


ಚಿಣ್ಣರಬಿಂಬ ಸಂಸ್ಥೆಯು ಪ್ರಕಾಶ್ ಭಂಡಾರಿಯವರ ಮಾರ್ಗದರ್ಶನದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಹಾಗೂ ಸಂಸ್ಕಾರಗಳನ್ನು ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಚಿಣ್ಣರಬಿಂಬದ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಶ್ರಮ ಮತ್ತು ದೇಶಭಕ್ತಿಯನ್ನು ಕಾಣಬಹುದು. ಸರ್ಕಾರ ಮಾಡಬೇಕಾದ ಅನೇಕ ಕಾರ್ಯಗಳನ್ನು ಈ ಸಂಸ್ಥೆ ಸಮರ್ಥವಾಗಿ ನಿರ್ವಹಿಸುತ್ತಿದೆ. ಮಕ್ಕಳ ಭಜನೆ ಹಾಗೂ ಗಾಯನವನ್ನು ಆಲಿಸಿ ಅಪಾರ ಸಂತೋಷವಾಯಿತು. ನನ್ನ ಮಗಳು ಕೂಡ ಚಿಣ್ಣರಬಿಂಬದ ವಿದ್ಯಾರ್ಥಿನಿಯಾಗಿದ್ದಾಳೆ ಎನ್ನುವುದು ಹೆಮ್ಮೆಯ ವಿಷಯ ಎಂದು ಪೊವಾಯಿ ಕನ್ನಡ ಸೇವಾ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಲಹಾ ಸಮಿತಿಯ ಕಾರ್ಯಾಧ್ಯಕ್ಷರಾದ ಅಡ್ವೋಕೇಟ್ ಆರ್.ಜಿ ಶೆಟ್ಟಿ ಅವರು ನುಡಿದರು. ಅವರು ಜೂನ್ 14ರಂದು ಭಾನುವಾರ ಮಧ್ಯಾಹ್ನ ಎಸ್.ಎಂ ಶೆಟ್ಟಿ ಶಾಲೆಯಲ್ಲಿ ನಡೆದ ಮುಂಬಯಿಯ ಪ್ರತಿಷ್ಠಿತ ಮಕ್ಕಳ ಸಾಂಸ್ಕೃತಿಕ ಸಂಸ್ಥೆಯಾದ ಚಿಣ್ಣರಬಿಂಬದ 2026 -27ನೇ ಸಾಲಿನ ಕನ್ನಡ ಹಾಗೂ ಭಜನಾ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು. ಸೆಂಟ್ರಲ್ ಕಮಿಟಿಯ ಸದಸ್ಯ ರಮೇಶ್ ಡಿ ರೈ ಅವರು ಮಾತನಾಡಿ, ಚಿಣ್ಣರಬಿಂಬವು ಯಾವುದೇ ತಾರತಮ್ಯವಿಲ್ಲದೇ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಆದರ್ಶ ಸಂಸ್ಥೆಯಾಗಿದೆ. ಪ್ರತಿಯೊಬ್ಬ ಪಾಲಕರೂ ಇತರರ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲಾ ಮಕ್ಕಳಿಗೂ ಭಾಗವಹಿಸುವ ಅವಕಾಶ ದೊರೆಯಬೇಕು. ಮುಂದಿನ ವರ್ಷ ನಡೆಯಲಿರುವ 25ನೇ ವರ್ಷದ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಯೋಜನೆ ರೂಪಿಸಲಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.



