


ಇಂದು ನಾವು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಲ್ಲಿ ಒಂದಾಗಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಯೋಗವು ಕೇವಲ ವ್ಯಾಯಾಮವಲ್ಲ; ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದೇ ಸೂತ್ರದಲ್ಲಿ ಬಂಧಿಸುವ ಜೀವನ ವಿಧಾನವಾಗಿದೆ. ಭಾರತದ ಮಹಾನ್ ಋಷಿ ಮುನಿಗಳ ಕೊಡುಗೆಯಾದ ಯೋಗವನ್ನು ಇಂದು ವಿಶ್ವದ 190ಕ್ಕೂ ಹೆಚ್ಚು ರಾಷ್ಟ್ರಗಳು ಸ್ವೀಕರಿಸಿ ಆಚರಿಸುತ್ತಿವೆ. ಇದು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಜೀವನ ಮೌಲ್ಯಗಳ ಜಾಗತಿಕ ಮಾನ್ಯತೆಯ ಸಂಕೇತವಾಗಿದೆ. ಇಂದಿನ ವೇಗದ ಯುಗದಲ್ಲಿ ಒತ್ತಡ, ಆತಂಕ ಮತ್ತು ಅನಾರೋಗ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಯೋಗವು ಆರೋಗ್ಯಕರ ಹಾಗೂ ಸಮತೋಲನಯುತ ಜೀವನಕ್ಕೆ ದಾರಿದೀಪವಾಗಿದೆ. ದಿನಕ್ಕೆ ಕೆಲವೇ ನಿಮಿಷಗಳ ಯೋಗಾಭ್ಯಾಸವು ದೇಹಕ್ಕೆ ಶಕ್ತಿ, ಮನಸ್ಸಿಗೆ ನೆಮ್ಮದಿ ಹಾಗೂ ಜೀವನಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ‘ಯೋಗಃ ಕರ್ಮಸು ಕೌಶಲಮ್’ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಅಂದರೆ ಯೋಗವು ನಮ್ಮ ಪ್ರತಿಯೊಂದು ಕಾರ್ಯವನ್ನೂ ಉತ್ತಮವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಪ್ರತೀ ವರ್ಷ ನಮ್ಮ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕ್ರೀಡಾ ಕಾರ್ಯಾಧ್ಯಕ್ಷರಾದ ವಿವೇಕಾನಂದ ಶೆಟ್ಟಿಯವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿರುವ ಕ್ರೀಡಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಎಲ್ಲಾ ಪ್ರಾದೇಶಿಕ ಸಮಿತಿಗಳಿಗೆ ಅಭಿನಂದನೆಗಳು. ಶ್ರೀಮತಿ ಪ್ರಮಿಳಾ ಜೆ. ಶೆಟ್ಟಿಯವರು ಹಲವು ವರ್ಷಗಳಿಂದ ನಮ್ಮ ಸಂಘದ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ನಡೆಸಿಕೊಡುತ್ತಾ ಸಮಾಜಕ್ಕೆ ಯೋಗದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಶ್ರೀಮತಿ ಜ್ಯೋತಿ ಶೆಟ್ಟಿಯವರು ಯೋಗದಲ್ಲಿ 17 ವರ್ಷಗಳ ಅನುಭವ ಹೊಂದಿದ್ದು, ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಬೆಂಗಳೂರು, ಆರೋಗ್ಯವರ್ಧಿನಿ ವಿಶ್ವವಿದ್ಯಾಲಯ ಅಹಮದನಗರ ಹಾಗೂ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಣ ಪಡೆದಿರುವುದು ಸಂತಸದ ವಿಷಯವಾಗಿದೆ. ‘ಆರೋಗ್ಯವೇ ಭಾಗ್ಯ, ಯೋಗವೇ ಆರೋಗ್ಯದ ಮಾರ್ಗ’ ಎಂಬ ಸಂದೇಶದೊಂದಿಗೆ ಎಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಸಂಕಲ್ಪ ಕೈಗೊಳ್ಳೋಣ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು ನುಡಿದರು.



