

ಪ್ರತಿಷ್ಠಿತ ಟೊಯೊಟಾ ಕಂಪನಿಯಲ್ಲಿ ಅಧಿಕಾರಿ. ಯಕ್ಷಗಾನ ಸಂಬಂಧಿ ಸಂಶೋಧನೆಯಲ್ಲಿ ಡಾಕ್ಟರೇಟ್. ಅಚ್ಚರಿ ಎನಿಸುವುದಿಲ್ಲವೆ?! ಹೌದು ಇದು ನಮ್ಮ ಬಂಟ ಸಾಧಕರ ವೈಶಿಷ್ಟ್ಯ. ಔದ್ಯೋಗಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಕಲಾ ಕ್ಷೇತ್ರದಲ್ಲಿ ತನ್ನ ಹೆಸರನ್ನು ದಾಖಲಿಸಿರುವ ಅಪೂರ್ವ ಪ್ರತಿಭೆ ಡಾ| ದೀಪಕ್ ಶೆಟ್ಟಿಯವರು ಬಾರ್ಕೂರು ಮೂಲದ ನಿವೃತ್ತ ಶಿಕ್ಷಕ ಶಿಕ್ಷಕಿಯರಾದ ಹಿಮಕರ ಶೆಟ್ಟಿ ವನಜಾ ಶೆಟ್ಟಿ ದಂಪತಿಯರ ಸುಪುತ್ರ. ಟೊಯೊಟಾ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿ ಇದ್ದಂತೆಯೇ ತನ್ನ ಆಸಕ್ತಿಯ ಕ್ಷೇತ್ರವಾದ ಯಕ್ಷಗಾನ ಕುರಿತಂತೆ ಅಧ್ಯಯನ ನಡೆಸಿ ಹವ್ಯಾಸಿ ಕಲಾವಿದನಾಗಿ, ಸಂಘಟಕನಾಗಿ, ಅರ್ಥಧಾರಿಯಾಗಿ ಗುರುತಿಸಿಕೊಂಡ ಡಾ| ದೀಪಕ್ ಶೆಟ್ಟಿಯವರು ನಿಜಾರ್ಥದ ಕುಲದೀಪಕರು. ಔದ್ಯೋಗಿಕ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಮೆರೆದ ದೀಪಕ್ ಶೆಟ್ಟರು ಜಪಾನ್ ಸೇರಿದಂತೆ ವಿದೇಶಗಳಲ್ಲಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಗಳಿಸಿ ಕಂಪನಿಯ ಅಮೂಲ್ಯ ಆಸ್ತಿ ಎಂಬಂತೆ ಗೌರವ ಪಾತ್ರರಾಗಿದ್ದಾರೆ. ಅನೇಕ ಸಂಘಟನೆಗಳಲ್ಲಿ ಜವಾಬ್ದಾರಿ ಸ್ಥಾನದ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.



ದೀಪಕ್ ಶೆಟ್ಟಿಯವರ ಸಮಾಜಮುಖಿ ಸೇವೆ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ. ಕೋವಿಡ್ ಸಂಕಷ್ಟ ಸಮಯ ಜನರೊಂದಿಗಿದ್ದು, ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದ್ದಲ್ಲದೇ ಅವಶ್ಯಕತೆ ಇದ್ದ ಸೇವೆ ಜೊತೆಗೆ ಕೋವಿಡ್ ಲಸಿಕೆ ಲಭ್ಯವಾಗಿಸಿ ಅಮೂಲ್ಯ ಪ್ರಾಣ ಉಳಿಸುವ ಕೆಲಸ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಅನಾರೋಗ್ಯ ಪೀಡಿತ ಕಲಾವಿದರ ಸೇವೆಗೆ ಧಾವಿಸುವ ಇವರು ಕಲಾವಿದರ ಪಾಲಿನ ಕಾಮಧೇನು ಎನಿಸಿಕೊಂಡಿದ್ದಾರೆ. ಸತತ ಹನ್ನೊಂದು ವರ್ಷಗಳ ಕಾಲ ಜಪಾನ್ ದೇಶದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ ಹೆಗ್ಗಳಿಕೆ ಡಾ| ದೀಪಕ್ ಶೆಟ್ಟಿ ಅವರಿಗಿದೆ. ಕುಂದಾಪ್ರ ಕನ್ನಡ ಪ್ರತಿಷ್ಠಾನ ಆರಂಭಿಸಿ ಅಧ್ಯಕ್ಷ ಸ್ಥಾನದಲ್ಲಿ ಅನೇಕ ಕನ್ನಡ ಪರ ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿ ಇವರಿಗಿದೆ. ಬೆಂಗಳೂರಿನಲ್ಲಿ ವಿಶ್ವ ಕುಂದಾಪುರ ದಿನಾಚರಣೆಯ ಸಂಘಟನೆ ಇವರ ಜನಸಂಪರ್ಕ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಯಾಗಿದೆ. ಕಂಬಳ ನಿಷೇಧ ಕಾಯ್ದೆ ಸಂದರ್ಭದಲ್ಲಿ ಜಾತಿಮತ ಬೇಧ ಇಲ್ಲದೆ ಕಂಬಳ ಪ್ರಿಯರನ್ನು ಸಂಘಟಿಸಿ ಹೋರಾಡಿದ ಪ್ರಸಿದ್ಧಿ ಕೂಡಾ ಇವರಿಗಿದೆ. ಯಕ್ಷಧ್ರುವ ಪಟ್ಲ ಇದರ ಪದಾಧಿಕಾರಿ ಸ್ಥಾನದಲ್ಲಿ ಇವರ ಕಾರ್ಯವೈಖರಿ ಅಪೂರ್ವವಾದುದು.

