ಮುಂಬಯಿ (ಆರ್ ಬಿ ಐ ), ಅ.01: ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಹುಟ್ಟೂರು ಬೆಳ್ತಂಗಡಿ ಪಣಕಜೆಗೆ ಭೇಟಿಯನ್ನಿತ್ತ ವಿಜಯ್ ಎಸ್.ಶೆಟ್ಟಿ ಪಣಕಜೆ ಇವರಿಗೆ ತವರೂರ ಜನತೆ ಸನ್ಮಾನಿಸಿ ಗೌರವಿಸಿದರು.
ಕಳೆದ ಸುಮಾರು ನಾಲ್ಕು ದಶಕಗಳಿಂದ ಮುಂಬಯಿಯಲ್ಲಿದ್ದು, ಇದೀಗ ಪ್ರತಿಷ್ಠಿತ ಉದ್ಯಮಿಯಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡು, ಯುವ ರಾಜಕೀಯ ನೇತಾರರಾಗಿ ಪದೋನ್ನತ ವಿಜಯ್ ಶೆಟ್ಟಿ ಪಣಕಜೆ ಕಳೆದ ಗುರುವಾರ ಸಂಜೆ ತವರೂರ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆಯೇ ಸೋಣಂದೂರು ಗ್ರಾಮಸ್ಥರು ಭವ್ಯವಾಗಿ ಸ್ವಾಗತಿಸಿ ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಸಲಾದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಕಾಂತ್ ಶೆಟ್ಟಿ ಮುಂಡಾಡಿ ಅಧ್ಯಕ್ಷತೆಯಲ್ಲಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಲ್ಪಸಂಖ್ಯಾತರ ಮೋರ್ಚಾದ ದ.ಕ ಜಿಲ್ಲಾಧ್ಯಕ್ಷ ಜೋಯಲ್ ಮೆಂಡೋನ್ಸಾ , ಬಿಜೆಪಿ ಬೆಳ್ತಂಗಡಿ ಕಾರ್ಯದರ್ಶಿ ಪ್ರಶಾಂತ್ ಮಡಂತ್ಯಾರು, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬೇಬಿ ಸುಸಾನ, ಉಪಾಧ್ಯಕ್ಷ ದಿನೇಶ್ ಕರ್ಕೇರ, ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸನ್ಮಾನಿಸಿ ಅಭಿನಂದಿಸಿದರು.
ಶ್ರೀ ಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದು, ಕೆಎಂಫ್ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.