
ಕಾರ್ಕಳ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಶಿಶು ಪಾಲನಾ ಕೇಂದ್ರ ಕಾರ್ಕಳ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ (5 ಲಕ್ಷ ರೂ) ಯಿಂದ ನಿರ್ಮಾಣದವಾದ ಆಪ್ತ ಸಮಾಲೋಚನಾ ಕಟ್ಟಡದ ಉದ್ಘಾಟನೆಯನ್ನು ಏಪ್ರಿಲ್ 4 ರಂದು ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಸಂಘಟಿತರಾಗಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು. ಆಪ್ತ ಸಮಾಲೋಚನಾ ಕೇಂದ್ರದಿಂದಾಗಿ ಮಹಿಳೆಯರು ಒಂದೆಡೆ ಬೆರೆಯಲು ಅನುಕೂಲವಾಗುವುದು ಎಂದರು. ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮಾತನಾಡಿ, ಸಾಂತ್ವಾನ ಕೇಂದ್ರದ ಸದುಪಯೋಗ ಪಡೆದು ಕುಟುಂಬಗಳು ನೆಮ್ಮದಿ ಕಾಣಬೇಕೆಂದರು.


ಕಟ್ಟಡದ ಗುತ್ತಿಗೆದಾರ ಗುರುಪ್ರಸಾದ್, ಉದ್ಯಮಿ ಲಕ್ಷ್ಮಣ, ಈಸಿ ಲೈಫ್ ಮ್ಯಾನೇಜರ್ ಕಾರ್ತಿಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಪರವಾಗಿ ಸೌಮ್ಯ, ಉದ್ಯಮಿ ವಿಜಯ್ ಶೆಟ್ಟಿ ಪರವಾಗಿ ಸವಿತಾ ಶೆಟ್ಟಿ, ಸಾವಿತ್ರಿ ಮನೋಹರ್, ವಸಂತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸಿಡಿಪಿಓ ಶ್ರೀಲತಾ ಶುಭ ಹಾರೈಸಿದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಶೋಧಾ ಶೆಟ್ಟಿ ಸ್ವಾಗತಿಸಿದರು. ಜಯಂತಿ ಶೆಟ್ಟಿ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಅರುಂಧತಿ ಆಚಾರ್ ವಂದಿಸಿದರು.

























































































































