


ಸ್ತ್ರೀ ಎಂಬುದು ಪರಿಪೂರ್ಣತೆಯ ಸಂಕೇತ. ಆಕೆಯ ಅಂತರಂಗದ ಶಕ್ತಿ, ಸಂವೇದನೆ ಮತ್ತು ಚಿಂತನೆ ಅಕ್ಷರ ರೂಪದಲ್ಲಿ ಅಭಿವ್ಯಕ್ತಿಯಾದಾಗ ಅದು ಸಮಾಜದ ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸೌಮ್ಯ ತಿಲಕ್ ಶೆಟ್ಟಿಯವರ ‘ಮಸಿಯ ಮಾತು’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಈ ಸಂಕಲನದಲ್ಲಿರುವ ಎಲ್ಲಾ ಕವನಗಳೂ ಕವಯಿತ್ರಿ ಸೌಮ್ಯರವರ ಹೆಸರಿನಂತೆಯೇ ಮೃದುತ್ವ, ಸಂಯಮ ಮತ್ತು ಸಂವೇದನಾ ಶೀಲತೆಯಿಂದ ಕೂಡಿವೆ. ಸಮತೆ, ಮಾನವೀಯತೆ ಮತ್ತು ಸಹಬಾಳ್ವೆಯ ತತ್ವವೇ ಈ ಕವನಗಳ ಜೀವಾಳವಾಗಿದೆ. ಆದ್ದರಿಂದ ಇಲ್ಲಿ ರೋಷ, ಆವೇಶ, ಸೇಡು ಅಥವಾ ದ್ವೇಷದ ಅಭಿವ್ಯಕ್ತಿಗಳಿಗೆ ಅವಕಾಶವಿಲ್ಲ, ಬದಲಾಗಿ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಜೀವನದ ಸಕಾರಾತ್ಮಕ ದೃಷ್ಟಿಕೋನವೇ ಪ್ರಧಾನವಾಗಿ ಹರಿದು ಬರುತ್ತದೆ. ಕವನಗಳಲ್ಲಿ ಪ್ರತಿಫಲಿಸಿರುವ ಚಿಂತನೆಗಳು ಮೌಲ್ಯಾಧಾರಿತ ಬದುಕಿನತ್ತ ಓದುಗರನ್ನು ಕರೆದೊಯ್ಯುತ್ತವೆ. ಮಹತ್ವಾಕಾಂಕ್ಷೆಯ ಅಂಧ ಓಟಕ್ಕಿಂತ ಬದುಕಿನ ಸರಳತೆ, ಇರುವುದರಲ್ಲಿ ತೃಪ್ತಿ, ಸಂಬಂಧಗಳ ಮೌಲ್ಯ ಹಾಗೂ ಸುಖ ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಜೀವನ ದರ್ಶನವನ್ನು ಕವಯಿತ್ರಿ ಅತ್ಯಂತ ಸಹಜವಾಗಿ ಅಭಿವ್ಯಕ್ತಿಸಿದ್ದಾರೆ. ಬದುಕನ್ನು ಪ್ರಬುದ್ಧವಾಗಿ ಅರ್ಥೈಸಿಕೊಳ್ಳುವ ಮನೋಭಾವವನ್ನು ಬೆಳೆಸುವ ಈ ಕವನಗಳು ಓದುಗರಲ್ಲಿ ಆತ್ಮಾವಲೋಕನ, ಸಂವೇದನೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಹೊಸ ಅರಿವನ್ನು ಮೂಡಿಸುತ್ತವೆ ಎಂದರು.





