ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಕೆಸರುಗದ್ದೆ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ವರ್ಷಕ್ಕೊಮ್ಮೆಯಾದರೂ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರೆ ಒತ್ತಡ ರಹಿತವಾಗಿ ಆರೋಗ್ಯವಂತರಾಗಿ ಬದುಕು ಸಾಗಿಸಬಹುದು ಎಂದು ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಲಯನ್ ಹರಿಪ್ರಸಾದ್ ರೈ ಅವರು ಹೇಳಿದರು. ಶಿರ್ವ ಬಂಟರ ಸಂಘದ ಆಶ್ರಯದಲ್ಲಿ ಸಂಘದ ವ್ಯಾಪ್ತಿಯೊಳಗಿನ ಸಮಾಜ ಬಾಂಧವರಿಗಾಗಿ ಶಿರ್ವ ಕೋಡು ಪಂಜಿಮಾರು ಕೋಡುಮನೆಯ ಗದ್ದೆಯಲ್ಲಿ ನವೆಂಬರ್ 15 ರಂದು ನಡೆದ ಕೆಸರುಗದ್ದೆ ಕ್ರೀಡಾಕೂಟವನ್ನು ಕಳಸಿಗೆಗೆ ಭತ್ತ ಸುರಿದು, ತೆಂಗಿನ ಕೊಂಬು ಅರಳಿಸಿ ಉದ್ಘಾಟಿಸಿ ಮಾತನಾಡಿದರು.







ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ಮಾತನಾಡಿ, ಅಳಿದು ಹೋಗುತ್ತಿರುವ ಬಂಟರ ಆಚಾರ ವಿಚಾರ ಸಂಸ್ಕೃತಿಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು. ಅಂತಾರಾಷ್ಟ್ರೀಯ ಮಯೂರ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಕಾರ್ಕಳ ಮತ್ತು ಶಿರ್ವ ಬಂಟರ ಸಂಘದ ವ್ಯಾಪ್ತಿಯ ಹಿರಿಯ ಕೃಷಿಕರಾದ ಮಟ್ಟಾರು ಸುಧಾಕರ ಶೆಟ್ಟಿ, ರವೀಂದ್ರ ಶೆಟ್ಟಿ ಶಿರ್ವ, ಕುತ್ಯಾರು ಭೋಜ ಶೆಟ್ಟಿ ಮತ್ತು ಪಂಜಿಮಾರು ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸೌಮ್ಯ ಶೆಟ್ಟಿ ಮತ್ತು ಜಯಶ್ರೀ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು.
ಶಿರ್ವ ಬಂಟರ ಸಂಘದ ಅಧ್ಯಕ್ಷ ಕೇಂಜ ಅಬ್ಬೆಟ್ಟುಗುತ್ತು ಸಾಯಿನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಜಯಕೃಷ್ಣ ಆಳ್ವ, ಪಡುಬಿದ್ರಿ ಸಂತೋಷ್ ಶೆಟ್ಟಿ, ಬಂಟರ ಮಾತೃ ಸಂಘದ ಉಡುಪಿ ತಾಲೂಕು ಕಾರ್ಯಕಾರಿ ಸಮಿತಿಯ ಸದಸ್ಯ ವೀರೇಂದ್ರ ಶೆಟ್ಟಿ ಪಂಜಿಮಾರು, ಶಿರ್ವ ಜ್ಞಾನಚೇತನ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಟ್ರಸ್ಟಿ ಸತೀಶ್ ಹೆಗ್ಡೆ, ಶಿರ್ವ ಕೋಡು ಮನೆಯ ಸದಾನಂದ ವಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಸುಮಂತ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಧೀರಜ್ ಶೆಟ್ಟಿ ಪ್ರಸ್ತಾವಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ದೀಪಾ ಶೆಟ್ಟಿ ಸ್ವಾಗತಿಸಿ, ಸಚ್ಚಿದಾನಂದ ಹೆಗ್ಡೆ ನಿರೂಪಿಸಿ, ಕೋಶಾಧಿಕಾರಿ ವಳದೂರು ಪ್ರಸಾದ್ ಶೆಟ್ಟಿ ವಂದಿಸಿದರು.


















































































