ಪುಣೆ ಬಂಟರ ಸಂಘದ ಸಮಾಜ ಕಲ್ಯಾಣ ಕಲ್ಪವೃಕ್ಷ ಕ್ರೀಡಾ ದಾತ ಯೋಜನೆಯ ಅಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನದಂಗವಾಗಿ ಯೋಗ ದಿನಾಚರಣೆಯು ಜೂನ್ 21 ರಂದು ಬಂಟರ ಭವನದಲ್ಲಿ ಜರಗಿತು. ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಯೋಗ ಶಿಬಿರವನ್ನು ಚಾವಡಿಯ ಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುಣೆಯ ಯೋಗ ಉಪನ್ಯಾಸಕಿ ಜ್ಯೋತಿ ಶೆಟ್ಟಿ, ಪುಣೆಯ ಶೆಟ್ಟಿ ಯೋಗ ಕ್ಲಾಸ್ ನ ನಿರ್ದೇಶಕಿ ಪ್ರಮಿಳಾ ಜೆ ಶೆಟ್ಟಿ, ಸಂಘದ ಸಮಿತಿಯ ಪದಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ನಿಟ್ಟೆ, ವಿವೇಕಾನಂದ ಶೆಟ್ಟಿ ಅವರ್ಸೆ, ಶೇಖರ್ ಸಿ ಶೆಟ್ಟಿ, ರವಿ ಶೆಟ್ಟಿ ಕಾಪು, ಗಣೇಶ್ ಪೂಂಜಾ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ, ಮಹಿಳಾ ಸಮಿತಿಯ ಪ್ರಮುಖರಾದ ಸಂದ್ಯಾ ಅರ್ ಶೆಟ್ಟಿ, ನೀನಾ ಬಿ ಶೆಟ್ಟಿ, ವೀಣಾ ಪಿ ಶೆಟ್ಟಿ, ನೀತಾ ಎಸ್ ಶೆಟ್ಟಿ, ಸಾರಿಕಾ ಸಿ ಶೆಟ್ಟಿ, ವಿನಯ ಯು ಶೆಟ್ಟಿ, ಗೀತಾ ಜೆ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ ಸಿ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ವಿನೋದ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಮಹಿಳಾ ಕಾರ್ಯಾಧ್ಯಕ್ಷೆ ಪ್ರೇಮಾ ಅರ್ ಶೆಟ್ಟಿ, ಪೂರ್ವ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶಾಲಿನಿ ಎಂ ಶೆಟ್ಟಿ ಹಾಗೂ ಸಂಘದ ಸಮಿತಿಯ ಪದಾಧಿಕಾರಿಗಳು ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಪುಣೆಯ ಯೋಗ ಉಪನ್ಯಾಸಕಿ ಜ್ಯೋತಿ ಶೆಟ್ಟಿಯವರು ಯೋಗದ ಬಗ್ಗೆ ಉಪನ್ಯಾಸ ನೀಡಿದರು ಮತ್ತು ಪುಣೆಯ ಶೆಟ್ಟಿ ಯೋಗ ಕ್ಲಾಸ್ ನ ನಿರ್ದೇಶಕಿ ಪ್ರಮೀಳಾ ಜೆ ಶೆಟ್ಟಿಯವರು ಯೋಗ ದಿನಾಚರಣೆಯನ್ನು ನಡೆಸಿಕೊಟ್ಟರು. ಯೋಗ ತರಬೇತುದಾರೆ ಜ್ಯೋತಿ ಶೆಟ್ಟಿ ಮತ್ತು ಯೋಗ ಶಿಕ್ಷಕಿ ಪ್ರಮಿಳಾ ಶೆಟ್ಟಿಯವರನ್ನು ಸಂಘದ ವತಿಯಿಂದ ಶಾಲು, ಪುಷ್ಪಗುಚ್ಛ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ



























































































































