ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಕಣಂಜಾರು ವತಿಯಿಂದ ನವೆಂಬರ್ 10 ರಂದು ಕಣಂಜಾರು ಕೀರಬೆಟ್ಟು ಎಂಬಲ್ಲಿ 25ನೇ ವರ್ಷದ ಬೆಳಕಿನ ಹಬ್ಬ ಆಚರಿಸಲಾಯಿತು. ಬೆಳಿಗ್ಗೆ ಕಣಂಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದಿಂದ ಕೀರಬೆಟ್ಟು ತನಕ ಸ್ಥಳೀಯ ಗಣ್ಯರು ಹಾಗೂ ಸುಮಾರು 10 ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಮೆರವಣಿಗೆಯು ಸಾಗಿ ಬಂದು ತದನಂತರ ದಿ. ವೆಂಕಪ್ಪ ಮಾಸ್ತರ್ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಹಾಗೂ ಸ್ಥಳೀಯ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆದು, ಸಾರ್ವಜನಿಕರಿಗೆ ಸಹ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಚಿಂತಕರು, ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ವಿವಿಧ ಗಣ್ಯರ ಜೊತೆಗೂಡಿ ಪ್ರತೀ ವರ್ಷದಂತೆ ತಯಾರಿಸಲಾದ ಭಾರತ ಮಾತೆಯ ರೇಖಾಚಿತ್ರಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿ, ದೀಪಾವಳಿಯ ಈ ಅರ್ಥಪೂರ್ಣ ಆಚರಣೆಯನ್ನು 25 ವರ್ಷಗಳ ಹಿಂದೆಯೇ ಯೋಚಿಸಿದ ಸಂಘದ ಸದಸ್ಯರಿಗೆ ಅಭಿನಂದಿಸಿ, ಬದಲಾದ ಭಾರತದ ವೈಶಿಷ್ಟ್ಯತೆಯನ್ನು, ಯುವಜನತೆಯ ಜವಾಬ್ದಾರಿಗಳನ್ನು ಮನಮುಟ್ಟುವಂತೆ ವಿವರಿಸಿ ನೆರೆದವರ ಮನಸ್ಸುಗಳಲ್ಲಿ ರಾಷ್ಟ್ರ ಜಾಗೃತಿ ಮೂಡಿಸಿದರು. ಗಣೇಶ್ ನಾಯಕ್ ರವರ ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ವಿಕ್ರಮ್ ಹೆಗ್ಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲಯನ್ ಶಿವಪ್ರಸಾದ್ ಹೆಗ್ಡೆಯವರು ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಸ್ಥಳೀಯ ಗಣ್ಯರಾದ ಕಾಂತನ ಮಜಲು ಬಿ.ಎನ್ ಪೂಜಾರಿ, ಸುಧೀರ್ ಶೆಟ್ಟಿ ಕೊಳಕೆಬೈಲ್ ಇವರನ್ನು ಸನ್ಮಾನಿಸಲಾಯಿತು. ಶ್ರೀ ಚಂದ್ರಶೇಖರ್ ವಿ ಸುವರ್ಣ, ಶ್ರೀಮತಿ ಮೀನಾ ಲಕ್ಷಣಿ ಆಡ್ಯಂತಾಯ, ಬ್ರಹ್ಮಲಿಂಗೇಶ್ವರ ಫ್ರೆಂಡ್ಸಿನ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ಮುಗಿದ ನಂತರ ಅಭಿನಯ ಕಲಾವಿದರು ಉಡುಪಿ ಇವರಿಂದ “ಚಿಟ್ಟೆ” ತುಳು ಭಾವನಾತ್ಮಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.





















































































































