಳು ಇರಲಿವೆ. ತೋಟಗಾರಿಕಾ ಬೆಳೆಗಳು, ತರಕಾರಿ ಬೆಳೆಗಳು, ವೈವಿಧ್ಯಮಯ ಭತ್ತದ ತಳಿಗಳನ್ನು ಪರಿಚಯಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವಿದೆʼʼ ಎಂದು ಡಾ ಎಂ. ಮೋಹನ್ ಆಳ್ವ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಆಗಮನ ನಿರೀಕ್ಷೆ
ದೇಶದ ಮೊದಲ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆಯಿದೆ. “ಜಾಂಬೂರಿಯ ಕುರಿತು ಪ್ರಧಾನ ಮಂತ್ರಿಗಳ ಕಾರ್ಯಾಲಯವು ಮಾಹಿತಿ ಕೇಳಿದ್ದು, ಪೂರಕ ಮಾಹಿತಿ ಒದಗಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, 100 ಎಕರೆಯ ವ್ಯಾಪ್ತಿಯಲ್ಲಿರುವ ಆಳ್ವಾಸ್ ಕ್ಯಾಂಪಸ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟ ಹಾಗೂ ಇತರ ಅಂಶಗಳನ್ನು ತಿಳಿಸುವುದಕ್ಕೆ ಜಂಗಲ್ ಟ್ರಯಲ್ ಗಾಗಿ ಅರಣ್ಯ ಪ್ರದೇಶವನ್ನು ಸಿದ್ಧಗೊಳಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಗಣ್ಯರು, ನಮ್ಮ ಎಲ್ಲಾ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನೆಯ ವೇಳೆ ಆಕರ್ಷಕ ಪಥಸಂಚಲನ ನಡೆಯಲಿದೆ. ದೇಶದ ನಾನಾ ರಾಜ್ಯಗಳ ಸಾವಿರಾರು ಕಲಾವಿದರು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಅನಾವರಣ ಮಾಡಲಿದ್ದಾರೆ ಎಂದು ಡಾ ಎಂ. ಮೋಹನ್ ಆಳ್ವ ಹೇಳಿದ್ದಾರೆ. ಯೋಗವೂ ಇದೆ. ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನರು ಕುಳಿತು ವೀಕ್ಷಿಸಬಹುದಾದ ಬೃಹತ್ ಬಯಲು ರಂಗಮಂಟಪ, ವೇದಿಕೆ ಸಿದ್ಧಪಡಿಸಲಾಗಿದೆ. ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗ ಮತ್ತು ಧ್ಯಾನ ನಡೆಸಲಿದ್ದಾರೆ. ಶಂಕರ ಮಹಾದೇವನ್, ವಿಜಯ್ ಪ್ರಕಾಶ್ ಸೇರಿದಂತೆ ಖ್ಯಾತ ಸಂಗೀತ ಕಲಾವಿದರ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಣ್ಣು, ಮರ, ಲೋಹ, ಶಿಲ್ಪ ಕಲಾವಿದರು ಸ್ಥಳದಲ್ಲಿಯೇ ಶಿಲ್ಪ ಕಲಾಕೃತಿಗಳನ್ನು ರಚಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೂಡುಬಿದಿರೆಯದು. ಸಂಪರ್ಕಿಸುವ ಪ್ರಮುಖ 4 ರಸ್ತೆಗಳ 165 ಕಿ. ಮೀ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ನಡೆಯಲಿದೆ. ಸಾವಿರಕ್ಕೂ ಅಧಿಕ ಗಾಳಿಪಟಗಳ ಪ್ರದರ್ಶನ, ಗೊಂಬೆಯಾಟವೂ ನಡೆಯಲಿದೆ. ಕ್ಯಾಂಪಸ್ಗೆ ಹೊಂದಿಕೊಂಡಿರುವ ಖಾಸಗಿ ಅರಣ್ಯದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅರಣ್ಯವನ್ನು ಪರಿಚಯಿಸುವ ಕೆಲಸವನ್ನೂ ನಡೆಸಲಾಗುವುದು. ಇಪತ್ತು ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.