ಡಾ| ಪೂರ್ಣಿಮಾ ಸುಧಾಕರ ಶೆಟ್ಟಿಯವರು ಮಾತನಾಡಿ, ಚಿಣ್ಣರಬಿಂಬದ ಈ ಶಿಬಿರದಲ್ಲಿ ತುಂಬಾ ಜನ ಉತ್ತಮ ಕೆಲಸ ಮಾಡಿದ್ದಾರೆ. ಈಗ ಇರುವ ಪದಾಧಿಕಾರಿಗಳು, ಸದಸ್ಯರು, ಪಾಲಕರು ನಿರಂತರವಾಗಿ ಶಿಬಿರದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಮಕ್ಕಳನ್ನು ಈ ಶಿಬಿರಕ್ಕೆ ಅಥವಾ ಮುಂಬಯಿಯ ಇತರ ಚಿಣ್ಣರಬಿಂಬ ಶಿಬಿರಗಳಿಗೆ ಸೇರಿಸಲು ಪ್ರೋತ್ಸಾಹಿಸಬೇಕು. ಇಲ್ಲಿ ಜಾತಿ ಮತ ಭೇದವಿಲ್ಲ. ಚಿಣ್ಣರಬಿಂಬವು ಒಬ್ಬ ವ್ಯಕ್ತಿಯ ಅಥವಾ ಒಂದು ಶಿಬಿರದ ಜವಾಬ್ದಾರಿಯಲ್ಲ. ಇದು ಕೂಡು ಕುಟುಂಬದ ವ್ಯವಸ್ಥೆಯಂತೆ ಎಲ್ಲರ ಸಹಕಾರದಿಂದ ಸಾಗುವ ಸಂಸ್ಥೆಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ನುಡಿದರು. ಈ ಸಂದರ್ಭದಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬೇಬಿ ಪೂಜಾರಿ ಅವರನ್ನು ಶಿಬಿರದ ಮುಖ್ಯಸ್ಥೆಯಾಗಿ, ವಿದ್ಯಾ ಶೆಟ್ಟಿ ಅವರನ್ನು ಸಾಂಸ್ಕೃತಿಕ ಮುಖ್ಯಸ್ಥೆಯಾಗಿ, ಅನಿತಾ ಎಸ್. ಶೆಟ್ಟಿ ಅವರನ್ನು ಕನ್ನಡ ಶಿಕ್ಷಕಿಯಾಗಿ ಹಾಗೂ ವಿಮಲಾ ದೇವಾಡಿಗ ಅವರನ್ನು ಭಜನಾ ಶಿಕ್ಷಕಿಯಾಗಿ ಆಯ್ಕೆ ಮಾಡಲಾಯಿತು. ಜೊತೆಗೆ ಸಾಂಸ್ಕೃತಿಕ ಸಮಿತಿಯನ್ನೂ ರಚಿಸಲಾಯಿತು.
ಅತಿಥಿ ಅಡ್ವೋಕೇಟ್ ಆರ್.ಜಿ ಶೆಟ್ಟಿ ಅವರಿಗೆ ಶಾಲು ಹಾಗೂ ಹೂಗುಚ್ಛ ನೀಡಿ ಗೌರವಿಸಲಾಯಿತು. ನಂತರ ಹಳೆಯ ಪದಾಧಿಕಾರಿಗಳಿಗೆ ಮತ್ತು ಹೊಸ ಪದಾಧಿಕಾರಿಗಳಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಸೆಂಟ್ರಲ್ ಕಮಿಟಿಯ ಸದಸ್ಯ ರಮೇಶ್ ಡಿ. ರೈ, ಕನ್ನಡ ವಿಭಾಗದ ಸಂಯೋಜಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ, ಕನ್ನಡ ಶಿಕ್ಷಕಿ ಅನಿತಾ ಎಸ್. ಶೆಟ್ಟಿ, ಭಜನಾ ಶಿಕ್ಷಕಿ ವಿಮಲಾ ದೇವಾಡಿಗ ಹಾಗೂ ಕಮಿಟಿಯ ಸದಸ್ಯರಾದ ಆಶಾ ಶೆಟ್ಟಿ, ದೇವಕಿ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪಾಲಕರು ಸೇರಿ ‘ವಂದೇ ಮಾತರಂ’ ಹಾಡಿದರು. ಅನಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.





























































































































