ಸ್ವಾಭಿಮಾನದಿಂದ ಬದುಕುವ ತುಳುವರ ಕಲೆ, ಸಂಸ್ಕ್ರತಿ, ಭಾಷೆ, ಒಗ್ಗಟ್ಟಿಗೆ ಒಂದು ದೊಡ್ಡ ಅಡಿಪಾಯವೇ ಶಾಶ್ವತ ಮನೆಯಂತಿರುವ ತುಳುವರ ಭವನ. ಈ ಸಂಕಲ್ಪ ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಮತ್ತು ಪದಾಧಿಕಾರಿಗಳದ್ದು ಆಗಿದೆ. ನಿಮ್ಮ ಸಂಕಲ್ಪ ಕನಸು ಖಂಡಿತಾ ನೆರವೇರುತ್ತದೆ. ತುಳುವರಿಗಾಗಿ ದುಡಿಯುವ ತುಡಿತದ ನಿಮ್ಮ ಮನಸ್ಸು ದೊಡ್ಡದು. ಅದೇ ರೀತಿ ದೊಡ್ಡ ಕನಸು ಕೂಡಾ ಕಂಡಿದ್ದೀರಿ. ಅದನ್ನು ನೀವು ಮಾಡಬೇಕು. ನಿಮ್ಮ ಬೆನ್ನೆಲುಬಾಗಿ ನಾನಿದ್ದೇನೆ. ನಮ್ಮ ತುಳುನಾಡ ದೈವದ ನುಡಿ, ದೇವರ ಆಶಿರ್ವಾದ, ನಾಗದೇವರ ಗಂಧ ಪ್ರಸಾದ, ಹಿರಿಯರ ಮಾರ್ಗದರ್ಶನ ಪಡೆದು ಬಂದವರು ನಾವು ತುಳುವರು. ಬೆವರು ಸುರಿಸಿ ಪರಿಶ್ರಮಪಟ್ಟು ಸ್ವಸಾಮರ್ಥ್ಯದಿಂದ ಬೆಂಗಳೂರು, ಮುಂಬಯಿ, ಪುಣೆ ಮತ್ತು ದೇಶ ವಿದೇಶದ ಎಲ್ಲಾ ಕಡೆ ತುಳುವರು ಮೆರೆದಿದ್ದಾರೆ. ನನಗೆ ನಾನು ಬಯಸಿದ ಎಲ್ಲವನ್ನೂ ದೇವರು ನೀಡಿದ್ದಾರೆ. ಸೇವಾ ಕಾರ್ಯ ಮಾಡುವ ಭಾಗ್ಯ ಕರುಣಿಸಿದ್ದಾರೆ. ನನ್ನ ಜೀವನ ಅತ್ಯಂತ ಸುಖಿಮಯವಾಗಿದೆ. ನನ್ನ ಔದ್ಯೋಕಿಕ ಜೀವನದ 40 ವರ್ಷಗಳಲ್ಲಿ ಬಹಳಷ್ಟು ಸನ್ಮಾನ ಬಿರುದು ಪಡೆದಿದ್ದೇನೆ. ಆದರೆ ಪುಣೆ ತುಳುಕೂಟದ ಇಂತಹ ಸನ್ಮಾನ ಇದುವರೆಗೂ ಪಡೆದಿಲ್ಲ. ಇದನ್ನು ಪಡೆದ ನನ್ನ ಬದುಕು ಸಾರ್ಥಕವಾಯಿತು. ಇಂತಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ದೇವರು ಕರುಣಿಸಿದ್ದು, ಇದು ನನಗೆ ದೊರೆತ ಸೌಭಾಗ್ಯ ಎಂದು ಭಾವಿಸಿದ್ದೇನೆ. ತುಳುವರೆಲ್ಲರೂ ನಮ್ಮ ನೆರೆಕರೆಯವರು ಎಂಬ ಭಾವನೆ ನನ್ನದು. ನಮ್ಮ ಸಾಮರ್ಥ್ಯ, ಕಾರ್ಯ ಮತ್ತು ಕರ್ಮಫಲದಿಂದ ನಾವು