ನಾವು ಬಂಟರ ಮನೆತನದವರು ಎಂದು ಸದಾ ಹೇಳಲು ಪ್ರೌಢಿಮೆ (ಸ್ವಾಭಿಮಾನ) ಆಗುತ್ತದೆ. ನನ್ನ ಈ ಮಟ್ಟದ ಯಶಸ್ಸಿಗೆ ಸ್ವಸಮುದಾಯದಲ್ಲಿ ಪ್ರೀತಿ ಮತ್ತು ಸಹಾನುಭೂತಿ ಹಂಚಿಕೊಳ್ಳಲು ಅಭಿಮಾನ ಪಡುತ್ತೇನೆ. ನಾನು ಸಾಮಾಜಿಕ, ಶೈಕ್ಷಣಿಕ ಸೇವಾಂಕ್ಷಿಯಾಗಲು ಇಷ್ಟಪಡುತ್ತಿದ್ದು ಬಂಟರ ಸಂಘ ಮುಂಬಯಿ ಬೃಹತ್ ಪರಿಗಣಿತ ವಿಶ್ವವಿದ್ಯಾಲಯ (ಡೀಮ್ಡ್ ಯುನಿವರ್ಸಿಟಿ) ನಿರ್ಮಿಸುವ ಕನಸು ಕಂಡಿದ್ದೇನೆ. ಅದರಿಂದ ಬಂಟರ ಮತ್ತು ನಾಡಿನ ಭಾವೀ ಯುವ ಪೀಳಿಗೆಯ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆಯುವ ಆಶಯ ಕಂಡಿದ್ದೇನೆ ಎಂದು ಬಂಟ ಸಮುದಾಯದ ಹಿರಿಯ ಧುರೀಣ, ಪ್ರತಿಷ್ಠಿತ ಉದ್ಯಮಿ, ಕೊಡುಗೈದಾನಿ ಎಸ್.ಎಂ ಸಮೂಹದ ಕಾರ್ಯಾಧ್ಯಕ್ಷ ಎಸ್.ಎಂ ಶೆಟ್ಟಿ ತಿಳಿಸಿದರು. ಬಂಟರ ಸಂಘ ಮುಂಬಯಿ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಸಂಭ್ರಮಿಸಿದ ವಾರ್ಷಿಕ ಸ್ನೇಹ ಸಮ್ಮಿಲನ ಸಂಭ್ರಮ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸಮ್ಮಾನ, ವೈವಿಧ್ಯಮಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಬಂಟ್ಸ್ ಬೊರಿವಿಲಿ ಶಿಕ್ಷಣ ಯೋಜನೆಗೆ ಸಾಂಕೇತಿಕವಾಗಿ ಚಾಲನೆಯನ್ನಿತ್ತು, ಬಂಟರ ಸಂಘವು ಕೊಡಮಾಡಿದ ‘ಜೀವಮಾನ ಸಾಧನಾ ಶ್ರೇಷ್ಠ ಪ್ರಶಸ್ತಿ’ ಸ್ವೀಕರಿಸಿ ಎಸ್.ಎಂ ಶೆಟ್ಟಿ ಮಾತನಾಡಿದರು. ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ ಅದ್ದೂರಿ ಸಡಗರದಲ್ಲಿ ಚರಿಷ್ಮಾ ಬಿಲ್ಡರ್ಸ್ನ ಕಾರ್ಯಾಧ್ಯಕ್ಷ ಸುಧಿರ್ ವಿ.ಶೆಟ್ಟಿ ಮುಖ್ಯ ಅತಿಥಿಯಾಗಿದ್ದು ಬಂಟ್ಸ್ ಫ್ಯಾಮಿಲಿ ಎಡಾಪ್ಶನ್ (ಆರ್ಥಿಕ ಅಶಕ್ತ ಕುಟುಂಬಗಳ ದತ್ತು ಸ್ವೀಕಾರ) ಯೋಜನೆಗೆ ನಾಮ ಫಲಕ ಅನಾವರಣಗೊಳಿಸಿ ಚಾಲನೆಯನ್ನಿತ್ತರು. ಅತಿಥಿಯಾಗಿ ಅಭ್ಯಾಗತರಾಗಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಬಂಟ್ಸ್ ಡಿಜಿಟಲ್ ವರ್ಲ್ಡ್ ಪ್ರವೇಶದ ಮೊಬೈಲ್ ಆ್ಯಪ್, ಎಂ ಆರ್ ಜಿ ಹಾಸ್ಪಿಟಾಲಿಟಿ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಅವರು ಬಂಟ್ಸ್ ಪ್ರತಿಭಾನ್ವಿತರ ಪ್ರೋತ್ಸಾಹಕ್ಕಾಗಿನ ಬಂಟ್ಸ್ ಟ್ಯಾಲೆಂಟ್ ಎಡಾಪ್ಶನ್ (ಪ್ರತಿಭಾನ್ವಿತರ ದತ್ತು ಸ್ವೀಕಾರ) ಯೋಜನೆಗೆ ನಾಮ ಫಲಕ ಅನಾವರಣಗೊಳಿಸಿ ಚಾಲನೆಯನ್ನಿತ್ತರು. ಬೋರಿವಿಲಿ ಶಿಕ್ಷಣ ಯೋಜನೆ ಬಗ್ಗೆ ಕಿರಣ್ , ವೆಬ್ಸೈಟ್ ಹಾಗೂ ಮೊಬಾಯ್ಲ್ ಆ್ಯಪ್ ಬಗ್ಗೆ ನಿತ್ಯಾನಂದ ಶೆಟ್ಟಿ ಸ್ಥೂಲವಾದ ಮಾಹಿತಿಯನ್ನಿತ್ತರು. ಪದ್ಮನಾಭ ಎಸ್.ಪಯ್ಯಡೆ, ಮುಂಡಪ್ಪ ಎಸ್.ಪಯ್ಯಡೆ, ಡಾ| ಪದ್ಮನಾಭ ವಿ.ಶೆಟ್ಟಿ, ಶೆಫಾಲಿ ಪ್ರಶಸ್ತಿ ಪ್ರಾಯೋಜಕರಾದ ಡಾ| ಮನೋಹರ್ ಹೆಗ್ಡೆ ಮತ್ತು ಆಶಾ ಮನೋಹರ್ ಹೆಗ್ಡೆ ಉಪಸ್ಥಿತರಿದ್ದು ಪುರಸ್ಕೃತರನ್ನು ಅಭಿನಂದಿಸಿದರು. ಅಂತೆಯೇ ಬಂಟ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಬಂಟ ಸಾಧಕರಾದ ಸಾಹಿತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಸುನೀತಾ ಎಂ.ಶೆಟ್ಟಿ, ಭಾರತೀಯ ಸೇವಾ ವಾಯು ರಕ್ಷಣಾ ನಿಗಮದ ಸೇನಾನಿ ಅಶ್ವಿನಿ ಶೆಟ್ಟಿ (ಮಾತಾ ಪಿತರಾದ ಕಟ್ಲ ಮಾದರಮನೆ ಸದಾಶಿವ ಸಿ.ಶೆಟ್ಟಿ ಮತ್ತು ಲೀಲಾ ಎಸ್.ಶೆಟ್ಟಿ ಮೂಡುಕೊಟ್ರಪಾಡಿ ಅವರನ್ನೊಳಗೊಂಡು), ಹೊಟೇಲ್ ಗುರುದೇವ್ ಕಲ್ಯಾಣ್ ಇದರ ಮಾಲೀಕ ಭಾಸ್ಕರ್ ಶೆಟ್ಟಿ ಕಲ್ಯಾಣ್, ಚಾನೆಲ್ ಫ್ರೈಟ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಕಿಶನ್ ಜೆ.ಶೆಟ್ಟಿ (ಸುಪುತ್ರ ವೈಶಾಕ್ ಕೆ.ಶೆಟ್ಟಿ, ಕೀರ್ತಿ ಕಿರಣ್ ಶೆಟ್ಟಿ ಅವರನ್ನೊಳಗೊಂಡು), ಹೆಸರಾಂತ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ| ವಿ .ಎಂ ಶೆಟ್ಟಿ (ಪತ್ನಿ ರೂಪಾಲಿ ಶೆಟ್ಟಿ ಅವರನ್ನೊಳಗೊಂಡು), ಲೆಕ್ಕ ಪರಿಶೋಧಕ ಸಿಎ| ಹರೀಶ್ ಹೆಚ್.ಹೆಗ್ಡೆ (ಪತ್ನಿ ದಿವ್ಯಾ ಶೆಟ್ಟಿ ಮತ್ತು ಸುಪುತ್ರ ಅಭಿಮನ್ಯು ಶೆಟ್ಟಿ ಅವರನ್ನೊಳಗೊಂಡು) ಅವರನ್ನು ಅತಿಥಿಗಳು ಸಮ್ಮಾನಿಸಿ ಅಭಿನಂದಿಸಿದರು. ಸ್ಪರ್ಧಾ ನಿರ್ಣಾಯಕರಾದ ಕೋರಿಯೋಗ್ರಾಫರ್ಸ್ಗಳಾದ ಪವನ್ ಶೆಟ್ಟಿ, ಮಿಥಾಲಿ ಶೆಟ್ಟಿ, ಮತ್ತು ಲತಿಕಾ ಶ್ರೀಯಾನ್ ಇವರನ್ನೂ ಗೌರವಿಸಲಾಯಿತು.
