ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ 35 ನೇ ವರ್ಷದ ಯಕ್ಷೋತ್ಸವ -2026 ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಕ್ಷಗವಿಷ್ಟ 2026-27 ಯಕ್ಷಗಾನ ಸ್ಪರ್ಧೆಗಳಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವು ಪ್ರಥಮ ಬಹುಮಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದೆ. ಎಸ್ಡಿಎಂ ಕಾಲೇಜು ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕಾಲೇಜುಗಳ ಒಟ್ಟು ಒಂಬತ್ತು ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ತಂಡವು ಪ್ರಥಮ ಸ್ಥಾನ ಪಡೆದು 15,000 ರೂ. ನಗದು ಬಹುಮಾನದೊಂದಿಗೆ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ಅಮೃತ್ ಮತ್ತು ಹಸ್ತಾ ಬಹುಮಾನ ಪಡೆದರು. ನಿಟ್ಟೆ ವಿದ್ಯಾಸಂಸ್ಥೆ ಆಯೋಜಿಸಿದ ಯಕ್ಷಗವಿಷ್ಟ ಸ್ಪರ್ಧೆಯಲ್ಲಿ ಆಯ್ದ ಐದು ತಂಡಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಆಳ್ವಾಸ್ ತಂಡವು ಪ್ರಥಮ ಬಹುಮಾನ ಹಾಗೂ 20,000 ರೂ ನಗದು ಬಹುಮಾನ ಗಳಿಸಿತು. ಈ ಸ್ಪರ್ಧೆಯಲ್ಲಿಯೂ ಪರ್ಯಾಯ ಫಲಕ ಆಳ್ವಾಸ್ ತಂಡದ ಪಾಲಾಯಿತು. ವೈಯಕ್ತಿಕ ವಿಭಾಗದಲ್ಲಿ ಅಮೃತ್, ಶ್ರೀನಿಧಿ, ನಿಹಾಲ್ ಮತ್ತು ಹಸ್ತಾ ಬಹುಮಾನ ಗಳಿಸಿದರು.




ರಾಮಾಯಣದ ದಂಡಕಾರಣ್ಯದ ಸೃಷ್ಟಿಯ ಕಥಾವಸ್ತುವನ್ನು ಒಳಗೊಂಡ ವಿಧಿ ವಿಪರ್ಯಾಸ ಪ್ರಸಂಗವನ್ನು ಎರಡೂ ಸ್ಪರ್ಧೆಗಳಲ್ಲಿ ಆಳ್ವಾಸ್ ತಂಡವು ಪ್ರದರ್ಶಿಸಿತು. ಆದಿತ್ಯ ಅಂಬಲಪಾಡಿ ಮತ್ತು ಮಯೂರ ನಾಯ್ಗರವರ ನಿರ್ದೇಶನದಲ್ಲಿ ಮೂಡಿ ಬಂದ ಈ ಯಕ್ಷಗಾನ ಪ್ರದರ್ಶನವು ಎರಡೂ ವೇದಿಕೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಂಡದ ಕಥಾನಕದ ಪರಿಣಾಮಕಾರಿ ನಿರೂಪಣೆ, ಪಾತ್ರಾಭಿನಯ, ಮಾತುಗಾರಿಕೆ, ನೃತ್ಯ, ಹಿಮ್ಮೇಳದ ಹೊಂದಾಣಿಕೆ ಮತ್ತು ರಂಗ ಪ್ರಸ್ತುತಿಯ ಸಮಗ್ರತೆ ಎಲ್ಲರ ಮೆಚ್ಚುಗೆ ಪಡೆಯಿತು. ತಂಡದ ಈ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.


















































































































