ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರ್ನಾಟಕ ರಾಜ್ಯ ಶಾಖೆಯು ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ನಿಮಿತ್ತ ನೀಡುವ ಪ್ರತಿಷ್ಠಿತ ‘ವೈದ್ಯ ಚೇತನ ಪ್ರಶಸ್ತಿ’ಗೆ ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್ ಅಧ್ಯಕ್ಷ, ರೆಡ್ ಕ್ರಾಸ್ ಸೊಸೈಟಿಯ ದ.ಕ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ ಸಚ್ಚಿದಾನಂದ ರೈಯವರು ಭಾಜನರಾಗಿದ್ದಾರೆ. ಬೆಂಗಳೂರಿನ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಬಸವರಾಜೇಂದ್ರ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೈದ್ಯಕಿಯ ಕ್ಷೇತ್ರದಲ್ಲಿ ತೋರಿದ ಅತ್ಯುತ್ತಮ ವೃತ್ತಿಪರ ಸಾಧನೆ, ನಿಸ್ವಾರ್ಥ ಸೇವೆ, ವೈದ್ಯಕೀಯ ನೈತಿಕತೆಯ ಪಾಲನೆ ಹಾಗೂ ಸಮಾಜದಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ ಪರಿಗಣಿಸಿ ರಾಜ್ಯಮಟ್ಟದ ಗೌರವಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಡಾ. ಬಿ. ಸಚ್ಚಿದಾನಂದ ರೈ ಅವರು ಹಲವು ದಶಕಗಳಿಂದ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಲ್ಲಿಸಿ ಸಾವಿರಾರು ರೋಗಿಗಳ ವಿಶ್ವಾಸ ಗಳಿಸಿದ್ದಾರೆ. ಅವರ ಮಾನವೀಯ ಸೇವೆ, ವೃತ್ತಿಪರ ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಕಾರ್ಯ ಮಾದರಿಯಾಗಿದೆ. ಅವರ ಈ ಸಾಧನೆಗೆ ವೈದ್ಯಕೀಯ ವಲಯದ ಗಣ್ಯರು, ಸಹೋದ್ಯೋಗಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.






















































































