ಸುಧೀರ್ ಶೆಟ್ಟಿ ಮಾತನಾಡಿ ಎಸ್.ಎಂ ಶೆಟ್ಟಿ ಅವರ ಸನ್ಮಾನವೇ ನಮ್ಮ ದೊಡ್ಡ ಸಾಧನೆಯಾಗಿದೆ. ಅವರೋರ್ವ ತುಂಬಾ ಒಳ್ಳೆಯ ಸಹೃದತೆಯ ವ್ಯಕ್ತಿ. ಅಂತೆಯೇ ಮನಮೋಹನ್ ಶೆಟ್ಟಿ ಕೂಡಾ ಈ ಸಂಘದ ಬಹುದೊಡ್ಡ ಕೊಡುಗೈದಾನಿ ಆಗಿದ್ದು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದಾರೆ. ಪೊವಾಯಿಯಲ್ಲಿನ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಸದ್ಯ ಸುಮಾರು 8000 ವಿದ್ಯಾರ್ಥಿಗಳು ಬಾಳು ಬೆಳಗಿಸುತ್ತಿದ್ದು ಎಸ್.ಎಂ ಶೆಟ್ಟಿ ಬಂಟರ ಎಜ್ಯುಕೇಶನ್ ಬ್ರಾಂಡ್ ಆಗಿದೆ. ನಮ್ಮ ಸಾಧಕರ ಬಗ್ಗೆ ನಮಗೆ ಅಭಿಮಾನ ಇರಲಿ ಆವಾಗಲೇ ನಾವೂ ಹೆಚ್ಚು ಪ್ರಸಿದ್ಧರಾಗುತ್ತೇವೆ ಎಂದು ಅಭಿಮಾನ ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮ ಒಂದು ಅಸಾಧಾರಣ ಮತ್ತು ಸುಂದರವಾದ ಕಾರ್ಯಕ್ರಮವಾಗಿದೆ. ಎಸ್.ಎಂ ಶೆಟ್ಟಿ ಅವರು ಪರಿವಾರ ಸಹಿತ ಬಂದು ಪಡೆದ ಗೌರವದಿಂದ ಈ ಕಾರ್ಯಕ್ರಮ ಪರಿಪೂರ್ಣವಾದಂತಾಗಿದೆ.
ಪುರಸ್ಕೃತರ ಆಯ್ಕೆ ಬಗ್ಗೆ ಅಪಾರ ಅಭಿಮಾನ ಪಟ್ಟಿದ್ದು ಅಧ್ಯಕ್ಷರಿಗೊಂದು ಸಲಾಂ. ಸಂಘದ ಆರಂಭದಿಂದ ಈ ತನಕ ನಮ್ಮಲ್ಲಿನ ಕೊಡುಗೈದಾನಿಗಳ ಸಹಕಾರದಿಂದ ಬಂಟರ ಸಂಘವು ಈ ಮಟ್ಟಕ್ಕೆ ಬೆಳೆದಿದ್ದು ಸಮುದಾಯದ ಋಣ ಪೂರೈಸುವಂತಾಯಿತು. ಸಂಘವು ಮತ್ತಷ್ಟು ಎತ್ತರಕ್ಕೇರಲಿ ಅದಕ್ಕಾಗಿ ಇನ್ನಷ್ಟು ಕೊಡುಗೈ ದಾನಿಗಲೂ ಹುಟ್ಟಲಿ. ಸಂಘದೊಂದಿಗೆ ಅಖಂಡ ಬಂಟರ ಐಕ್ಯತೆ ಮೂಡಲಿ ಎಂದು ಐಕಳ ಹರೀಶ್ ಶೆಟ್ಟಿಯವರು ಆಶಯ ವ್ಯಕ್ತಪಡಿಸಿದರು.
ಬಂಜಾರ ಗ್ರೂಪ್ ನ ಪ್ರಕಾಶ್ ಶೆಟ್ಟಿ ಮಾತನಾಡಿ 2 ವರ್ಷದ ಬಳಿಕ ಈ ಸಭಾಗೃಹದಲ್ಲಿ ಸುದೀರ್ಘವಾಗಿ ನಡೆಸಲ್ಪಟ್ಟ ಕಾರ್ಯಕ್ರಮದಿಂದ ಹಳೆಯ ಎಲ್ಲಾ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಪೂರೈಸಿ ಇತಿಹಾಸ ಸೃಷ್ಟಿಸಿತು. ಇದೇ ಬಂಟರ ದೃಢತ್ವ ಎಂದು ಅಭಿಮಾನ ವ್ಯಕ್ತಪಡಿಸಿದರು.
