
ಕಾರ್ನಿಕದ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಕರ್ನಿರೆ ಗ್ರಾಮದ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಕಾಲಾವಧಿ ನೇಮೋತ್ಸವವು ಏಪ್ರಿಲ್ 09 ರಿಂದ 11 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಏಪ್ರಿಲ್ 09 ರಂದು ರಾತ್ರಿ ಅಗರಗುತ್ತು ಕುಟುಂಬಿಕರ ಸೇವಾರ್ಥವಾಗಿ ದೀಪಾರಾಧನೆ ಬಲಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಷ್ಣುಮೂರ್ತಿ ಕ್ರಿಕೆಟ್ ಕ್ಲಬ್ (ರಿ.) ಕರ್ನಿರೆ ಇವರ ಆಶ್ರಯದಲ್ಲಿ ‘ವೈರಲ್ ವೈಶಾಲಿ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡು ಜನಮನ ಸೆಳೆಯಿತು.





ಏಪ್ರಿಲ್ 10 ರಂದು ಮಧ್ಯಾಹ್ನ ಧ್ವಜಾರೋಹಣ ನೆರವೇರಿತು. ಬಳಿಕ ಮುಂಬೈ ಉದ್ಯಮಿ ಗಂಗಾಧರ ಎನ್. ಅಮೀನ್ (ಗುಲಾಬಿ ಭವನ, ಕರ್ನಿರೆ) ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೀಪಾರಾಧನೆ ಬಲಿ ಹಾಗೂ ಭಂಡಾರ ಇಳಿಯುವ ಕಾರ್ಯಕ್ರಮ ಜರುಗಿತು. ಏಪ್ರಿಲ್ 11 ರಂದು ಮಧ್ಯಾಹ್ನ ಕರ್ನಿರೆ ಪಟ್ಟೆಗುತ್ತು ದಿವಂಗತ ಐತಪ್ಪ ಪೂಜಾರಿಯವರ ಮೊಮ್ಮಗಳು ಹಾಗೂ ಕೃಷ್ಣ ಪೂಜಾರಿಯವರ ಪುತ್ರಿ ಚೇತನಾ ಕೃಷ್ಣ ಪೂಜಾರಿ ಇವರ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮುಂಬೈ ವಿರಾರ್ನ ಸಾಗರ್ ಹೋಟೆಲ್ ಮಾಲೀಕರಾದ ಶ್ರೀಮತಿ ಮತ್ತು ಶ್ರೀ ಪ್ರದೀಪ್ ಪೂಜಾರಿ ದಂಪತಿಯ ಸೇವಾರ್ಥವಾಗಿ ಅನ್ನಸಂತರ್ಪಣೆ ಜರುಗಿತು. ಅಂದು ರಾತ್ರಿ ಕ್ಷೇತ್ರದ ಪ್ರಧಾನ ಧಾರ್ಮಿಕ ವಿಧಿಯಾದ ಕಾಲಾವಧಿ ನೇಮೋತ್ಸವವು ಭಕ್ತಿ ಸೌರಭದೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಬಿಲ್ಲವರ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ನಿರ್ದೇಶಕ ಗಂಗಾಧರ ಎನ್. ಅಮೀನ್ ಕರ್ನಿರೆ, ವಾಸುದೇವ ಶೆಟ್ಟಿ ಮಾಗಂದಾಡಿ, ಹರಿಶ್ಚಂದ್ರ ಶೆಟ್ಟಿ ಕರ್ನಿರೆಗುತ್ತು, ಗಣೇಶ್ ಸಾಲ್ಯಾನ್ ಅಗರಗುತ್ತು, ಜೈದೀಪ್ ಪಟ್ಟೆಗುತ್ತು, ಚಂದ್ರಶೇಖರ್ ಶೆಟ್ಟಿ ಕರ್ನಿರೆ ಹೊಸಮನೆ, ರವೀಂದ್ರ ಶೆಟ್ಟಿ ಸೇನರಬೆಟ್ಟು ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು. ಅಲ್ಲದೇ ಮಹಾರಾಷ್ಟ್ರ ಹೋಟೆಲ್ ಆಂಡ್ ರೆಸ್ಟೋರೆಂಟ್ ಫೆಡರೇಶನ್ನ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಮಾಜಿ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ಮುಂಬೈ ಉಪಾಧ್ಯಕ್ಷ ಪುರುಷೋತ್ತಮ್ ಎಸ್. ಕೋಟ್ಯಾನ್, ಭಾರತ್ ಬ್ಯಾಂಕಿನ ಸಿಇಒ ಮತ್ತು ಎಂ.ಡಿ ವಿದ್ಯಾನಂದ ಕರ್ಕೇರ ಮತ್ತಿತರ ಗಣ್ಯರು ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.

























































































