ಕಲೆ ಸಂಸ್ಕೃತಿ ಕುರಿತಂತೆ ಅಧಿಕಾರವಾಣಿಯಿಂದ ಮಾತಾಡಬಲ್ಲ ಮೇಧಾವಿ ಡಾ| ದೀಪಕ್ ಶೆಟ್ಟಿ ಬಾರ್ಕೂರು ಅವರು ಬೆಂಗಳೂರಿನಲ್ಲಿ ಬೈಂದೂರು ಟು ಬದಿಯಡ್ಕ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿ ಬೆಂಗಳೂರು ನಗರದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿ ತನ್ನ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡು ಬೆಂಗಳೂರು ನಗರದಲ್ಲಿ ತನ್ನ ಅದ್ಭುತ ಸಂಘಟನಾ ಸಾಮರ್ಥ್ಯ ಹಾಗೂ ಬಹುಮುಖಿ ಪ್ರತಿಭಾ ಸಂಪನ್ನತೆಯಿಂದ ಜನಾನುರಾಗಿಯಾಗಿದ್ದಾರೆ. ಯಕ್ಷಗಾನ ಹಾಗೂ ಕರಾವಳಿ ಸಾಂಸ್ಕೃತಿಕ ಪರಂಪರೆ ಕುರಿತಂತೆ ವಿಶೇಷ ಆಸ್ಥೆ ವಹಿಸುವ ಇವರು ಓರ್ವ ಸಾಂಸ್ಕೃತಿಕ ರಾಯಭಾರಿಯೂ ಹೌದು.

ಯುವ ವಿಭಾಗದ ಮೂಲಕ ಬೆಂಗಳೂರು ಬಂಟರ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡು, ಯುವ ವಿಭಾಗದ ಸಂಚಾಲಕರಾಗಿ, ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ, ಎರಡು ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕೋಶಾಧಿಕಾರಿಯಾಗಿ ದಕ್ಷ ಹಾಗೂ ಪಾರದರ್ಶಕವಾಗಿ ಸೇವೆ ಸಲ್ಲಿಸಿದ ಅನುಭವವಿದ್ದು, ಪ್ರಸ್ತುತ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಪದಕ್ಕೆ ಸ್ಪರ್ಧಾಳು ಆಗಿರುವ ಡಾ| ದೀಪಕ್ ಶೆಟ್ಟಿ ಅವರು ಆರಿಸಿ ಬಂದರೆ ತನ್ನ ಸ್ಥಾನಕ್ಕೆ ಖಂಡಿತವಾಗಿ ನ್ಯಾಯ ನೀಡಬಲ್ಲರು. ಅವರು ಆ ಸ್ಥಾನಕ್ಕೆ ಅರ್ಹರಿದ್ದಾರೆ.
ಲೇಖನ : ಅರುಣ್ ಶೆಟ್ಟಿ ಎರ್ಮಾಳು
ಗೌರವ ಸಂಪಾದಕರು




























































































