ಸದಾಶಿವ ಶೆಟ್ಟಿ ಮಾತನಾಡಿ ಬಂಟರ ಸಂಘವು ಸ್ವಸಮಾಜದ ಮುಂದೆ ನನ್ನನ್ನು ಗುರುತಿಸಿ ನನ್ನನ್ನು ಗೌರವಿಸಿದ್ದು ಅಭಿಮಾನ ತಂದಿದೆ. ಇದನ್ನು ಸ್ವೀಕರಿಸುವುದೇ ನನ್ನ ಅಭಿಮಾನ. ನಮ್ಮಲ್ಲಿ ಭೌತಿಕ, ಮಾನಸಿಕ, ಬುದ್ಧಿವಂತಿಕೆ, ಶಕ್ತಿ ಇದ್ದರೆ ಇನ್ನಷ್ಟು ಸಾಧಿಸಬಹುದು. ಬಲವಾದ ನಾಯಕತ್ವಕ್ಕೆ ಬಂಟರು ಹೆಸರುವಾಸಿ. ಆದ್ದರಿಂದ ಬಂಟರು ಸಮಾಜದ ಎಲ್ಲರನ್ನೂ ಇನ್ನೂ ಹೆಚ್ಚಾಗಿ ಸ್ಪಂದಿಸಿ ವಿಶ್ವ ದರ್ಜೆಗೆ ರೂಪಿಸಬೇಕು. ಮಂಗಳೂರು, ಉಡುಪಿಯಲ್ಲಿ ಬಂಟರ ಸ್ಟೇಡಿಯಂ ರಚಿಸಿ ವಿಶ್ವ ದರ್ಜೆಯ ತರಬೇತಿ ನೀಡುವ ಯೋಜನೆ ರೂಪಿಸಬೇಕು. ಬಂಟರಲ್ಲಿ ಬಂಟರ ಸಂಘ ಮುಂಬಯಿಗಿಂತ ಮಿಗಿಲಾದ ಸಂಘ ಬೇರೊಂದಿಲ್ಲ. ಸರಳತೆಯಿಂದ ಬಂಟರ ಪ್ರಗತಿಗಾಗಿ ಶ್ರಮಿಸುತ್ತಿರುವುದು ಅಭಿಮಾನವಾದದ್ದು. ಮುಂದೆಯೂ ನಮ್ಮ ಸಾಧನೆ ಇತರರಿಗೆ ಸ್ಫೂರ್ತಿ ಆಗಲಿ ಎಂದರು.
ಬಂಟರಲ್ಲಿನ ಉದ್ಯಮಿಗಳನ್ನು ಯೋಗ್ಯರನ್ನಾಗಿಸಿ ಗೌರವಿಸಿದ್ದಕ್ಕಾಗಿ ವಂದನೆಗಳು. ನಾನು ಸಾಧಾರಣ ಮನುಷ್ಯ ಆದರೆ ಬರೇ 3 ರೂಪಾಯಿಗೆ ದುಡಿಮೆ ಆರಂಭಿಸಿದ ನಾನು ಇಂದು ನಿಮ್ಮೆಲ್ಲರ ಆಶೀರ್ವಾದದಿಂದ ಬೃಹತ್ ಕೈಗಾರಿಕೆಯನ್ನು ಹೊಂದಿ ಸಾವಿರಾರು ಕಾರ್ಮಿಕರನ್ನು ಹೊಂದಿದ್ಡೇನೆ. ಆ ಮೂಲಕ ಉದ್ಯಮದಲ್ಲಿ ಅಸಾಧರಣತೆ ಕಂಡುಕೊಂಡಿದ್ದೇನೆ. ಗುಣ ಮತ್ತು ಪ್ರಮಾಣಕ್ಕೆ ಆದ್ಯತೆ ನೀಡುತ್ತಾ, ಬದ್ಧತೆ, ಶ್ರಮದಾಯಕ ಪರಿಶ್ರಮದಿಂದ ಇದು ಸಾಧ್ಯವಾಯಿತು ಎಂದು ವಿ ಕೆ ಗ್ರೂಪ್ ಸಂಸ್ಥಾಪಕ ಕೆ.ಎಂ ಶೆಟ್ಟಿ ಅಭಿಪ್ರಾಯ ಪಟ್ಟರು.
ಹಿರಿಯ ಸಾಹಿತಿ ಡಾ| ಸುನೀತಾ ಎಂ ಶೆಟ್ಟಿ ಸನ್ಮಾನಕ್ಕೆ ಉತ್ತರಿಸಿ ನಾನು ಸುಮಾರು ಆರುವರೆ ದಶಕಗಳಿಂದ ಬಂಟ್ಸ್ ಸಂಘದೊಂದಿಗೆ ನಿಕಟವಾಗಿದ್ದು ಅಚಲ ಸೇವೆ ಮಾಡಿ ಬಂದಿರುವೆ. ಬಂಟ್ಸ್ ಸಂಘ ಮುಂಬಯಿ ನನ್ನ ತವರು ಮನೆ ಇದ್ದಂತೆ. ಸ್ವಸಮುದಾಯದ ಪ್ರೀತಿಗಿಂತ ದೊಡ್ಡ ಸನ್ಮಾನ ಮತ್ತೇನು ಬೇಕು. ಇಂದು ಮಾತೃಭಾಷಾ ದಿನ. ಆದ್ದರಿಂದ ಬಂಟ್ಸ್ ಸಂಘವು ಪ್ರತೀ ವರ್ಷ ನಮ್ಮ ಮಾತೃಭಾಷೆಯನ್ನು (ತುಳು-ಕನ್ನಡ) ಪ್ರಧಾನವಾಗಿಸಿ ಬಂಟ ಮಕ್ಕಳಲ್ಲಿ ಮಾತೃ ಭಾಷಾಭಿಮಾನ ಬೆಳೆಸಲು ಕಾರ್ಯಗತವಾಗಬೇಕು ಎಂದು ಕರೆಯಿತ್ತರು.
