

ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ವತಿಯಿಂದ ಜೂನ್ 19 ರಂದು ಸಂಜೆ 4 ಗಂಟೆಗೆ ಇಂದಿರಾ ಗಾಜಿನ ಮನೆ ಹತ್ತಿರವಿರುವ ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ‘ಬಂಟರ ಬಾಂಧವ್ಯ’ ಸಮಾರಂಭವನ್ನು ಆಯೋಜಿಸಲಾಗಿದೆ. ಬಂಟ ಸಮುದಾಯದ ಬಾಂಧವರನ್ನು ಒಗ್ಗೂಡಿಸುವ ಮತ್ತು ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಂಘದ ಸಂಸ್ಥಾಪಕರು, ಹಿರಿಯರು, ದಾನಿಗಳು ಹಾಗೂ ಮಾಜಿ ಅಧ್ಯಕ್ಷರುಗಳು ಸಮಾರಂಭ ಯಶಸ್ಸಿಗೆ ಕೈಜೋಡಿಸಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ಎ ಶೆಟ್ಟಿ ತಿಳಿಸಿದ್ದಾರೆ. ಸಂಜೆ 4 ರಿಂದ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂಜೆ 4:3೦ ರಿಂದ ಬಂಟ ಸಮುದಾಯದ ಆಸಕ್ತ ಮಕ್ಕಳು, ಮಹಿಳೆಯರು ಮತ್ತು ಪುರುಷರಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ಕ್ಕೆ ಮದುವೆಯಾದ ನೂತನ ವಧು ವರರಿಗೆ ಹಿರಿಯರಿಂದ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ. 5.30ಕ್ಕೆ ರಂಗಮಂಚದ ಕಾರ್ಯಕ್ರಮ ಮುಂದುವರಿಯಲಿದ್ದು, ಜೂನಿಯರ್ ರಾಜ್ಕುಮಾರ್, ಜೂನಿಯರ್ ಅಂಬರೀಶ್, ಜೂನಿಯರ್ ವಿಷ್ಣುವರ್ಧನ್ ಮತ್ತು ಜೂನಿಯರ್ ಕುಮಾರ್ ಸಾನು ಮುಂತಾದವರಿಂದ ಮನೋರಂಜನೆ ಕಾರ್ಯಕ್ರಮ ಜರುಗಲಿವೆ.



ಸಂಜೆ 6 ಗಂಟೆಗೆ ನೂತನ ಪದಾಧಿಕಾರಿಗಳ ಪರಿಚಯ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಉಪಸಮಿತಿ ಸಂಚಾಲಕರು ಮತ್ತು ಮಹಿಳಾ ಸಂಚಾಲಕರ ಪರಿಚಯ ಮಾಡಿಕೊಡಲಾಗುವುದು. ಸಂಜೆ 7 ಕ್ಕೆ ಸಂಘದ ಹಿರಿಯರಿಂದ ಶುಭನುಡಿ ಹಾಗೂ ರಾತ್ರಿ 8 ಗಂಟೆಗೆ ಅಧ್ಯಕ್ಷೀಯ ನುಡಿ ಇರಲಿದೆ. ರಾತ್ರಿ 8:3೦ ಕ್ಕೆ ಕಾರ್ಯಕ್ರಮದ ಮುಕ್ತಾಯದ ನಂತರ ‘ಬಂಟರ ಭೋಜನ’ದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸಮಾರಂಭಕ್ಕೆ ಬಂಟ ಸಮುದಾಯದ ಎಲ್ಲರೂ ತಮ್ಮ ಕುಟುಂಬ ಸಮೇತರಾಗಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ಎ ಶೆಟ್ಟಿ, ಉಪಾಧ್ಯಕ್ಷ ಸುಧೀರ್ ಜಿ ಶೆಟ್ಟಿ ಮತ್ತು ಶ್ರೀನಿವಾಸ ಶೆಟ್ಟಿ, ಕಾರ್ಯದರ್ಶಿ ರತ್ನಾಕರ್ ಎಂ ಶೆಟ್ಟಿ, ಖಜಾಂಚಿ ದಿನೇಶ್ ಕೆ ಶೆಟ್ಟಿ, ಸಹ ಕಾರ್ಯದರ್ಶಿ ಜ್ಯೋತಿ ಆರ್ ಶೆಟ್ಟಿ ಹಾಗೂ ಸಲಹಾ ಸಮಿತಿ, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಸಮಸ್ತರ ಪರವಾಗಿ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























































































































