ಮುಂಬಯಿ (ಆರ್ ಬಿ ಐ), ಜು.30: ಮುಂಬಯಿ ಕರ್ನಾಟಕ ಸಂಘ, ಮುಂಬಯಿ ಇದರ 86 ಮತ್ತು 87ನೇ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ನ ಕಿರು ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಮನೋಹರ್ ಎಂ ಕೋರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
1933ರಲ್ಲಿ ಸ್ಥಾಪಿತ ಹೊರನಾಡ ಕನ್ನಡಿಗರ ಪ್ರಾತಿನಿಧಿಕ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ 89ರ ಸೇವಾವಧಿಯ ಹಿರಿಯ ಸಂಸ್ಥೆ sಸದ್ಯ 7 ಸಂಘ ಸಂಸ್ಥೆಗಳ ಸದಸ್ಯತ್ವವುಳ್ಳ, 45 ಮಹಾ ಪೋಷಕರು , 37 ಪೋಷಕರು, 3401 ಅಜೀವ ಸದಸ್ಯರು ಹೊಂದಿರುವ ಹೊರನಾಡ ಕನ್ನಡಿಗರ ಹಿರಿಯ ಸಂಸ್ಥೆಯಾಗಿದೆ. ಮಹಾರಾಷ್ಟ್ರದ ಬಹುಭಾಷಿಕ ನೆಲದಲ್ಲಿ ಕನ್ನಡಿಗರು, ಕನ್ನಡ-ಮರಾಠಿ ಭಾಷಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿರುವ ಹಿರಿಯ ಮತ್ತು ಪ್ರತಿಷ್ಠಿತ ಸಂಸ್ಥೆಯಾಗಿದೆ ಎಂದು ಮನೋಹರ್ ಎಂ.ಕೋರಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ತಿಳಿಸಿದರು.
ಕೊರೋನಾ ಪಿಡುಗುವಿನಿಂದಾಗಿ ಸಂಘದ ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣ ಕೆಲಸ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಆದರೂ ನಿರ್ಮಾಣ ಕೆಲಸ ಸ್ಥಗಿತಗೊಳಿಸಿಲ್ಲ. ಸದ್ಯ ಕಾಮಗಾರಿಯು ಶೀಘ್ರಗತಿಯಲ್ಲಿ ನಡೆಯುತ್ತಿದ್ದು, 2023ನೇ ಜುಲೈ ಅಂತ್ಯಕ್ಕೆ ನೆಲಹಂತ ಪೂರ್ಣಗೊಳ್ಳಲಿದೆ. ಮುಂದಿನ ಹಂತದ ಕಾಮಗಾರಿ ಮತ್ತಷ್ಟು ವೇಗದಲ್ಲಿ ನಡೆಸಲಾಗಿ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಸಭಾಗೃಹ ಉದ್ಘಾಟನೆ ಮಾಡಬೇಕೆಂಬುದು ನಮ್ಮೆಲ್ಲರ ಸಂಕಲ್ಪವಾಗಿದೆ. ಕರ್ನಾಟಕ ಸಂಘವು ಈ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ಜರಗಿಸುತ್ತಾ ಬಂದಿದ್ದು ಸಂಘದ ಸಾಂಸ್ಕೃತಿಕ ಸಮುಚ್ಚಯದ ಯೋಜನೆಗೆ ಕನ್ನಡಿಗರೆಲ್ಲರೂ ಸಹೃದಯಿಗಳಾಗಿ ದೇಣಿಗೆ ನೀಡ ನಮ್ಮೊಂದಿಗೆ ಕೈಜೋಡಿಸಬೇಕಾಗಿ ವಿನಂತಿ. ನೂತನವಾಗಿ ರೂಪುಗೊಳ್ಳುವ ಸಾಂಸ್ಕೃತಿಕ ಸಮುಚ್ಚಯವು ಬೇಗನೆ ಹೊಸ ವಿನ್ಯಾಸದೊಂದಿಗೆ ಮೂಡಿ ಬರಲಿದ್ದು ಮತ್ತೆ ಸಂಘದ ಗತವೈಭವ ಮರುಕಳಿಸಲಿದೆ ಎಂದೂ ಎಂ. ಎಂ ಕೋರಿ ನುಡಿದರು.
ಸಂಘದ ಗೌ| ಪ್ರ| ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಗೌ| ಜತೆ ಕೋಶಾಧಿಕಾರಿ ಎನ್.ಎಂ ಗುಡಿ, ಕಾರ್ಯಕಾರಿ ಸಮಿತಿ ಸದಸ್ಯಯ ಹಿರಿಯ ಡಾ| ಭರತ್ಕುಮಾರ್ ಪೊಲಿಪು ವೇದಿಕೆಯಲ್ಲಿ ಆಸೀನರಾಗಿದ್ದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಮರೇಶ್ ಸಿ.ಪಾಟೀಲ್, ಡಾ| ಜಿ.ಪಿ ಕುಸುಮ, ಎಂ.ಡಿ ರಾವ್, ಸುಂದರ್
ಸಿ.ಕೋಟ್ಯಾನ್, ಸೋಮನಾಥ ಹಲಗತ್ತಿ, ರಾಜೀವ ನಾಯಕ್, ಡಾ| ದುರ್ಗಪ್ಪ ವೈ.ಕೋಟ್ಯಾವರ್ ಸೇರಿದಂತೆ ಸದಸ್ಯ್ರನೇಕರು ಹಾಜರಿದ್ದರು. ಸದಾನಂದ ಅವಿೂನ್ ಸಂಘದ 2020-2023 ನೇ ಸಾಲಿನ ಚುನಾವಣಾ ಫಲಿತಾಂಶ ಪ್ರಕಟಿಸಿದರು. ಸಭಿಕರಲ್ಲಿನ ಡಾ| ಬಿ.ಆರ್ ಮಂಜುನಾಥ್, ಸಾ.ದಯಾ (ದಯಾನಂದ್), ಕೆ.ಮಂಜುನಾಥಯ್ಯ, ಮೋಹನ್ ಮಾರ್ನಾಡ್, ಅವಿನಾಶ್ ಕಾಮತ್ ಮಾತನಾಡಿ ತಮ್ಮ ಸಲಹೆ, ಸೂಚನೆಗಳನ್ನಿತ್ತರು.
ಗತಸಾಲಿನಲ್ಲಿ ಅಗಲಿದ ಸಂಘದ ಸದಸ್ಯರು, ಹಿತೈಷಿಗಳು ಮತ್ತು ನಾಡಿನ ಗಣ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎನ್.ಎಂ ಗುಡಿ ಸಂಘದ ಗತ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಓಂದಾಸ್ ಕಣ್ಣಂಗಾರ್ ಸ್ವಾಗತಿಸಿ ಸಂಘದ 85 ನೇ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು ತಿಳಿಸಿನೂತನ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣ ಪ್ರಗತಿಯ ಮಾಹಿತಿಯನ್ನಿತ್ತು ವಂದಿಸಿದರು.