ಕೃತಿ ಪರಿಚಯ ಮಾಡಿ ಮಾತನಾಡಿದ ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಭಾಷೆ ಎನ್ನುವುದು ಕೇವಲ ವೃತ್ತಿಯ ವಿಷಯವಲ್ಲ. ಅದು ಮನಸ್ಸಿನ ಅಭಿವ್ಯಕ್ತಿ ಮತ್ತು ಸಂಸ್ಕೃತಿಯ ಪ್ರತೀಕ. ಸೌಮ್ಯ ಶೆಟ್ಟಿಯವರು ಇಂಗ್ಲಿಷ್ ಭಾಷೆಯನ್ನು ಬೋಧಿಸುವ ಶಿಕ್ಷಕಿಯಾಗಿದ್ದರೂ ಕನ್ನಡದ ಮೇಲಿನ ಪ್ರೀತಿ, ಬದ್ಧತೆ ಹಾಗೂ ಸಾಹಿತ್ಯಾಸಕ್ತಿಯನ್ನು ಉಳಿಸಿಕೊಂಡು ಸೃಜನಶೀಲ ಬರವಣಿಗೆಯಲ್ಲಿ ತೊಡಗಿರುವುದು ಪ್ರಶಂಸನೀಯ. ಇವರ ಕವನ ಸಂಕಲನದಲ್ಲಿ ಮೃದುತ್ವ, ಮಾನವೀಯತೆ ಮತ್ತು ಸಮಾನತೆಯ ಭಾವ ಸ್ಪಷ್ಟವಾಗಿ ಕಾಣುತ್ತದೆ. ಬದಲಾಗುತ್ತಿರುವ ಸಂವೇದನೆಗಳ ಕಾಲಘಟ್ಟದಲ್ಲಿ ಸಂಬಂಧಗಳನ್ನು ಬೆಸೆಯುವ ಆಶಯ ಈ ಕವನಗಳಲ್ಲಿ ವ್ಯಕ್ತವಾಗಿದ್ದು, ಕವಿತೆಗಳು ಹೊಸ ಚಿಂತನೆಗೆ ದಾರಿಯಾಗಬಲ್ಲದು ಎಂದರು. ಕೃತಿಯಲ್ಲಿನ ಹೆಚ್ಚಿನ ಕವನಗಳು ಪ್ರಾಸಬದ್ಧವಾಗಿವೆ. ಮುಂದಿನ ದಿನಗಳಲ್ಲಿ ಕವಯಿತ್ರಿ ಪ್ರಾಸದ ಮಿತಿಯನ್ನು ಮೀರಿ ಭಾಷೆಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸಿದರೆ ಅವರ ಸಾಹಿತ್ಯ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಸಲಹೆ ನೀಡಿದರು.
ಕವಯಿತ್ರಿ ಸೌಮ್ಯ ತಿಲಕ್ ಶೆಟ್ಟಿ ಮಾತನಾಡಿ, ಮಸಿ ಕಾಗದದ ಮೇಲೆ ಮೂಡುವ ಗುರುತಷ್ಟೇ ಅಲ್ಲ, ಅದು ಹೃದಯದ ಮಾತುಗಳಿಗೆ ಜೀವ ನೀಡುವ ಮಾಧ್ಯಮ. ಪ್ರತಿಯೊಂದು ಕವನವೂ ನನ್ನ ಬದುಕಿನ ಅನುಭವ, ಆತ್ಮಸಂವಾದ ಮತ್ತು ಸಮಾಜವನ್ನು ನೋಡುವ ದೃಷ್ಟಿಕೋನದ ಪ್ರತಿಬಿಂಬವಾಗಿದೆ. ಓದುಗರ ಮನಸ್ಸಿನಲ್ಲಿ ಹೊಸ ಚಿಂತನೆ, ಸಂವೇದನೆ ಮತ್ತು ಆತ್ಮಾವಲೋಕನ ಮೂಡಿಸುವ ಉದ್ದೇಶದಿಂದ ಈ ಕವನಗಳನ್ನು ರಚಿಸಿದ್ದೇನೆ. ಈ ಕೃತಿಯಲ್ಲಿ ನೂರು ಕವನಗಳಿದ್ದು, ಓದುಗರ ಪ್ರೋತ್ಸಾಹ ತಮಗೆ ಇನ್ನಷ್ಟು ಬರೆಯುವ ಉತ್ಸಾಹ ತುಂಬಿದೆ ಎಂದು ತಿಳಿಸಿದರು. ವಿಶ್ರಾಂತ ಕುಲಸಚಿವ ಡಾ| ಬಿ.