ಯಶಸ್ಸಿನ ಉತ್ತುಂಗವನ್ನು ತಲುಪುತ್ತೇವೆ. ಸಮಾಜದ ಪ್ರೀತಿ ಎಲ್ಲವೂ ಇದೆ. ಈಗ ಉದಾರ ಹಸ್ತದಿಂದ ನಮ್ಮವರಿಗೆ ಸಹಾಯ ಮಾಡುವ ಸಮಯ ನಮ್ಮದಾಗಿದೆ. ಅದಕ್ಕೆ ಅನುಗುಣವಾಗಿ ನಾನು ನನ್ನ ತುಳುನಾಡ ಬಾಂಧವರ ಹಾಗೂ ಪ್ರತಿಯೊಂದು ಸಮಾಜಕ್ಕೂ ಅವರ ಪ್ರತಿ ಕರೆಗೆ ಸಹಾಯ ಮಾಡಲು ಬಯಸುತ್ತೇನೆ. ಪ್ರತಿಕೂಲ ಸಮಯದಲ್ಲಿ ಯಾವುದೋ ಶಕ್ತಿ ನಮ್ಮ ಹಿಂದೆ ದೃಢವಾಗಿ ನಿಂತಿದೆ ಎಂಬ ಭರವಸೆ ತುಳುವರಲ್ಲಿದೆ. ಸಂತೋಷ್ ಶೆಟ್ಟಿಯವರ ಸಾರಥ್ಯದಲ್ಲಿ ರೂಪುಗೊಂಡ ಪುಣೆಯ ಈ ಬಂಟರ ಭವನ ಅವರು ಹೇಳಿದಂತೆ ಎಲ್ಲಾ ತುಳು ಕನ್ನಡಿಗರ ಕಾರ್ಯಕ್ರಮಗಳಿಗೆ ತೆರೆದಿದೆ. ಇಲ್ಲಿಂದಲೇ ತುಳುವರ ಭವನ ಆಗುವವರೆಗೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಮತ್ತು ಅವರ ಸಂಗಡಿಗರು ವಿರಮಿಸದೆ ಸಾಕಾರಗೊಳ್ಳುವಂತೆ ಮಾಡಬೇಕು. ನನ್ನ ಸಾಧನೆಯ ಹಿಂದೆ ದೈವ ದೇವರ ಅನುಗ್ರಹ, ತಂದೆ ತಾಯಿಯವರ ಆಶೀರ್ವಾದ, ಮಡದಿಯ ಪ್ರಾರ್ಥನೆ, ಸಮಾಜದ ಪ್ರೀತಿ ಎಲ್ಲವೂ ಇದೆ. ನಮ್ಮ ಸಮಾಜಕ್ಕೆ ಉದಾರ ಹಸ್ತದಿಂದ ಸಹಾಯ ಮಾಡುವ ಸಮಯ ನಮ್ಮದಾಗಿದೆ. ಅದಕ್ಕೆ ಅನುಗುಣವಾಗಿ ನಾನು ನನ್ನ ಸಮಾಜ ಹಾಗೂ ಪ್ರತಿಯೊಂದು ಸಮಾಜಕ್ಕೂ ಅವರ ಪ್ರತಿ ಕರೆಗೆ ಸಹಾಯ ಮಾಡಲು ಬಯಸುತ್ತೇನೆ. ಯಾವಾಗಲೂ ನಾನು ಒಂದು ಹೆಜ್ಜೆ ಮುಂದಿಟ್ಟು ಸೇವೆ ಮಾಡುವಲ್ಲಿ ತೃಪ್ತಿಯನ್ನು ಕಾಣುತ್ತೇನೆ. ಸಮಾಜದ ಪ್ರತಿಯೊಬ್ಬನು ತನ್ನ ಜನ್ಮಭೂಮಿ, ತುಳುವರು ತನ್ನ ಸಮಾಜ ಮತ್ತು ದೇಶದ ಉದ್ಧಾರಕ್ಕಾಗಿ ಒಂದು ಹೆಜ್ಜೆ ಮುಂದಿಟ್ಟು ಸೇವೆ ಮಾಡುವ ಗುಣ ಹೊಂದಿರಬೇಕು ಎಂದು ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ ನುಡಿದರು.
