ದೈವ ಪರಿಚಾರಕರ ಟ್ರಸ್ಟ್ ರಚಿಸುವ ಮೂಲಕ ಸಂಘಟಿತರಾಗಿ ಸರಕಾರ ಮಟ್ಟದಲ್ಲಿ ದೊರೆಯುವ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಪರಿಚಾರಕರ ಸಮುದಾಯದವರು ಇದರ ಪ್ರಯೋಜನ ಪಡೆಯಬೇಕು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು. ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕುಡ್ಲ ವತಿಯಿಂದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ‘ಕೊಡಿಯಡಿತ ನಿರೇಲ್ – ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ದೈವ ದೇವರಿಗೆ ಸಂಬಂಧಿಸಿದ ಕೆಲವು ಬದಲಾವಣೆ ಒಳ್ಳೆಯ ವಿಚಾರದಲ್ಲಿ ಆಗಿಲ್ಲ. ದೈವವನ್ನು ನಿರ್ಲಕ್ಷ್ಯ ಮಾಡುವ, ದೈವ ಅವಮಾನ ಆಗುವ ಕೆಲಸಗಳು ನಡೆಯಬಾರದು. ದೈವಾರಾಧನೆ ಪದ್ಧತಿ, ಆಚಾರ ವಿಚಾರಗಳ ಬಗ್ಗೆ ಯುವ ಜನತೆ, ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು ಎಂದರು. ಇದೇ ವೇಳೆ ಅವರು ಟ್ರಸ್ಟ್ ನ ವೆಬ್ ಸೈಟ್ ಲೋಕಾರ್ಪಣೆಗೊಳಿಸಿದರು.




ಕಾರ್ಯಕ್ರಮ ಉದ್ಘಾಟಿಸಿದ ಮಾವಂತೂರು ಗುತ್ತು, ಬಲವಾoಡಿ ಪಿಲಿಚಂಡಿ ದೈವ ಕ್ಷೇತ್ರದ ಗಡಿಕಾರ ಮಾವಂತೂರು ದುರ್ಗದಾಸ್ ಶೆಟ್ಟಿ ಮಾತನಾಡಿ, ದೈವ ಪರಿಚಾರಕರು ಸಂಘಟಿತರಾಗಿ ಪರಸ್ಪರ ಸಹಕಾರದಿಂದ ಮುಂದುವರಿಯಲು ಟ್ರಸ್ಟ್ ರಚನೆ ಶ್ಲಾಘನೀಯ. ಇಂದು ದೈವಾರಾಧನೆ ಎನ್ನುವುದು ಮನೋರಂಜನೆ ಎನ್ನುವ ಮಟ್ಟಕ್ಕೆ ತಲುಪಿದ್ದು ಇದರ ವಿರುದ್ಧ ಪ್ರತಿಭಟಿಸಬೇಕಾದ ಅಗತ್ಯವಿದೆ. ಮಕ್ಕಳಿಗೂ ಸಂಸ್ಕಾರ ಸಂಸ್ಕೃತಿಯ ಕೊರತೆ ಇದೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೈವ ದೇವರಿಗೆ ದೀಪ ಇಡಲು ಜನರಿಲ್ಲದ ಪರಿಸ್ಥಿತಿ ಎದುರಾಗಬಹುದು ಎಂದರು. ಶ್ರೀ ಕ್ಷೇತ್ರ ಪೆರಾರ ಬಲವಾಂಡಿ ದೈವದ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಅಳಿಕೆ ಗುತ್ತು ಮಾತನಾಡಿ, ದೈವ ಪರಿಚಾರಕರಿಗೆ ದೈವವೇ ರಕ್ಷಣೆ ನೀಡುತ್ತದೆ. ದೈವದ ಕಲದಲ್ಲಿ ಚಿತ್ರೀಕರಣವನ್ನು ನಿಲ್ಲಿಸುವುದು ಅಗತ್ಯವಾಗಿದ್ದು ದೈವ ಮಾರಾಟದ ಸೊತ್ತಾಗಬಾರದು ಎಂದರು.
ಕಲ್ಲಡ್ಕ ಕುಮ್ಮಣ್ ಸಾಲ್ಯಾನ್ ಕುಟುಂಬದ ಯಜಮಾನ ವಿಶ್ವನಾಥ ಪೂಜಾರಿ ಟ್ರಸ್ಟ್ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಹಸ್ತಾಂತರಿಸಿದರು. ಬೆಂಗಳೂರಿನ ಉದ್ಯಮಿ ಶ್ರೀಕಾಂತ್ ಕರ್ಕೇರ ಫಲಾನುಭವಿಗಳಿಗೆ ವಿಮಾ ಯೋಜನೆ ಹಸ್ತಾಂತರಿಸಿದರು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ವೈದ್ಯಕೀಯ ನೆರವಿನ ಚೆಕ್ ವಿತರಿಸಲಾಯಿತು. ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರನ್ನು ಸಮ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ ಎಂ. (ಅಣ್ಣು ಪೂಜಾರಿ) ಅಧ್ಯಕ್ಷತೆ ವಹಿಸಿದ್ದರು. ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲೋಕೇಶ್ ಭಂಡಾರಿ, ಕೂಳೂರು ಮಲರಾಯ ಸಾನದ ಉಮೇಶ್, ಉದ್ಯಮಿ ತುಷಾರ್ ಸುರೇಶ್ ಸುರತ್ಕಲ್ ಉಪಸ್ಥಿತರಿದ್ದರು. ದಿನೇಶ್ ಕಕ್ಕೆಪದವು ಸ್ವಾಗತಿಸಿ, ಹರ್ಷ ಕುಮಾರ್ ಪ್ರಸ್ತಾವಿಸಿ, ವಿಜಯ್ ಚೌಟ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಾಟಕ ಪ್ರದರ್ಶನಗೊಂಡಿತು.














































































