ಪಿ ಸಂಪತ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಕವಿಯ ಸಾಹಿತ್ಯ ಪಯಣದಲ್ಲಿ ಮೊದಲ ಕವನ ಸಂಕಲನವು ಕೇವಲ ಒಂದು ಕೃತಿಯಲ್ಲ, ಅವರ ಸೃಜನಶೀಲ ಬದುಕಿನ ಮೈಲಿಗಲ್ಲಾಗಿರುತ್ತದೆ. ಅದು ಲೇಖಕರ ಸಂವೇದನೆ, ಚಿಂತನೆ ಮತ್ತು ಸಾಹಿತ್ಯದ ದಿಕ್ಕನ್ನು ಪರಿಚಯಿಸುವ ಮಹತ್ವದ ಹೆಜ್ಜೆಯಾಗಿರುತ್ತದೆ. ‘ಮಸಿಯ ಮಾತು’ ಕವನ ಸಂಕಲನದಲ್ಲಿ ಭಾಷೆಯ ಸೊಗಸು, ಭಾವ ಬಂಧದ ಆಳ, ಅರ್ಥಸಾಂದ್ರತೆ ಮತ್ತು ಲಯಬದ್ಧ ಅಭಿವ್ಯಕ್ತಿ ಸಹಜವಾಗಿ ಮೂಡಿಬಂದಿವೆ. ಕವಯಿತ್ರಿ ಕೃತಕತೆಯಿಲ್ಲದ, ಸರಳವಾದರೂ ಪರಿಣಾಮಕಾರಿ ಭಾಷೆಯ ಮೂಲಕ ಓದುಗರ ಮನಸ್ಸನ್ನು ತಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕವನಗಳಲ್ಲಿನ ಭಾವಗಳು ಓದುಗರನ್ನು ಆತ್ಮಾವಲೋಕನಕ್ಕೆ ಕರೆದೊಯ್ಯುವುದರ ಜೊತೆಗೆ ಬದುಕಿನ ವಿವಿಧ ಆಯಾಮಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತವೆ. ಕೆಲವು ಕವನಗಳು ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ವಚನಗಳ ಸರಳತೆ, ತಾತ್ವಿಕತೆ ಮತ್ತು ಅರ್ಥಗರ್ಭಿತ ಅಭಿವ್ಯಕ್ತಿಯನ್ನು ನೆನಪಿಸುತ್ತವೆ. ಕಾವ್ಯದ ಭಾಷೆ ಹೆಪ್ಪುಗಟ್ಟಿದ ಅನುಭವಗಳ ಸಾಂದ್ರ ಅಭಿವ್ಯಕ್ತಿಯಾಗಿದ್ದು, ಅದನ್ನು ಅರ್ಥಪೂರ್ಣವಾಗಿ ರೂಪಿಸುವ ಸಾಮರ್ಥ್ಯ ಕವಿಗೆ ಅತ್ಯಗತ್ಯ. ಆ ಸಾಮರ್ಥ್ಯದ ಸ್ಪಷ್ಟ ಲಕ್ಷಣಗಳು ಈ ಸಂಕಲನದಲ್ಲಿ ಕಂಡು ಬರುತ್ತವೆ. ಸೌಮ್ಯ ತಿಲಕ್ ಶೆಟ್ಟಿಯವರು ಉತ್ತಮ ಕವಯಿತ್ರಿಯಾಗಿ ರೂಪುಗೊಳ್ಳುವ ಎಲ್ಲಾ ಭರವಸೆಯನ್ನು ಈ ಕೃತಿಯ ಮೂಲಕ ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹವ್ಯಾಸಿ ಬರಹಗಾರ್ತಿ ಆಶಾ ಅಡೂರು ಮಾತನಾಡಿ, ಕವಿ ಮನಸ್ಸಿನ ಭಾವಲೋಕದ ಪ್ರತಿಬಿಂಬವೇ ಈ ಕೃತಿ. ಜ್ಞಾನ, ಚಿಂತನೆ, ಆತ್ಮಾವಲೋಕನ ಮತ್ತು ಸಮಾಜಮುಖಿ ಸಂದೇಶಗಳನ್ನು ಒಳಗೊಂಡಿರುವ ಈ ಸಂಕಲನ ವೈವಿಧ್ಯಮಯ ಅನುಭವಗಳನ್ನು ನೀಡುವ ‘ಫ್ರೂಟ್ ಸಲಾಡ್’ನಂತಿದೆ ಎಂದರು. ಕಾರ್ಯಕ್ರಮದಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ವಿಜಯಕುಮಾರ್ ಜೈನ್ ಮಾತನಾಡಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.




























































































































