ಬಂಟ್ವಾಳ ತಾಲೂಕಿನ ಅನಂತಾಡಿ ಒಂದು ಪುಟ್ಟ ಗ್ರಾಮ.ಅಲ್ಲೊಂದು ಶಿಕ್ಷಕ ಪರಂಪರೆಯ ಕುಟುಂಬ.ಆ ಕುಟುಂಬದ ಓರ್ವ ಪ್ರತಿಭಾನ್ವಿತ ವ್ಯಕ್ತಿ ಕೆ.ಎನ್.ಗಂಗಾಧರ ಆಳ್ವರು.ಇವರ ತಂದೆ ನಾರಾಯಣ ಆಳ್ವರು ಶಿಕ್ಷಕರು.ಅಜ್ಜ ಸುಬ್ಬಣ್ಣ ಆಳ್ವರೂ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು.
ಗಂಗಾಧರ ಆಳ್ವರು ತನ್ನ ಶಾಲಾ ದಿನಗಳಿಂದಲೇ ಪಾಠ- ಪಾಠೇತರ ಚಟುವಟಿಕೆಗಳಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದುಕೊಂಡು ಮಿಂಚಿದವರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಪೂರೈಸಿದ ತರುವಾಯ, ಪದವಿ ಶಿಕ್ಷಣ ಓದುತ್ತಿದ್ದಾಗ ಅಂತಿಮ ವರ್ಷದ ಬಿ.ಎ.ಯಲ್ಲಿ ಪುತ್ತೂರು ತಾಲೂಕಿಗೇ ಪ್ರಥಮ ಸ್ಥಾನ,ವಿಶ್ವ ವಿದ್ಯಾಲಯದಲ್ಲಿ ಎಂ.ಎ ಅರ್ಥಶಾಸ್ತ್ರದಲ್ಲಿ ಮೂರನೇ ರಾಂಕ್ ನೊಂದಿಗೆ ಯಶಸ್ವಿಯಾಗಿ ಪೂರೈಸಿದ ತರುವಾಯ ಬೇರೆ ಬೇರೆ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೧೯೯೨ ರಿಂದ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಿಯುಕ್ತರಾದರು. ೧೯೯೫ ರಲ್ಲಿ ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಪದೋನ್ನತಿ ಪಡೆದರು. ಬಹುಶಃ ಇಡೀ ರಾಜ್ಯದಲ್ಲಿ ಆಗ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅತ್ಯಂತ ಹಿರಿಯ ಜವಾಬ್ದಾರಿಯನ್ನು ವಹಿಸಿಕೊಂಡು ಮುನ್ನಡೆಸಿದವರಲ್ಲಿ ಪ್ರಮುಖರು. ಪ್ರಾಮಾಣಿಕತನ,ಅಚ್ಚುಕಟ್ಟುತನ, ದಕ್ಷ ಆಡಳಿತಗಾರನಾಗಿದ್ದು ಶಿಸ್ತಿನಲ್ಲಿ ರಾಜಿ ಮಾಡಿಕೊಳ್ಳದ ಆದರೆ ವಿದ್ಯಾರ್ಥಿಗಳಲ್ಲಿ ಮತ್ತು ಸಹೋದ್ಯೋಗಿಗಳಲ್ಲಿ ಅಷ್ಟೇ ಕಾಳಜಿಯಿಂದ ಇರುವ ಸಹೃದಯೀ ವ್ಯಕ್ತಿತ್ವ ಇವರದ್ದು. ಸಾಮಾನ್ಯವಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಅಲ್ಪಸಂಖ್ಯಾತ ವರ್ಗದವರನ್ನೇ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಗಂಗಾಧರ ಆಳ್ವರ ಅದ್ವಿತೀಯ ಶೈಕ್ಷಣಿಕ ಸಾಧನೆ, ಎಲ್ಲರನ್ನೂ ಸಮಾನ ಮನೋಭಾವದಿಂದ ನೋಡಿಕೊಳ್ಳುವ ಗುಣ, ಆಡಳಿತಾತ್ಮಕ ನೈಪುಣ್ಯತೆಯೇ ಮುಂತಾದ ಗುಣ ವಿಶೇಷಗಳನ್ನು ಕಂಡ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಯು ಇವರನ್ನು ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತಿಗೊಳಿಸಿರುವುದು ಇವರ ನಿಸ್ಪೃಹ ಸೇವೆಗೆ ಸಂದ ಗೌರವವಾಗಿದೆ. ಅಲ್ಲದೆ ಇವರ ಅಹರ್ನಿಶಿಯಾದ ಸಮರ್ಪಕ ಕಾಯಕವು ವಿದ್ಯಾರ್ಥಿ ವೃಂದ,ಸಿಬ್ಬಂದಿ ವರ್ಗ ಹಾಗೂ ಊರ ಪರವೂರ ಮಂದಿಗಳಿಗೆ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಲೇಜು ತರಗತಿಗಳು ಪ್ರಾರಂಭವಾಗುವುದಕ್ಕೆ ಮುಂಚಿತಾವಾಗಿ ಬೆಳಗ್ಗೆ ೯ ಗಂಟೆಗೆ ನಿತ್ಯ ಆಗಮಿಸುವ ಪ್ರಾಂಶುಪಾಲರು ಸಾಯಂಕಾಲ ಎಲ್ಲಾ ವಿದ್ಯಾರ್ಥಿಗಳು ಮತ್ತು ಬೋಧಕರು ಮನೆಗೆ ತೆರಳಿದ ನಂತರವೇ ಹೋಗುವ ಪರಿಪಾಠ ಇವರದ್ದು. ರಕ್ಷಕ-ಶಿಕ್ಷಕ ಸಂಘ, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದದವರೊಂದಿಗೆ ಉತ್ತಮ ಆದರ್ಶಮಯ ಬಾಂಧವ್ಯವನ್ನು ಇರಿಸಿಕೊಂಡಿರುವ ಗಂಗಾಧರ ಆಳ್ವರು ಜಿಲ್ಲೆಯ ಹಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಉತ್ತಮವಾದ ಸಲಹೆ, ಸೂಚನೆ, ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಒಳ್ಳೆಯ ಸಲಹೆ ಸೂಚನೆಗಳು ಯಾರಿಂದ ಬಂದರೂ ಅದನ್ನು ಸ್ವೀಕರಿಸಿ ಅನುಷ್ಠಾನಕ್ಕೆ ತರುವ ದೊಡ್ಡ ಗುಣವೂ ಶ್ರೀಯುತರಲ್ಲಿದೆ. ಜಿಲ್ಲೆಯ ಹಲವು ಸಂಘ-ಸಂಸ್ಥೆಗಳಲ್ಲಿ ನಾನಾ ಜವಾಬ್ದಾರಿಗಳಲ್ಲಿದ್ದು ಪ್ರಸ್ತುತ ದ.ಕ.ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಶ್ರಮಿಸುತ್ತಾ ಶಿಕ್ಷಕ ಸಮೂಹದ ಬೇರೆ ಬೇರೆ ಸಮಸ್ಯೆಗಳಿಗೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾಕಷ್ಟು ವಿಧದ ಹೋರಾಟ ಮಾಡಿರುವ ಇವರು ಓರ್ವ ಪರೋಪಕಾರೀ ನಾಯಕತ್ವದ ಸದ್ಗುಣವುಳ್ಳ ನಿಷ್ಕಳಂಕ ವ್ಯಕ್ತಿಯಾಗಿರುತ್ತಾರೆ.
ತಾನು ಶ್ರಮಿಸುವ ಸಂಸ್ಥೆಯ ನೂರಾರು ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯವಾಗಲು,ಪಿಟಿಎ ಜೊತೆಗೂಡಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ಸ್ಕಾಲರ್ ಶಿಪ್ ಸ್ಥಾಪಿಸಿದ ಹೆಗ್ಗಳಿಕೆ ಇವರದ್ದು.ಕಾಲೇಜಿನ ಹಲವಾರು ಬಡ ವಿದ್ಯಾರ್ಥಿಗಳಿಗೆ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಫೀಸು ಪಾವತಿಸಲು ನಡೆಸಿದ ಇವರ ಪ್ರಯತ್ನ ಶ್ಲಾಘನೀಯವಾಗಿದೆ. ಅಲ್ಲದೆ ಆಡಳಿತ ಮಂಡಳಿಯ ಪ್ರಯತ್ನದೊಂದಿಗೆ ಗಲ್ಫ್ ಮೆಡಿಕಲ್ ಕಾಲೇಜಿನಲ್ಲಿ ಪ್ರತೀ ವರ್ಷ ತುಂಬೆ ಪಿ.ಯು.ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಅರ್ಹ ಪ್ರತಿಭಾನ್ವಿತ ಬಡವರಿಗೆ ಉಚಿತವಾಗಿ ಎಂ.ಬಿ.ಬಿ.ಎಸ್ ಪೂರೈಸಲು ಮೆಡಿಕಲ್ ಸೀಟನ್ನು ಒದಗಿಸಿ ಕೊಡುವಲ್ಲಿನ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ. ಕಾಲೇಜು ಪ್ರಾರಂಭವಾಗಿ ಈ ತನಕ ನಿರಂತರವಾಗಿ ಅನೇಕ ಬಾರಿ ೧೦೦ ಶೇಕಡಾ ಫಲಿತಾಂಶದೊಂದಿಗೆ ಅತ್ಯುತ್ತಮ ಫಲಿತಾಂಶ ಕಾಯ್ದುಕೊಳ್ಳುವಲ್ಲಿ ವರ್ಷವೂ ನವಂಬರ ತಿಂಗಳಾದಿಯಿಂದ ತನ್ನ ಸಹೋದ್ಯೋಗಿಗಳೊಂದಿಗೆ ದಿನಾ ಇಳಿಹೊತ್ತು ಸುಮಾರು ಎರಡು ಗಂಟೆಗಳ ಕಾಲ ಉಚಿತವಾಗಿ ಪರೀಕ್ಷಾ ವಿಶೇಷ ತರಬೇತಿ ತರಗತಿಗಳನ್ನು ನಡೆಸುತ್ತಾ ಬಂದಿರುವುದು ಅನೇಕ ಸಂಸ್ಥೆಗಳಿಗೆ ಮಾದರಿಯಾಗಿದೆ.