ಪ್ರಿಯಾ ಶೆಟ್ಟಿ ಮಾತನಾಡಿ ಬಂಟರು ಉದ್ಯಮಿಗಳಾಗುವ ಜೊತೆ ರಾಷ್ಟ್ರದ ನಾಗರಿಕ ಸೇವಾ ವೃತ್ತಿಯಲ್ಲೂ ಪಾಲು ಪಡೆಯುವ ಅಗತ್ಯವಿದೆ. ಅಧಿಕಾರರಸ್ಥರಿಂದಲೇ ಅನುಕೂಲಗಳ ಅಗತ್ಯಗಳು ಸುಲಭ ಸಾಧ್ಯವಾಗುವ ಕಾರಣ ನಾಗರೀಕ ಸೇವೆಯ ಮಾಹಿತಿ ತಿಳಿಯುವ ಅಗತ್ಯವಿದೆ. ಮಕ್ಕಳ ಭವಿಷ್ಯ ರೂಪಿಸುವಾಗಲೂ ಅವರಲ್ಲಿನ ವೃತ್ತಿ ಆಸಕ್ತಿ ಪರಿಗಣಿಸಿ, ನಿಮ್ಮ ಆಸಕ್ತಿಗೆ ತಕ್ಕಂತೆ ಅವರನ್ನು ಒತ್ತಡಕ್ಕೆ ಸಿಲುಕಿಸದಿರಿ. ಒತ್ತಡಕ್ಕೆ ಬಾಗಿಸಿದರೆ ಅವರಿಗೆ ಭವಿಷ್ಯ ಇರದು. ಪ್ರತಿಯೋರ್ವರ ಆಸಕ್ತಿಗೆ ಸ್ವಂತಿಕೆಯ ಮೌಲ್ಯವಿರುತ್ತದೆ. ಆಶೆಗಳು ಸದಾ ಕನಸುಗಳಾಗಿದ್ದರೂ ಸಮಾಜದಿಂದ ದೊರೆತ ಸ್ಥಾನಮಾನದಿಂದ ನಾವು ಸಮೃದ್ಧರಾಗಿರಬೇಕು. ಜೊತೆಗೆ ಅದ್ಭುತಕ್ಕಿಂತ ಆಸಕ್ತಿ ಮುಖ್ಯವಾಗಿರಲಿ ಎಂದು ಕಿವಿ ಮಾತುಗಳನ್ನಾಡಿದರು.
ಚಿರಾಗ್ ಶೆಟ್ಟಿ ಮಾತನಾಡಿ ಸ್ವಸಮುದಾಯದ ಗೌರವ ಸ್ವೀಕರಿಸಲು ಅಭಿಮಾನವೆನಿಸುತ್ತದೆ. ಕ್ರೀಡಾರಂಗದ ಸ್ವಸಾಧನೆಯ ಮೂಲಕ ಮುಂದೆ ಬಂಟರ ಹೆಸರನ್ನು ಜಾಗತಿಕವಾಗಿ ಪಸರಿಸುವ ಪ್ರಯತ್ನ ಮಾಡುವೆ ಎಂದು ಭರವಸೆಯನ್ನಿತ್ತರು.
ಭಾಸ್ಕರ ಶೆಟ್ಟಿ ಕಲ್ಯಾಣ್ ಮಾತನಾಡಿ ಮುಂಬಯಿಯಲ್ಲಿ ಬರೇ 12 ರೂಪಾಯಿ ಸಂಬಳದಲ್ಲಿ ದುಡಿದು ಇಂದು ಸ್ವಂತಿಕೆಯ ಅಸ್ಮಿತೆಯನ್ನು ರೂಡಿಸಿದ ಫಲದ ಗೌರವವಾಗಿ ಈ ಸನ್ಮಾನ ಸ್ವೀಕರಿಸುವೆ. ಬಂಟರ ಸಂಘದಲ್ಲಿ ಬಹುವರ್ಷದಿಂದ ಸೇವೆ ಸಲ್ಲಿಸಿದ ಅಭಿಮಾನ ನನಗಿದೆ. ಬಂಟರ ಸಂಘ ಅಂದರೆ ಸದ್ಯ ದೇವಸ್ಥಾನದಂತಹ ಜಾಗ. ಈ ಸೇವಾ ನಿಷ್ಠೆಗೆ, ಮಾತಾಪಿತರ ಪುಣ್ಯಕ್ಕೆ ಸಂದ ಗೌರವ ಎಂದು ಭಾವಿಸಿದ್ದೇನೆ ಎಂದರು.
ನಾವು ಎಲ್ಲಿಂದ ಹೇಗೆ ಮೇಲೇರಿ ಬಂದು ಬದುಕು ರೂಪಿಸಿದ್ದೇವೆ ಅನ್ನುವುದನ್ನು ತಿಳಿದು ಮುನ್ನಡೆದಾಗ ಸಾಧನೆಗಳು ಸಿದ್ಧಿಗೊಳ್ಳುವುದು. ಮನುಷ್ಯನು ಜೀವನಪೂರ್ತಿ ವಿದ್ಯಾರ್ಥಿಯಾಗಿಯೇ ನಿತ್ಯ ಕಲಿಯಬೇಕಾದದ್ದು ಬಹಳಷ್ಟಿದೆ. ಈ ಕಲಿಕೆಯ ಅನುಭವದಿಂದಲೇ ಯಶಸ್ಸಿನ ಬದುಕು ಪ್ರಾಪ್ತಿಯಾಗುವುದು. ಪರಿಶ್ರಮದಿಂದ ಸಾಧನೆ ಸಾಧ್ಯ ಎಂದು ಕಿಶನ್ ಶೆಟ್ಟಿ ನುಡಿದರು.
