ಬ್ರಹ್ಮಾವರದ ಜಿ.ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅಭಿಮಾನದಿಂದ ಆಚರಿಸಲಾಯಿತು. ಶಾಲಾ ಆವರಣವನ್ನು ಕೆಂಪು ಮತ್ತು ಹಳದಿ ಬಣ್ಣದ ಧ್ವಜಗಳಿಂದ ಅಲಂಕರಿಸಲಾಗಿತ್ತು. ಎಲ್ಲೆಡೆ ಕನ್ನಡ ಗೀತೆಗಳ ಮಧುರ ಧ್ವನಿ ಮೊಳಗುತ್ತಿದ್ದು ಕನ್ನಡದ ಕಂಪು ಮತ್ತು ಸಂಭ್ರಮ ಮನೆಮಾಡಿತ್ತು. ಶಾಲಾಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡಾಂಬೆಯ ಮಕ್ಕಳಾದ ನಾವು ಇಲ್ಲಿನ ಗಾಳಿ, ಅನ್ನ, ನೆಲವನ್ನು ಬಳಸುತ್ತಿದ್ದೇವೆ. ಇಲ್ಲಿನ ಸಂಸ್ಕೃತಿ, ನಾಡು ನುಡಿಯನ್ನು ಬೆಳೆಸಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಲಿಕಾ ವ್ಯಾವಹಾರಿಕ ಭಾಷೆ ಯಾವುದೇ ಆಗಿದ್ದರೂ ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಕಳೆದುಕೊಳ್ಳಬಾರದು. ಕನ್ನಡವೇ ನಮ್ಮ ಉಸಿರು ಎಂದರು.
ಶಾಲಾ ಆಡಳಿತ ನಿರ್ದೇಶಕ ಹಾಗೂ ಜಿ.ಎಮ್ ಗ್ಲೋಬಲ್ ಸ್ಕೂಲ್ನ ಟ್ರಸ್ಟಿ ಪ್ರಣವ್ ಶೆಟ್ಟಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭ ಹಾರೈಸಿದರು. ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಕನ್ನಡದ ಮಹಾನ್ ಕವಿಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕನ್ನಡ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದವು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕನ್ನಡಾಭಿಮಾನವನ್ನು ಮೆರೆದರು.





















































































