ಒಟ್ಟಿನಲ್ಲಿ ಕೆ.ಎನ್.ಗಂಗಾಧರ ಆಳ್ವರು ಅವರ ಸರಳ ಸ್ನೇಹಮಯೀ ವ್ಯಕ್ತಿತ್ವದಿಂದ ಮೇಲ್ನೋಟಕ್ಕೆ ಓರ್ವ ಸಾಮಾನ್ಯ ಪ್ರಾಂಶುಪಾಲರಾಗಿ ಕಂಡರೂ, ಓರ್ವ ಅದ್ಭುತ ಪ್ರತಿಭೆಯ ಕ್ರಿಯಾಶೀಲ ಉಪನ್ಯಾಸಕ ಹಾಗೂ ಪ್ರಾಂಶುಪಾಲರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಹಲವಾರು ಸಮಾಜಮುಖೀ ಕಾರ್ಯಕ್ರಮಗಳಲ್ಲಿ,ಸಂಘಟಕರಾಗಿದ್ದು, ಜನೋಪಯೋಗೀ ಕಾರ್ಯಕ್ರಮಗಳಿಗೆ ಜವಾಬ್ದಾರಿಯುತ ಕೊಡುಗೆಗಳನ್ನು ಕೊಡುತ್ತಾ ಸಮಾಜಕ್ಕೆ ಎಲ್ಲರಿಗೂ ಬೇಕಾದವರಾಗಿದ್ದಾರೆ.
ಈಗಾಗಲೇ ಶಾಂರಾವ್ ಫೌಂಡೇಶನ್ ವತಿಯಿಂದ ಉತ್ತಮ ಉಪನ್ಯಾಸಕ ಪ್ರಶಸ್ತಿ, ಹಲವು ಸಂಘ ಸಂಸ್ಥೆಗಳ ಸನ್ಮಾನ ಪುರಸ್ಕಾರಕ್ಕೆ ಭಾಜನರಾಗಿರುವ ಕೆ.ಎನ್.ಗಂಗಾಧರ ಆಳ್ವರಿಗೆ ಇದೀಗ ಕರ್ನಾಟಕ ಸರಕಾರದ ವತಿಯಿಂದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ-೨೦೨೨ ನ್ನು ಸರಕಾರ ಘೋಷಣೆ ಮಾಡಿದ್ದು ಇದು ಇವರ ನೈಜ ಅರ್ಹತೆಗೆ ಸಂದ ಗೌರವವೇ ಸರಿ. ಈ ಪ್ರಶಸ್ತಿ ಹಾಗೂ ಅಭಿನಂದನಾ ಸನ್ಮಾನವನ್ನು ದಿನಾಂಕ ೧೩-೧೧-೨೦೨೨ ರಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಂದ ಗಣ್ಯರುಪಸ್ಥಿಯಲ್ಲಿ ಬೆಂಗಳೂರಿನಲ್ಲಿ ಸ್ವೀಕರಿಸಿದ್ದಾರೆ. ತನ್ನ ಸಾಧನೆಗೆ ಸಿಕ್ಕ ಈ ಪ್ರತಿಷ್ಠಿತ ಗೌರವವನ್ನು ಗಂಗಾಧರ ಆಳ್ವರು ತನ್ನ ಸೇವೆಗೆ ಪ್ರತ್ಯಕ್ಷ- ಪರೋಕ್ಷ ಸಹಕಾರ ನೀಡುತ್ತಾ ಬಂದ ತನ್ನ ಸಂಸ್ಥೆಯ ಸಂಸ್ಥಾಪಕರಾದ ಬಿ.ಅಹಮ್ಮದ್ ಹಾಜೀ ಮುಹಿಯಯದ್ದೀನ್, ಅಧ್ಯಕ್ಷರಾದ ಬಿ.ಅಬ್ದಲ್ ಸಲಾಂ, ಸಹೋದ್ಯೋಗಿಗಳು, ವಿದ್ಯಾರ್ಥಿ ವೃಂದ ಹಾಗೂ ಹಿತೈಷಿಗಳನ್ನು ಕೃತಜ್ಞತಾಪೂರ್ವಕ ಸ್ಮರಿಸಿಕೊಳ್ಳುತ್ತಾರೆ.
ಶ್ರೀಯುತರಿಗೆ ನಮ್ಮ ಶಿಕ್ಷಕ ವೃಂದವು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವುದಲ್ಲದೆ ಅವರ ಸೇವಾ ಕೈಂಕರ್ಯ ವೈವಿಧ್ಯಮಯವಾಗಿ ಸಮಾಜಕ್ಕೆ ಇನ್ನಷ್ಟು ವಿಧಗಳಲ್ಲಿ ಹರಿದು ಬರುವಲ್ಲಿ ಆಯುರಾರೋಗ್ಯ ಪ್ರಾಪ್ತಿಸಲಿ ಎಂದು ಹೃದಯತುಂಬಿ ಹಾರೈಸುತ್ತದೆ.