2028 ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಇಟಲಿ ಘಟಕದ ಅಧ್ಯಕ್ಷರಾಗಿ ಹಿರಿಯ ಯಕ್ಷಗಾನ ಕಲಾವಿದ, ಸಾಹಿತ್ಯಾಸಕ್ತ, ಸಮಾಜಸೇವಕ ಹಾಗೂ ಅಂತರರಾಷ್ಟ್ರೀಯ ಮಟ್ಟದ ಔಷಧೋದ್ಯಮ ತಜ್ಞ ಕೌಡೂರು ನಾರಾಯಣ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿ ಬೆಳೆದಿರುವ ಕೌಡೂರು ನಾರಾಯಣ ಶೆಟ್ಟಿಯವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಎನ್.ಸಿ.ಸಿ.ಯ ಸಕ್ರಿಯ ಸದಸ್ಯರಾಗಿದ್ದ ಅವರು, 1978ರ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಲೇಜಿನ ಯಕ್ಷಗಾನ ತರಬೇತಿ ಕೇಂದ್ರದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ನಾಟಕಗಳಲ್ಲಿ ಅಭಿನಯಿಸಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪದವಿ ಪಡೆದ ಬಳಿಕ ಮುಂಬಯಿಯ ಔಷಧ ಉತ್ಪಾದನಾ ಸಂಸ್ಥೆಯಲ್ಲಿ ಸುಮಾರು ಏಳೂವರೆ ವರ್ಷ ಸೇವೆ ಸಲ್ಲಿಸಿದ ಅವರು, ಅಲ್ಲಿನ ಅನೇಕ ಹವ್ಯಾಸಿ ಯಕ್ಷಗಾನ ಮಂಡಳಿಗಳಲ್ಲಿ ನೂರಕ್ಕೂ ಅಧಿಕ ಪ್ರದರ್ಶನಗಳಲ್ಲಿ ಕಲಾವಿದರಾಗಿ ಭಾಗವಹಿಸಿದ್ದಾರೆ. ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿ, ಸುಮಾರು ನಾಲ್ಕು ದಶಕಗಳ ಹಿಂದೆಯೇ ಮುಂಬಯಿ ದೂರದರ್ಶನದಲ್ಲಿ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರಸಂಗವನ್ನು ನಿರ್ದೇಶಿಸಿ ಅಭಿನಯಿಸಿದ ಹೆಗ್ಗಳಿಕೆಯೂ ಇವರದ್ದಾಗಿದೆ. ಮುಂಬಯಿಯ ಮದರ್ ಇಂಡಿಯಾ ಫ್ರೀ ನೈಟ್ ಹೈಸ್ಕೂಲ್ನಲ್ಲಿ ಐದು ವರ್ಷಗಳ ಕಾಲ ಗಣಿತ ಹಾಗೂ ವಿಜ್ಞಾನ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಯಕ್ಷಗಾನ ತರಬೇತಿ ನೀಡಿ ಹಲವು ಪ್ರದರ್ಶನಗಳನ್ನು ಸಂಘಟಿಸಿದ್ದಾರೆ. ನಂತರ ನಾಸಿಕ್ನ ಔಷಧ ಉತ್ಪಾದನಾ ಸಂಸ್ಥೆಯಲ್ಲಿ ಆರು ವರ್ಷಗಳ ಕಾಲ ಹಿರಿಯ ಕಾರ್ಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದು, ಅಲ್ಲಿನ ತುಳುಕೂಟದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.


1995ರ ಫೆಬ್ರವರಿಯಿಂದ ಇಟಲಿಯ ವೆರೋನಾ ಸಮೀಪದ ಬಹುರಾಷ್ಟ್ರೀಯ ಔಷಧ ಉತ್ಪಾದನಾ ಸಂಸ್ಥೆಯಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ಗುಣಮಟ್ಟ ಆಶ್ವಾಸನ ಪ್ರಬಂಧಕರಾಗಿ ಹಾಗೂ ಬಳಿಕ ಗ್ಲೋಬಲ್ ಕ್ವಾಲಿಟಿ ಆಡಿಟರ್ ಆಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ವಿವಿಧ ಔಷಧ ಕಂಪನಿಗಳಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಿರುವ ಅವರು ತುಳುಕೂಟ ಬೆಂಗಳೂರು ಆಯೋಜಿಸಿದ್ದ ತುಳು ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಕಥಾ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಫೇಸ್ಬುಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ತುಳು ಲೇಖನಗಳು, ಕಥೆಗಳು ಹಾಗೂ ಸಾಂಸ್ಕೃತಿಕ ಬರಹಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದು, ಅನೇಕ ಬರಹಗಳು ತುಳು ಹಾಗೂ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರಿನ ತುಳು ಅಧ್ಯಯನ ಪೀಠ ಆಯೋಜಿಸಿರುವ ವೆಬಿನಾರ್ಗಳಲ್ಲಿ ಎರಡು ಬಾರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಅವರ ಸಮಾಜಸೇವೆ, ಸಂಘಟನಾ ಸಾಮರ್ಥ್ಯ, ತುಳು ಭಾಷೆ, ಸಾಹಿತ್ಯ, ಯಕ್ಷಗಾನ ಹಾಗೂ ತುಳುನಾಡಿನ ಸಂಸ್ಕೃತಿಯ ಮೇಲಿನ ಅಪಾರ ಬದ್ಧತೆಯನ್ನು ಪರಿಗಣಿಸಿ, ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹಾಗೂ ಕೇಂದ್ರೀಯ ಅಧ್ಯಕ್ಷರಾದ ಡಾ. ಅವಿನ್ ಬಿ. ಆಳ್ವ ಅವರು ಕೌಡೂರು ನಾರಾಯಣ ಶೆಟ್ಟಿ ಅವರನ್ನು ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಇಟಲಿ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ ನ ಗೌರವಾಧ್ಯಕ್ಷ ಹರಿನಾರಾಯಣ ದಾಸ ಅಸ್ರಣ್ಣ, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ನಿರ್ದೇಶಕ ಡಾ| ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಕರ್ನಾಟಕ ರಾಜ್ಯ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಅವರು ಹರ್ಷದಿಂದ ಸ್ವಾಗತಿಸಿ, ಕೌಡೂರು ನಾರಾಯಣ ಶೆಟ್ಟಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ನೇತೃತ್ವದಲ್ಲಿ ಇಟಲಿಯ ತುಳುವರನ್ನು ಮತ್ತಷ್ಟು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಯಕ್ಷಗಾನ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಜಾಗತಿಕ ಮಟ್ಟದಲ್ಲಿ ತುಳುವರ ಏಕತೆ ಬಲಪಡಿಸುವ ಕಾರ್ಯಕ್ಕೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.




















































































