ಪುಣೆ ತುಳುಕೂಟದ 27ನೇ ವಾರ್ಷಿಕೋತ್ಸವ ಸಮಾರಂಭವು ಆಗಸ್ಟ್ 15 ರಂದು ಪುಣೆಯ ಬಂಟರ ಭವನದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕ್ರತಿಕ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾ ವೇದಿಕೆಯಲ್ಲಿ ಜರಗಿತು. ಸಮಾರಂಭದ ಮುಖ್ಯ ವಿಶೇಷ ಸನ್ಮಾನಿತರಾಗಿ ಹಾಗೂ ‘ನಮ್ಮ ಮಲ್ಲಣ್ಣೆ’ ಬಿರುದು ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಶೆಟ್ಟಿಯವರು, ತುಳುಕೂಟದ ಈ ಕಾರ್ಯಕ್ರಮದಲ್ಲಿ ನಾನು ಬಹಳ ಆನಂದ ಪಟ್ಟೆ. ಪ್ರೀತಿಯ ಸ್ವಾಗತ, ಶಿಸ್ತು ಬದ್ದವಾದ ಕಾರ್ಯಕ್ರಮ, ಶಾಂತ ನಿಶಬ್ದವಾಗಿ ತುಂಬಿದ ಸಭಾಂಗಣ ಇದೆಲ್ಲವೂ ತುಳುವರ ಗಣಸ್ಥಿಕೆಯನ್ನು ಎತ್ತಿ ತೋರಿಸುತ್ತದೆ. ನನಗೆ ನೀಡಿದ ಈ ಬಿರುದು ಸನ್ಮಾನದಿಂದ ಮನ ತುಂಬಿ ಬಂದಿದ್ದು, ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು. ತುಳುಕೂಟ ಪುಣೆ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಅಶ್ವತಗುತ್ತುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ದಕ್ಷಿಣ ಕನ್ನಡ ಲೋಕಸಭಾ ಸಂಸದ ಬೃಜೇಶ್ ಚೌಟ, ಸಮಾಜ ಸೇವಕ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಗೌರವ ಅತಿಥಿಗಳಾದ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಪುಣೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಸಾಹಿತಿ ಭಗವದ್ಗೀತೆ ತುಳು ಅನುವಾದಕ ಮಹಾಬಲ ಪೂಜಾರಿ ಮಾಳರವರು ಉಪಸ್ಥಿತರಿದ್ದರು. ತುಳುಕೂಟದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಟ್ರಸ್ಟಿ ಪ್ರವೀಣ್ ಶೆಟ್ಟಿ ಪುತ್ತೂರು, ಸದಾಶಿವ ಸಾಲ್ಯಾನ್, ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಉದಯ್ ಶೆಟ್ಟಿ ಕಳತ್ತೂರು, ಶೇಖರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜಾರಾಮ ಶೆಟ್ಟಿ, ಕೊಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಶೆಟ್ಟಿಯವರು ಉಪಸ್ಥಿತರಿದ್ದರು.







ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೀತಾ ಪೂಜಾರಿ ಮತ್ತು ಗೀತಾ ಎಂ ದೇವಾಡಿಗ ಪ್ರಾರ್ಥನೆಗೈದರು. ತುಳುಕೂಟದ ಉಪಾಧ್ಯಕ್ಷ ಉದಯ ಶೆಟ್ಟಿ ಕಳತ್ತೂರು ಸ್ವಾಗತಿಸಿದರು. ದಿನೇಶ್ ಶೆಟ್ಟಿ ಕಳತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿ ಗಣ್ಯರನ್ನು ಶಾಲು ಹಾರ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ವೇದಿಕೆಯಲಿದ್ದ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಹಾದಾನಿ, ಆಶಕ್ತರ ಪಾಲಿನ ಆಶಾಕಿರಣ, ಮಾನವತಾವಾದಿ, ಬಡವರ ಬಂಧು, ಅಜಾತ ಶತ್ರು ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿಯವರನ್ನು ದಿನೇಶ್ ಶೆಟ್ಟಿ ಕಳತ್ತೂರು ಮತ್ತು ಪದಾಧಿಕಾರಿಗಳು ಕಲಶ, ಪುಷ್ಪಾರ್ಚನೆ, ವಾದ್ಯ, ಕೊಂಬು, ಬ್ಯಾಂಡ್, ತಾಳ, ರಾಜಛತ್ರಿ, ಬಿರುದು ಪತಾಕೆ, ಪೂರ್ಣಕುಂಭ ಮೆರವಣಿಗೆಯೊಂದಿಗೆ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ನಂತರ ಭವನದ ಚಾವಡಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆಗೈದು ಸಾವಿರಾರು ಸಂಖ್ಯೆಯಲ್ಲಿ ಸೇರಿದ ತುಳುವರ ಕರ ತಾಂಡನಗಳೊಂದಿಗೆ ಸಭಾಭವನಕ್ಕೆ ಸ್ವಾಗತಿಸಲಾಯಿತು. ಡಾ| ಪ್ರಕಾಶ್ ಶೆಟ್ಟಿಯವರ ಜೀವನದ ಸಾಧನೆಯ ಸಾಕ್ಷಚಿತ್ರ, ನಂತರ ಅವರಿಗೆ ಗೌರವ ಸಲ್ಲಿಕೆಯ ನೃತ್ಯದೊಂದಿಗೆ ಬಿರುದು ಪ್ರಧಾನ ಪೀಠದಲ್ಲಿ ಕುಳ್ಳಿರಿಸಿ ಶಾಲು, ಏಲಕ್ಕಿ ಹಾರ, ಪುಷ್ಪಗುಚ್ಚ, ರಾಜ ಪೇಟ, ಸ್ಮರಣಿಕೆ, ಗೋಲ್ಡ್ ಲೀಫ್ ರಾಘವೇಂದ್ರ ಸ್ವಾಮಿ ಫೋಟೋ, ಕೈಯಲ್ಲಿ ಬಿಡಿಸಿದ ಭಾವಚಿತ್ರ, ಬೃಹತ್ ಗಾತ್ರದ ಗುಲಾಬಿ ಹಾರ ಹಾಗೂ ವಿವಿಧ ಬಗೆಯ ಪ್ರಕೃತಿಯಲ್ಲಿ ಸಿಗುವ ಫಲಪುಷ್ಪ, ಕಲ್ಪವೃಕ್ಷ ಗಿಡದ ಸಮ್ಮುಖದಲ್ಲಿ ತುಂಬಿದ ಸಭಾಂಗಣದಲ್ಲಿ ಸೇರಿದ ತುಳುವರ ಕರ ಚಪ್ಪಾಳೆಯೊಂದಿಗೆ ಎಲ್ಲರೂ ಎದ್ದು ನಿಂತು ‘ನಮ್ಮ ಮಲ್ಲಣ್ಣೆ’ ಎಂಬ ಬಿರುದನ್ನು ನೀಡಿ ಗೌರವದಿಂದ ಸನ್ಮಾನಿಸಲಾಯಿತು. ಡಾ| ಪ್ರಕಾಶ್ ಶೆಟ್ಟಿಯವರ ಜೀವನ ಚರಿತ್ರೆ ಮತ್ತು ಸಾಧನೆಯ ಬಣ್ಣನೆಯನ್ನು ಖ್ಯಾತ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ ಬಣ್ಣಿಸಿದರು. ಅಕ್ಷತಾ ಸುಜೀತ್ ಶೆಟ್ಟಿ ಮತ್ತು ತಾರನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ ಪುಣೆ














































































































