
ಶ್ರೀ ತುಳುವೇಶ್ವರ ದೇವಸ್ಥಾನ ಬಸ್ರೂರಿನಲ್ಲಿ ಮೇ 2ರಿಂದ ನಡೆಯಬೇಕಿದ್ದ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಎಚ್.ಕೆ ದೇವಾನಂದ ಶೆಟ್ಟಿಯವರು ತಿಳಿಸಿದ್ದಾರೆ. ಈ ಕುರಿತು ಜ್ಯೋತಿಷ್ಯರ ಸಮ್ಮುಖದಲ್ಲಿ ನಡೆದ ಪ್ರಶ್ನೆ ಚಿಂತನೆ ಪ್ರಕಾರ, ಶ್ರೀ ಚಕ್ರ ಸಾನಿಧ್ಯ ಹೊಂದಿರುವ ದೇವಿ ತುಳುವೇಶ್ವರಿ ಸಾನಿಧ್ಯದ ಅಭಿವೃದ್ಧಿ ನಡೆದ ನಂತರವೇ ತುಳುವೇಶ್ವರನ ಸಾನಿಧ್ಯದ ಪೂರ್ಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ದೈವಜ್ಞರ ಸಂದೇಶ ಲಭಿಸಿದೆ. ಆದ್ದರಿಂದ ಮೊದಲಿಗೆ ತುಳುವೇಶ್ವರಿ ಸಾನಿಧ್ಯದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಪ್ರಕ್ರಿಯೆಗಳನ್ನು ಪ್ರಾರಂಭಿಸಿ, ಆ ಕಾರ್ಯಗಳು ಪೂರ್ಣಗೊಂಡ ನಂತರವೇ ತುಳುವೇಶ್ವರ ದೇವರ ಮುಂದಿನ ಕಾರ್ಯಗಳನ್ನು ಕೈಗೊಳ್ಳಬೇಕೆಂದು, ಹಾಗೆಯೇ ಭೂದಾನ ಸೇವೆಯನ್ನು ಪ್ರಾರಂಭಿಸಿ ತುಳುವೇಶ್ವರನ ಸುತ್ತಮುತ್ತಲಿನ ಭೂಮಿಯನ್ನು ಮರಳಿ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಸೂಚನೆ ನೀಡಿದರು.



ಈ ಹಿನ್ನೆಲೆಯಲ್ಲಿ ಮೇ 2ರಂದು ನಿಗದಿಯಾಗಿದ್ದ ಅಷ್ಟಮಂಗಲ ಪ್ರಶ್ನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತುಳುವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಸಂಚಾಲಕರಾದ ಬೇಲೂರು ದಿನಕರ ಶೆಟ್ಟಿ, ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ| ರಾಜೇಶ್ ಆಳ್ವ ಹಾಗೂ ಕಾರ್ಯದರ್ಶಿ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.

























































































































