
ಗೋವಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಹೋಟೆಲು ಉದ್ಯಮಿ, ಪಟ್ಲ ಫೌಂಡೇಶನ್ ಗೋವಾ ಘಟಕದ ಉಪಾಧ್ಯಕ್ಷ, ತುಳುಕೂಟ ಗೋವಾದ ಉಪಾಧ್ಯಕ್ಷ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕೊಡೆಂಕಿರಿ ಶಶಿಧರ ರೈಯವರು ಆಯ್ಕೆಯಾಗಿದ್ದಾರೆ. ದಿವಂಗತ ಬೆಳಿಯೂರು ಬೀಡು ಕಿಟ್ಟಣ್ಣ ರೈ ಹಾಗೂ ಡಿಂಬ್ರಿ ಗುತ್ತು ದುಗ್ಗಮ್ಮ ರೈಯವರ ಸುಪುತ್ರ ಕೆ ಶಶಿಧರ್ ರೈಯವರು ಹಲವಾರು ವರ್ಷಗಳಿಂದ ಶೆಟ್ಟಿ ಕೇಟರಿಂಗ್ ಸರ್ವಿಸಸ್ ಎಂಬ ಕೇಟರಿಂಗ್ ಉದ್ಯಮವನ್ನು ನಿರ್ವಹಿಸಿಕೊಂಡು ಬರುತ್ತಿದ್ದು, ಹುಟ್ಟೂರಿನ ಬಡ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ವಿದ್ಯಾರ್ಜನೆಗೆ ಸಹಕಾರ ನೀಡುತ್ತಿದ್ದಾರೆ.



ಗೋವಾದ ತುಳು ಕನ್ನಡಿಗರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಕೈ ಜೋಡಿಸಿಕೊಂಡು, ಗೋವಾ ಬಂಟರ ಸಂಘದಲ್ಲಿಯೂ ಸಿಕ್ಕಿದ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಓರ್ವ ಯಶಸ್ವೀ ಉದ್ಯಮಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹೊರಹೊಮ್ಮಿದ್ದು, ಇಂದು ಉದಾರ ಹೃದಯಿ ದಾನಿಯಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಇದೀಗ ಇವರ ಕೀರ್ತಿ ಕಿರೀಟಕ್ಕೆ ಮುತ್ತಿನ ಮಣಿ ಸೇರಿಕೊಂಡಂತೆ ಗೋವಾ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂಘಕ್ಕೆ ಭೀಮಬಲ ಬಂದಂತಾಗಿದೆ. ಶಶಿಧರ್ ರೈಯವರು ಮಡದಿ ಶ್ರೀಮತಿ ರೇಷ್ಮಾ ರೈ, ಮಗಳು ಚಿನ್ಮಯಿ ರೈ (ನಿಟ್ಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ) ಮಗ ತನ್ಮಯ್ ರೈ (ಗೋವಾ ಮಡ್ಗಾವ್ ವಿದ್ಯಾ ವಿಕಾಸ್ ಅಕಾಡೆಮಿಯಲ್ಲಿ 12 ನೇ ತರಗತಿ ವಿದ್ಯಾರ್ಥಿ) ಯವರೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ.

























































































































