ಆಲಂಕಾರು ಲಯನ್ಸ್ ಕ್ಲಬ್ ದುರ್ಗಾಂಬಾದ 2026 -27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಲಯನ್ ನಿತ್ಯಾನಂದ ಶೆಟ್ಟಿ ಮನವಳಿಕೆ, ಕಾರ್ಯದರ್ಶಿಯಾಗಿ ಲಯನ್ ಸುಂದರ ಗೌಡ ಹಾಗೂ ಕೋಶಾಧಿಕಾರಿಯಾಗಿ ಲಯನ್ ಗಣೇಶ್ ರೈ ಮನವಳಿಕೆ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಸಾಂಸ್ಕೃತಿಕ ಸಮಿತಿ ಸoಯೋಜಕರಾದ ಶ್ರೀಮತಿ ಸ್ವರೂಪ ಶೆಟ್ಟಿ ಬೆಳ್ಳಿಪ್ಪಾಡಿ ಅನುಸ್ಥಾಪನಾ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ದುರ್ಗಾಂಬಾ ಗ್ರಾಮೀಣ ಭಾಗದಲ್ಲಿ ನಿರಂತರ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದು, ಜಿಲ್ಲೆಯ ಇತರ ಕ್ಲಬ್ಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.



ಲಯನ್ಸ್ ಕ್ಲಬ್ ಕಾವು ಇದರ ಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಪ್ರಾಂತೀಯ ಅಧ್ಯಕ್ಷ, ಜಿಲ್ಲಾ ಸಂಪುಟ ರಾಯಭಾರಿ ಲಯನ್ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಲಯನ್ಸ್ ಕ್ಲಬ್ ಸೇವೆ, ಸಾಂಗತ್ಯ ಮತ್ತು ನಾಯಕತ್ವ ಬೆಳೆಸುವ ಉತ್ತಮ ವೇದಿಕೆಯಾಗಿದ್ದು, ನೂತನ ಅಧ್ಯಕ್ಷರ ನೇತೃತ್ವದಲ್ಲಿ ಕ್ಲಬ್ ಇನ್ನಷ್ಟು ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕ್ಲಬ್ ನಡೆಸಿದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಪರಿಸರ ಸಂರಕ್ಷಣೆಯ ಅಂಗವಾಗಿ 5,000 ಕಾಡು ಮಾವಿನ ಸಸಿಗಳನ್ನು ರಸ್ತೆ ಬದಿ, ದೇವಸ್ಥಾನ, ಚರ್ಚ್ ಹಾಗೂ ಮಸೀದಿ ಆವರಣಗಳಲ್ಲಿ ನೆಟ್ಟು ಪೋಷಿಸುವ ಕಾರ್ಯ ಕೈಗೊಂಡಿರುವುದಾಗಿ ಹಾಗೂ ಅದಕ್ಕೆ ಕ್ಲಬ್ಬಿನ ಸಹಕಾರ ಕೋರಿದರು.

ನೂತನ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾಗೂ ಲಯನ್ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಲಯ ಅಧ್ಯಕ್ಷ ಲಯನ್ ಜಗನ್ನಾಥ ರೈ ಗುತ್ತು, ಪ್ರಾಂತೀಯ ಅಧ್ಯಕ್ಷ ಲಯನ್ ಆನಂದ ರೈ ಹಾಗೂ ಸ್ಥಾಪಕ ಅಧ್ಯಕ್ಷ ಲಯನ್ ದಯಾನಂದ ರೈ ಮನವಳಿಕೆ ಶುಭ ಹಾರೈಸಿದರು. ನೂತನ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮಾತನಾಡಿ, ಲಯನ್ಸ್ ಸಂಸ್ಥೆಯ ನಿರ್ದೇಶನದಂತೆ ಇನ್ನಷ್ಟು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು. ನಿರ್ಗಮಿತ ಅಧ್ಯಕ್ಷ ಪದ್ಮಪ್ಪ ಗೌಡ ಸ್ವಾಗತಿಸಿ, ತಮ್ಮ ಅಧಿಕಾರಾವಧಿಯಲ್ಲಿ ಸದಸ್ಯರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ ನೂತನ ತಂಡಕ್ಕೆ ಶುಭಕೋರಿ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಲಯನ್ ಉದಯ ಸಾಲಿಯಾನ್ ಅವರನ್ನು ಕ್ಲಬ್ನ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು. ಶರವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ| ಹೇಮಂತ್ ಶೆಟ್ಟಿ ಮನವಳಿಕೆ ಅವರನ್ನು ಸಮಾಜಸೇವೆಗಾಗಿ ಸನ್ಮಾನಿಸಲಾಯಿತು. ಲl ಸುಭಾಷ್ ರೈ ಆರುವಾರ ಪ್ರಾರ್ಥನೆ ಮಾಡಿದರು.

ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಆರ್ಥಿಕ ನೆರವು ನೀಡಿ ಗೌರವಿಸಲಾಯಿತು. ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಪದ್ಮಪ್ಪ ಗೌಡ, ಕಾರ್ಯದರ್ಶಿ ಲಿಂಗಪ್ಪ ಹಾಗೂ ಕೋಶಾಧಿಕಾರಿ ಇಂದುಶೇಖರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ದ್ವಿತೀಯ ರಾಜ್ಯಪಾಲ ಲಯನ್ ವೆಂಕಟೇಶ ಹೆಬ್ಬಾರ್ ದಂಪತಿಗಳನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮನವಳಿಕೆ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಹಾಗೂ ಮೋಹನದಾಸ ರೈ ಅತಿಥಿಗಳನ್ನು ಪರಿಚಯಿಸಿದರು. ಮಾಜಿ ಅಧ್ಯಕ್ಷ ಲl ಲಕ್ಷ್ಮೀನಾರಾಯಣ ಪ್ರಭು ಸನ್ಮಾನ ಪತ್ರ ವಾಚಿಸಿದರು. ಮಾಜಿ ಸ್ಥಾಪಕ ಅಧ್ಯಕ್ಷ ದಯಾನಂದ ರೈ ಮನವಳಿಕೆಯವರ ಮುಂದಾಳತ್ವದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯೊಬ್ಬರಿಗೆ ಸುಮಾರು 7–8 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಲಾಯಿತು. ಬೇರೆ ಬೇರೆ ಲಯನ್ಸ್ ಕ್ಲಬ್ ಅಧ್ಯಕ್ಷರು, ಪಧಾಧಿಕಾರಿಗಳು ಕ್ಲಬ್ನ ಸ್ಥಾಪಕ ಸದಸ್ಯರು, ಮಾಜಿ ಅಧ್ಯಕ್ಷರು, ಲಯನ್ಸ್ ಪ್ರಮುಖರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಯನ್ ಕಿರಣ್ ಪಜ್ಜಡ್ಕ ಕಾರ್ಯಕ್ರಮ ನಿರೂಪಿಸಿ, ಲಯನ್ ಶ್ರೀಪತಿ ರಾವ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.





















































































