ಮೇಜರ್ ಅಶ್ವಿನಿ ಮಾತನಾಡಿ ಬಂಟರಲ್ಲಿ ಸೇನಾನಿಗಳ ಸಾಮರ್ಥ್ಯ ಇದೆ. ಸದ್ಗುಣವಂತ ಬಂಟರಲ್ಲಿ ಸ್ವಂತಿಕೆಯಿದೆ ಎಂದು ಬಾಲ್ಯಾವಸ್ಥೆಯನ್ನು ಮೆಲುಕು ಹಾಕುತ್ತಾ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ನಮ್ಮವರು ಸೇನಾಪಡೆಯಲ್ಲೂ ಮಿಂಚಬೇಕು ಎಂದು ಕಿವಿಮಾತುಗಳನ್ನಾಡಿದರು.
ಡಾ| ವಿ.ಎಂ ಶೆಟ್ಟಿ ಮಾತನಾಡಿ ಈ ಗೌರವವನ್ನು ಬಂಟರ ಅಭಿಮಾನದ ಪ್ರತೀಕವಾಗಿ ಸ್ವೀಕರಿಸುವೆ. ನನ್ನ ಕುಟುಂಬಗೋಸ್ಕರ, ಬಂಟ್ಸ್ ಡೊಂಬಿವಲಿ ಪ್ರಾದೇಶಿಕ ಸಮಿತಿ ಪರವಾಗಿ ಮತ್ತು ಸಮಸ್ತ ಬಂಟ ಕುಟುಂಬಕ್ಕೆ ಸಮರ್ಪಿಸುವೆ ಎಂದರು.
ಶ್ರೀ ದೇವರಿಗೆ ಮತ್ತು ನನ್ನ ಹೆತ್ತವರಿಗೆ ಧನ್ಯವಾದ ಸಮರ್ಪಸಿ ಈ ಗೌರವ ಪಡೆದುಕೊಳ್ಳುತ್ತಿದ್ದೇನೆ. ನಮ್ಮ ಸಮಾಜದ ಸಂಘದ ಕೊಡುಗೆ, ಈ ಸಂಘದೊಂದಿಗೆ ಕಳೆದ 9 ವರ್ಷಗಳಿಂದ ನಿಕಟವಾಗಿ ಸೇವೆ ಸಲ್ಲಿಸುವ ಅವಕಾಶದಿಂದ ಬಂಟರ ಅಸ್ಮಿತೆಯನ್ನು ಅರ್ಥೈಸಿದ್ದೇನೆ. ಎಲ್ಲರ ನಿಷ್ಠೆ, ಪರಿಶ್ರಮದಿಂದ ಈ ಸಂಸ್ಥೆ ಇನ್ನಷ್ಟು ಮುನ್ನಡೆಯಲಿ. ಎಲ್ಲಾ ಸಾಧಕ ಸನ್ಮಾನಿತರಿಗೂ ಅಭಿನಂದನೆಗಳು ಎಂದು ಸಿಎ| ಹರೀಶ್ ಶೆಟ್ಟಿ ತಿಳಿಸಿದರು.
ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿ ಕೋವಿಡ್ ನಿಮಿತ್ತ ಎರಡು ವರ್ಷಗಳ ನಂತರ ನಾವು ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಲು ಹೆಮ್ಮೆ ಎಣಿಸುತ್ತಿದೆ. ನಮ್ಮಲ್ಲಿನ ಸಾಧಕರನ್ನು ಗುರುತಿಸುವುದರಿಂದ ಯುವಜನಾಂಗಕ್ಕೆ ಉತ್ತೇಜನ ನೀಡಿದಂತಾಗುವುದು. ಇದೇ ನಮ್ಮ ಉದ್ದೇಶವೂ ಹೌದು. ಬಂಟರು ಆಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕವಾಗಿ ಗುರುತಿಸಿಕೊಳ್ಳಲು ಸನ್ನದ್ಧರಾಗಿದ್ದು ಹೊಸ ಯುಗದತ್ತ ದಾಪುಗಾಲಿಸುತ್ತಿದೆ ಎಂದೇಳಲು ಅಭಿಮಾನವೆನಿಸುತ್ತಿದೆ. ಸ್ವಸಮಾಜವನ್ನು ಸುಶಿಕ್ಷಿತವಾಗಿಸಿ ಭೌಗೋಳಿಕ ಬಾಳಿಗೆ ಬಂಟರನ್ನು ಪರಿಚಯಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಬಂಟರು ಸ್ವಾಭಿಮಾನಿಗಳು ಆದರೂ ಆರ್ಥಿಕವಾಗಿ ಹಿಂದುಳಿದಿದ್ದಲ್ಲಿ ಇನ್ನು ಯಾವನೇ ಬಂಟನು ಶಿಕ್ಷಣ ವಂಚಿತನಾಗುವ ಪ್ರೆಶ್ನೆಯೇ ಇಲ್ಲ. ಬೊರಿವಿಲಿ ಶಿಕ್ಷಣ ಯೋಜನೆ ಸೇರಿದಂತೆ ಸ್ವಂತಿಕೆಯ 2-3 ಉನ್ನತ ಶಿಕ್ಷಣಾಲಯಗಳು ಸೇವೆಯಲ್ಲಿವೆ. ಬಂಟರ ಶೈಕ್ಷಣಿಕ ಮೂಲ ಸೌಕರ್ಯವು ಮುಂಬಯಿಯಲ್ಲೇ ಪ್ರಥಮ ಶ್ರೇಣಿಯಲ್ಲಿದೆ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲದ (ಮರು ಪಾವತಿ ಸೇವಾ) ವ್ಯವಸ್ಥೆಯೂ ಮಾಡಿದ್ದೇವೆ. ಸದ್ಯದಲ್ಲೇ ಕಂಕಣ ಭಾಗ್ಯ ಯೋಜನೆಯನ್ನೂ ಸೇವಾರ್ಪಣೆ ಮಾಡಲಿದ್ದೇವೆ. ರಾಷ್ಟ್ರೀಯ ನಾಗರಿಕ ಸೇವೆ ಬಗ್ಗೆ ಇದೀಗಲೇ ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮಲ್ಲಿನ ಕ್ರೀಡಾಸಕ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿರಾಗ್ ಶೆಟ್ಟಿ ಸ್ಪೋರ್ಟ್ಸ್ ಅಚೀವರ್ಸ್ ಅವಾರ್ಡ್ (ವಾರ್ಷಿಕವಾಗಿ) ಕೊಡಮಾಡುವ ಬಗ್ಗೆ ಚಿಂತಿಸಿದ್ದೇವೆ ಎಂದು ಬಂಟರ ಸಂಘದ ಅಸ್ತಿತ್ವದಿಂದ ಈ ತನಕದ ಇತಿಹಾಸವನ್ನು ತಿಳಿಸಿ ಸಂಘದ ಸ್ಥಾಪಕರು ಮತ್ತು ಮುನ್ನಡೆಸಿದ ಎಲ್ಲಾ ಹಿರಿಕಿರಿಯ ಬಂಧುಗಳ ಸೇವೆಯನ್ನು ಮನವರಿಸಿ ಅಭಿವಂದಿಸಿದರು.
ಬಂಟರ ಸಂಘದ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮಿತಿ ಪೊವಾಯಿಯ ಕಾರ್ಯಧ್ಯಕ್ಷ ಬಿ.ಆರ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಧ್ಯಕ್ಷ ಶಾಂತರಾಮ ಬಿ.ಶೆಟ್ಟಿ, ಬೊರಿವಿಲಿ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ಡಾ| ಪಿ.ವಿ ಶೆಟ್ಟಿ, ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್ದಾಸ್ ಶೆಟ್ಟಿ, ಗೌರವ ಪ್ರಧಾನಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ.ಶೆಟ್ಟಿ, ವೇದಿಕೆಯಲ್ಲಿ ಆಸೀನರಾಗಿದ್ದರು.
ಆಲ್ ಕಾರ್ಗೋ ಲಾಜಿಸ್ಟಿಕ್ ಇದರ ಕಾರ್ಯಾಧ್ಯಕ್ಷ ಶಶಿಕಿರಣ್ ಶೆಟ್ಟಿ ಅವರ ಸಂದೇಶವನ್ನು ಡಾ| ಆರ್.ಕೆ ಶೆಟ್ಟಿ ವಾಚಿಸಿದ್ದು, ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಅವರು ದೃಶ್ಯ ಮಾದ್ಯಮದ ಮೂಲಕ ತಮ್ಮ ಸಂದೇಶವನ್ನು ಸಭಿಕರಿಗೆ ನೀಡಿದರು. ಮುಂಬಯಿ ಬಂಟರ ಸಂಘದ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ದಾನಿಗಳನ್ನು, ಉಪಸ್ಥಿತ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳನ್ನು ಗೌರವಿಸಿದರು.
ಶೈಲಜಾ ಶೆಟ್ಟಿ, ಜಯಲತಾ ಶೆಟ್ಟಿ, ರಜನಿ ಆರ್. ಶೆಟ್ಟಿ ಅವರ ಪ್ರಾರ್ಥನೆಗೈದರು ಚಂದ್ರಹಾಸ ಕೆ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಘದ ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಚ್ಚ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಅಶೋಕ್ ಪಕ್ಕಳ ಮತ್ತು ಅನುಪ್ರಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಳ್ತೂರು ಮೋಹನ್ದಾಸ್ ಶೆಟ್ಟಿ ವಂದಿಸಿದರು.
