


ಕರಾವಳಿಯ ಬಂಟ ಸಮುದಾಯದ ಕ್ರೀಡಾ ಪಟುಗಳಿಗಾಗಿ ಇದೀಗ ಒಂದು ಅದ್ಭುತ ಕ್ರೀಡಾ ವೇದಿಕೆ ಸಜ್ಜಾಗಿದೆ. ಬಂಟರ ಸಂಘ ಪಳ್ಳಿ ನಿಂಜೂರು ವಲಯದ ಆಶ್ರಯದಲ್ಲಿ ಕಾರ್ಕಳ, ಕಾಪು ಮತ್ತು ಹೆಬ್ರಿ ತಾಲೂಕುಗಳ ಸಹಯೋಗದೊಂದಿಗೆ ಮೇ 16 ರಂದು ಬೃಹತ್ ‘ಬಂಟರ ಕ್ರೀಡೋತ್ಸವ -2026’ ಆಯೋಜಿಸಲಾಗಿದೆ. ಪಳ್ಳಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಹೊನಲು ಬೆಳಕಿನ ಕ್ರೀಡಾಕೂಟವು ಸಮುದಾಯದ ಒಗ್ಗಟ್ಟು ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಎಲ್ಕೆಜಿ ಮಕ್ಕಳಿಂದ ಹಿಡಿದು 50 ವರ್ಷ ಮೇಲ್ಪಟ್ಟ ಹಿರಿಯರವರೆಗೆ ವಿವಿಧ ವಯೋಮಾನದವರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು.


ಈ ಕ್ರೀಡಾ ಉತ್ಸವದಲ್ಲಿ ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಓಟದ ಸ್ಪರ್ಧೆ, ಉದ್ದ ಜಿಗಿತ, ಗುಂಡು ಎಸೆತ ಹಾಗೂ ಲಕ್ಕಿ ಸರ್ಕಲ್ನಂತಹ ವೈಯಕ್ತಿಕ ಕ್ರೀಡೆಗಳಿವೆ. ತಂಡದ ಆಟಗಳಾದ ವಾಲಿಬಾಲ್ (ಪುರುಷರಿಗೆ), ತ್ರೋಬಾಲ್ (ಮಹಿಳೆಯರಿಗೆ) ಮತ್ತು ಹಗ್ಗಜಗ್ಗಾಟ (ಪುರುಷ ಮತ್ತು ಮಹಿಳಾ ತಂಡಗಳಿಗೆ) ವಿಶೇಷ ಆಕರ್ಷಣೆಯಾಗಿದೆ. ವಾಲಿಬಾಲ್ ತಂಡದಲ್ಲಿ 10 (6+4) ಹಾಗೂ ತ್ರೋಬಾಲ್ನಲ್ಲಿ 9 (7+2) ಆಟಗಾರರಿಗೆ ಅವಕಾಶ ನೀಡಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಆಯಾ ಗ್ರಾಮದ ಬಂಟರ ಸಂಘದ ಮೂಲಕವೇ ಹೆಸರು ನೋಂದಾಯಿಸಿಕೊಳ್ಳಬೇಕು. ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅತೀ ಹೆಚ್ಚು ಅಂಕ ಗಳಿಸುವ ಬಂಟರ ಸಂಘಕ್ಕೆ ಪ್ರತಿಷ್ಠಿತ ‘ಚಾಂಪಿಯನ್ ಟ್ರೋಫಿ’ ನೀಡಿ ಗೌರವಿಸಲಾಗುವುದು ಎಂದು ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳಿ, ಬಂಟ ಕ್ರೀಡೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಪಳ್ಳಿ ದೊಡ್ಡಮನೆ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























































































































