

ಈ ಅಪರೂಪದ ಕಾಂಬಿನೇಶನ್ ಒಂದಾದರೆ ಸೋಲೂ ಸೋಲುತ್ತದೆನ್ನುವುದು ತೀರಾ ಗುಟ್ಟಿನ ವಿಚಾರವೇನಲ್ಲ. ಯಾಕೆ ಕೇಳಿ ಅಮರಣ್ಣ ಇರುವುದಕ್ಕೂ, ತೋರುವುದಕ್ಕೂ ಅಜಗಜಗಳ ಅಂತರ. ಪರಿಚಯದ ಯಾರೇ ಕಂಡರೂ ಅತ್ಯಂತ ಆಪ್ತತೆಯಿಂದ ಕಂಡವರೇ ಹೊರತು ಅಂತಸ್ಥಿನಿಂದಲ್ಲ. ಅಲ್ಲೆಲ್ಲೊ ವಿದ್ಯಾರ್ಥಿವೇತನಕ್ಕಾಗಿ, ಕಾರ್ಯಕ್ರಮ ಸಂಘಟನೆಗಾಗಿ, ದೇವತಾ ಕಾರ್ಯಗಳಿಗೆ ಕರೆ ಬಂದರೆ ಇಲ್ಲ ಅಂದವರಲ್ಲ. ಒಂದೆಜ್ಜೆ ಮುಂದಕ್ಕೆ ಹೋದರೆ ಸಮುದಾಯದ ತೀರಾ ಅಗತ್ಯ ಕಂಡ ಹುಡುಗಿಯರ ವಿವಾಹಕ್ಕಾಗಿ ಕರಿಮಣಿಗಳನ್ನು ಸಂಘದಿಂದ ಖುದ್ದು ಒದಗಿಸಿದ್ದನ್ನು ಎಲ್ಲೂ ಹೇಳಿಕೊಂಡವರಲ್ಲ. ಬಂಟ ಸಮುದಾಯವಲ್ಲದ ಹಲವು ನಮ್ಮವರು ಅಮರಣ್ಣನ ಪ್ರಸ್ತಾಪ ಬಂದಾಗ ಅವರಿಗರಿವಿಲ್ಲದೇ ಅಂತಃಕರಣದಿಂದ ಬಾಗಿ ಬಿಡುತ್ತಾರೆ. ಮಾನವೀಯ ಮೌಲ್ಯವೆಂದರೆ ಇದಲ್ಲದೆ ಮತ್ತೇನು? ಇನ್ನು ದೀಪಣ್ಣನಿಗೂ ಮೇಲಿನದ್ದೇ ಯಥಾವತ್ ಬರೆದರೆ ತುಲಾಭಾರ ಮಾಡಿದಂತಾಗಬಹುದು. ಸಮರ್ಥ ಸಂಘಟಕ ಇವರೊಳಗೆ ಅಭಿಜಾತವಾಗಿಯೇ ಹೊಕ್ಕಿ ಬಿಟ್ಟಿದ್ದಾರೆ. ಕಾರ್ಯಕ್ರಮ ವಿಭಾಗದಲ್ಲಿ ದೀಪಣ್ಣ ಮುಟ್ಟಿದೆಲ್ಲವೂ ಅಪ್ಪಟ ಬಂಗಾರ. ಆಭರಣದ ಅಂಗಡಿಯೆದುರು ರಾರಾಜಿಸುವ ಚಿನ್ನವನ್ನಷ್ಚೇ ನಾವು ನೀವು ಕಂಡಿದ್ದು. ಅಲ್ಲಿಗೆ ಬರುವುದಕ್ಕೆ ಮೊದಲು ತಿಂದ ಸುತ್ತಿಗೆಯ ಪೆಟ್ಟುಗಳನ್ನಲ್ಲ! ಸಾಕಷ್ಟು ತಯಾರಿ, ಸಮಚಿತ್ತ, ಹಿತ-ಮಿತ ನುಡಿ ಇವರ ನಿರಂತರ ಗೆಲುವುಗಳ ಟ್ರಂಪ್ ಕಾರ್ಡ್. ಯಶಸ್ವೀ ಸಂಘಟನೆಗಳ ಯಾದಿ ಬರೆಯುತ್ತಾ ಹೋದರೆ ನೀವೂ ಸ್ಕ್ರೀನ್ ಜಾರಿಸಿಬಿಟ್ಟೀರಿ!


ಬೆಂಗಳೂರು ಬಂಟರ ಸಂಘದಲ್ಲೊಂದು ಸಮಾರಂಭವಿದೆ ಎಂದರೆ, ಅಲ್ಲಿ ಎಲ್ಲರೊಂದಿಗೆ ನಮ್ಮ ಅಮರ ದೀಪರು ಎದುರುಗೊಳ್ಳುತ್ತಾರೆ. ಕೈ ಕುಲುಕಿಯೋ, ಆಲಂಗಿಸಿಯೋ ಬರಮಾಡಿಕೊಳ್ಳುತ್ತಾರೆ ಎನ್ನುವ ಪ್ರೀತಿಯಿಂದ ಊರಿನಿಂದ ಬಸ್ಸತ್ತುವ ಸ್ವಜಾತಿಯವರೊಂದಿಗೆ ವಿಜಾತಿಯವರ ಪಟ್ಟಿಯನ್ನೂ ಕೊಡಬಲ್ಲೆ. ಇವೆಲ್ಲವೂ ಸ್ಯಾಂಪಲ್ ಅಷ್ಟೆ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆ ಅಪಮಾನ, ಅವಮಾನ, ಸುಳ್ಳು ಆರೋಪಗಳಿಗೆ ಬಗ್ಗದೆ, ಸತ್ಯದ ಲೆಕ್ಕಗಳನ್ನು ಚುಕ್ತಾ ಮಾಡಿ ಮೊದಲೇ ಗೆದ್ದ ನಿಮಗೆ ಈ ಗೆಲುವು ದೂರವಿಲ್ಲ. ಅಮರದೀಪರು ಮಧುರವಾಗಿ ಹಾರ ತುರಾಯಿಗಳೊಂದಿಗೆ ಹೊರಬರುವ ಕ್ಷಣಗಳು ದೂರವಿಲ್ಲ.
ಬರಹ -ಹೆಬ್ಬಾಡಿ





























































































