ವೈಶಿಷ್ಟ್ಯಮಯ ಕಾರ್ಯಕ್ರಮ:
ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳಿಂದ ಸದ್ದುಗದ್ದಲವಿಲ್ಲದೆ ಸುಮ್ಮಗಿದ್ದ ಬಂಟರ ಭವನವು ಜನಸ್ತೋಮದಿಂದ ತುಂಬಿ ತುಳುಕುತ್ತಾ ಜಾತ್ರೆಯಾಗಿ ಪರಿಣಮಿಸಿತ್ತು. ತಿರುಪತಿ ವೆಂಕಟೇಶ್ವರ ರೂಪಿತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರತಿಮೆ ಹೋಲುವ ದ್ವಾರಕ ಆಮಂತ್ರಿತರಿಗೆ ಸಾಕ್ಷಾತ್ ದೇವರ ಮಹಿಮೆಯಾಗಿ ಬಲ ತುಂಬಿದ್ದು ಅಷ್ಟಕ್ಕೇ ಮುಖದ ಮೇಲಿನ ಮಾಸ್ಕ್ ಗಳೆಲ್ಲವೂ ಕಿಸೆ ಸೇರಿಸಿತು. ವಕ್ರರೇಖೆಯ ಆಕಾರದಲ್ಲಿ ಸಾಗರದಂತಿನ ಪರದೆ ಹೊಸ ಚೈತನ್ಯದೊಂದಿಗೆ ಶೃಂಗಾರಗೊಂಡಿದ್ದ ಭವನದಲ್ಲಿ ಸ್ಪರ್ಧಿಗಳೂ ಸ್ವರ್ಗದಿಂದ ಭೂಮಿಗಿಳಿದ ಅನುಭವ. ಕಿಕ್ಕಿರಿದು ತುಂಬಿದ್ದ ಸಭಿಕರು ಸ್ಪರ್ಧಿಗಳಿಗೆ ಸೀಟಿ, ಚಪ್ಪಳೆ, ಕರತಡಗಳ ನಿನಾದದ ಉತ್ತೇಜನಕ್ಕೆ ಕೊರೊನಾ ಮಹಾಮಾರಿಯನ್ನೇ ಒದ್ದೊಡಿಸಿದಂತಿತ್ತು. ಸಭಿಕರಿಗೂ ಮತ್ತೆ ಹೊಸ ಬಾಳಿನ ಅನುಭವ ಆನಂದ ತಂದ ವರ್ಷಾಧಾರೆ. ಸಂಘಟಕರ ಸಮಯ ಪ್ರಜ್ಞೆಗೆ ಮೂಕರಾಗಿದ್ದ ಸಭಿಕರು ಸುಮಾರು ಹತ್ತು ತಾಸು ಸಭಾಗೃಹದೊಳಗಿದ್ದು ಶಿಸ್ತು ಬದ್ಧತೆಯೊಂದಿಗೆ ಕುಳಿತ ಪರಿಯೇ ಒಂದು ಸಾಧನೆ ಮತ್ತು ಇತಿಹಾಸವಾಗಿದೆ. ಕಂಗೊಳಿಸುತ್ತಿದ್ದ ಅಲಂಕಾರದ ಮಧ್ಯೆ ಒಳ ಸೇರಿದವರಲ್ಲಿ ಶ್ರೀಮಂತರು ಬಡವರೆಂಬ ತಾರತಮ್ಯ ಮಾಯವಾಗಿದ್ದು ಬ್ಯಾಂಡು ವಾದ್ಯದ ನಿನಾದದಿಂದ ಅತಿಥಿಗಳ ಸುಖಾಗಮಾನವೂ ಅಷ್ಟೇ ಸಮಾನತೆಗೆ ಮಾನ್ಯವಾಯಿತು. ತೊಂಬತ್ತರ ಸುನೀತಕ್ಕ ನಿರಂತರ ಒಂಬತ್ತು ಗಂಟೆ ಸಭಿಕರೊಂದಿಗೆ ಕಾರ್ಯಕ್ರಮದಲ್ಲಿ ಕಾರ್ಯಕ್ರವಿಡೀ ವೀಕ್ಷಿಸಿ ಯುವಜನತೆಯನ್ನು ನಾಚಿಸುವಂತಿಸಿದ್ದರೂ ಎಲ್ಲರಲ್ಲೂ ಆತ್ಮಸ್ಥೈರ್ಯ ತುಂಬಿ ಪ್ರೇರಕರಾದರು. ಪಿ.ಧನಂಜಯ ಶೆಟ್ಟಿ ಅವರ ಅತಿಥಿ ಆದರಿಸುವಿಕೆ ಮತ್ತು ಸಭಾಗೃಹದೊಳಗೆ ಅತಿಥಿಗಳ ಆಸನ ವ್ಯವಸ್ಥೆಗೈದ ವಿಠಲ್ ಆಳ್ವರ ಕಾರ್ಯವೈಖರಿ ಭಾರೀ ಪ್ರಶಂಸೆಗೆ ಪಾತ್ರವಾಯಿತು. ಅಂತೂ ಇಂತೂ ಈ ಕಾರ್ಯಕ್ರಮ ಬಂಟರ ಸಂಘದ ಇತಿಹಾಸದಲ್ಲೊಂದು ಮೈಲುಗಲ್ಲು ಆಗಿರುವುದು ಅದ್ಭುತವಾದ ಸಾಧನೆಯಾಗಿದೆ.