


ಯಕ್ಷ ಕಲಾರಂಗ ಕಾರ್ಕಳ ಇವರು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಹಯೋಗದೊಂದಿಗೆ ಕಾರ್ಕಳ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಆಸಕ್ತಿಯ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುವ ಯೋಜನೆಯ ಅಂಗವಾಗಿ ಕೊಳಕೆ ಇರ್ವತ್ತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯರಾದ ಉದ್ಯಮಿ, ಎಸ್. ಸಿ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಭಾಸ್ಕರ ಕೋಟ್ಯಾನ್ ರವರು ದೀಪ ಬೆಳಗಿಸುವುದರೊಂದಿಗೆ ತರಗತಿ ಆರಂಭವಾಯಿತು. ಪಟ್ಲ ಫೌಂಡೇಶನ್ ನ ಟ್ರಸ್ಟ್ ಗೋವಾ ಘಟಕದ ಅಧ್ಯಕ್ಷ ಭಕ್ತವತ್ಸಲ ಗಣೇಶ ಶೆಟ್ಟಿಯವರು ಸಭಾದ್ಯಕ್ಷತೆ ವಹಿಸಿ ಮಕ್ಕಳ ಕಳೆದ ವರ್ಷದ ಯಕ್ಷಗಾನ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪಟ್ಲ ಸತೀಶ್ ಶೆಟ್ಟಿಯವರ ಈ ಒಂದು ಪ್ರಯತ್ನಕ್ಕೆ ನಾವೆಲ್ಲಾ ಬೆನ್ನೆಲುಬುಗಳಾಗಿದ್ದೇವೆ ಎಂದರು.



ನಿವೃತ್ತ ಶಿಕ್ಷಕ, ಹವ್ಯಾಸಿ ಕಲಾವಿದ ರಮಾನಾಥ ಶೆಣೈ, ಉದಯ ಎಸ್ ಕೋಟ್ಯಾನ್ ಸಂದರ್ಭೋಚಿತವಾಗಿ ಮಾತಾನಾಡಿ, ಪಟ್ಲ ಫೌಂಡೇಶನ್ ಟ್ರಸ್ಟ್ ಮಾಡುತ್ತಿರುವ ಕಲಾ ಸೇವೆಯನ್ನು ತುಂಬು ಕಂಠದಿಂದ ಶ್ಲಾಘಿಸಿದರು. ಕಾರ್ಕಳ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಉಪಾದ್ಯಕ್ಷ ಬೇಬಿ ಈಶ್ವರಮಂಗಲ, ಎಸ್.ಡಿ.ಎಂ.ಸಿ ಅಧ್ಯಕ್ಷ ವಿಜಯ ಅಮೀನ್, ಉಪಾಧ್ಯಕ್ಷೆ ನಳಿನಾಕ್ಷಿ, ಹಿರಿಯರಾದ ಕೊಳಕೆ ಜಯಕೀರ್ತಿ ಕಡಂಬ, ಕೊಡುಗೈ ದಾನಿ ಧನರಾಜ್ ಜೈನ್, ಶೇಖರ ಅಂಚನ್, ಗೋಪಾಲ ಪೂಜಾರಿ, ಶೇಖರ ಶೆಟ್ಟಿ, ಸದಾನಂದ ಪೂಜಾರಿ, ಶೇಖರ ಕೋಟ್ಯಾನ್, ಮಾಧ್ಯಮ ಬಿಂಬದ ಪತ್ರಕರ್ತ ವಸಂತ್ ಬೆಳ್ತಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಆನಂದ ಪೂಜಾರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕಲಾವತಿ ಸ್ವಾಗತಿಸಿದರು. ಯಕ್ಷ ಶಿಕ್ಷಕ ಮಹಾವೀರ ಪಾಂಡಿ ವೀಳ್ಯ ಪಡೆದು ತರಗತಿ ಆರಂಭಿಸಿದರು.




























































































































