
ಹಿಂದಿನ ಕೂಡು ಕುಟುಂಬದ ಶಕ್ತಿಯೇ ನಮ್ಮ ಬಂಟ ಸಮಾಜದ ಶಕ್ತಿಯಾಗಿತ್ತು. ಅಂತಹ ಕೂಡು ಕುಟುಂಬದ ಬಾಂಧವ್ಯ ಇರುವುದರಿಂದ ಶಕ್ತಿಯುತವಾಗಿ ಬೆಳೆದು ನಿಂತವರು ನಾವುಗಳು. ನಮ್ಮ ಸಂಸ್ಕಾರ ಸಂಸ್ಕ್ರತಿಯನ್ನು ಎಲ್ಲಿಯೂ ಬಿಟ್ಟು ಕೊಡದೆ ಸ್ವ ಸಾಮರ್ಥ್ಯದಿಂದ ಸಮಾಜದಲ್ಲಿ ಶಕ್ತಿಯನ್ನು ತೋರಿಸಿದ ನಮಗೆ ನಾವೇ ಸಾಟಿ. ತ್ಯಾಗ ಮತ್ತು ಸೇವೆ ಎಂಬ ಆದರ್ಶಗಳನ್ನು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅನುಗುಣವಾಗಿ ಎಲ್ಲಾ ಸಮಾಜದ ಜೊತೆ ಉತ್ತಮ ಬಾಂಧವ್ಯವನ್ನು ಪಾಲಿಸಿಕೊಂಡು ಸಮಾಜದ ಒಳಿತಿಗಾಗಿ ಸೇವೆಯಲ್ಲಿರುವವರು ನಾವು. ಸಾಮರ್ಥ್ಯಕ್ಕೆ ಅನುಗುಣವಾಗಿ ನಮ್ಮಲ್ಲಿರುವ ದೊಡ್ಡ ಮನಸ್ಸು, ವ್ಯಕ್ತಿತ್ವ, ಸೇವಾ ಮನೋಭಾವನೆ ಇರುವುದರಿಂದ ನಾವು ಇಂದು ಮೇಲ್ದರ್ಜೆಗೆ ಏರಿದವರು. ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಮನುಷ್ಯತ್ವ ಎಂಬ ಪದಕ್ಕೆ ಅನುಗುಣವಾಗಿ ಬದುಕಿ ನಾವು ಸಮಾಜಕ್ಕೆ ಮಾದರಿಯಾಬೇಕು. ಜೀವನದಲ್ಲಿ ತೃಪ್ತಿ ಎಂಬುದು ಇದ್ದರೆ ದುರಾಸೆ ಬರುವುದಿಲ್ಲ ಹಾಗೂ ಜೀವನ ಸಮಾಧಾನಕರವಾಗಿರುತ್ತದೆ. ವ್ಯಕ್ತಿಯ ಮೌಲ್ಯಮಾಪನ ಅವನ ಚಹರೆ ಅಥವಾ ವಸ್ತ್ರದಿಂದ ಕಾಣುವುದಿಲ್ಲ. ಮನಸ್ಸು ಮತ್ತು ಅವನ ಸೇವಾ ಕಾರ್ಯ, ಧರ್ಮ ಕಾರ್ಯದಲ್ಲಿ ಕಾಣಬೇಕು. ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡಾಗ ಅದರ ಬಗ್ಗೆ ತಿಳಿದುಕೊಳ್ಳಲು ಸಾದ್ಯ. ಶಾಂತಿ ಸೌಹಾರ್ದತೆ ಸಮಾಜದಲ್ಲಿ ನೆಲೆಯಾದರೆ ದೇಶ ಸದೃಡವಾಗಲು ಸಾದ್ಯ. ಈ ನಿಟ್ಟಿನಲ್ಲಿ ನಾವು ಮುಂದುವರಿಯಬೇಕು. ನಮ್ಮ ಬಂಟ ಸಮುದಾಯ ಇಂದು ಎಲ್ಲೇ ಇದ್ದರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಸಾಧನೆ ಮಾಡಿ ಒಂದಂಶವನ್ನು ಸಮಾಜಕ್ಕಾಗಿ ಅರ್ಪಿಸಿಕೊಂಡವರು ಎಂದು ಕಾರ್ಕಳ ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದಯ್ ಶೆಟ್ಟಿ ಮುನಿಯಾಲು ನುಡಿದರು. ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೊತ್ಸವ ಸಮಾರಂಭವು ಮಾರ್ಚ್ 6 ರಂದು ನಿಗ್ಡಿಯ ಜಿ.ಡಿ ಮದ್ಗುಲ್ಕರ್ ನಾಟ್ಯಗೃಹದಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಉದಯ ಶೆಟ್ಟಿಯವರು ಸಮಾಜ ಸೇವೆ, ಸಾರ್ವಜನಿಕ ಸೇವೆಗಾಗಿ ನಾವು ಸಮಾಜದಲ್ಲಿ ಗುರುತಿಸಿಕೊಂಡಿದ್ದೇವೆ. ಕಾರ್ಯ ಯಾವುದೇ ಇರಲಿ ಸಮಾಜಕ್ಕಾಗಿ ಧನಾತ್ಮಕ ಚಿಂತನೆ ನಮ್ಮಲ್ಲಿಯ ಹೃದಯ ವೈಶಾಲ್ಯತೆಯನ್ನು ಬೆಳೆಸುತ್ತದೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಂಬಾ ಖುಷಿಯಾಗಿದೆ. ಸಮಾಜದ ಬದಲಾವಣೆಯ ಜೊತೆ ನಾವು ಕೂಡಾ ಹೇಗೆ ಬದಲಾಗಿದ್ದೇವೆ ಎಂಬುದನ್ನು ಉತ್ತಮ ಸಾಂಸ್ಕ್ರತಿಕ ರೂಪಕದಲ್ಲಿ ಇಲ್ಲಿ ತೋರಿಸಿಕೊಟ್ಟಿದ್ದಾರೆ. ಪಿಂಪ್ರಿ ಬಂಟರ ಸಂಘ ಸಮಾಜದ ಅಭಿವೃದ್ದಿಗೋಸ್ಕರ ಮತ್ತು ಸಮಾಜ ಬಾಂಧವರ ಬೆಳವಣಿಗೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಮುಂದೆ ಸಂಘದ ಭವನ ನಿರ್ಮಾಣವಾಗಿ ಮತ್ತಷ್ಟು ಬೆಳವಣಿಗೆ ಕಾಣಲಿ. ನನ್ನ ಸಹಕಾರ ನಿಮ್ಮೊಂದಿಗೆ ಯಾವತ್ತೂ ಇರಲಿದೆ. ನನಗೆ ಇಲ್ಲಿ ಪ್ರೀತಿಯಿಂದ ಸನ್ಮಾನ ಮಾಡಿ ಗೌರವಿಸಿದ್ದೀರಿ ಇದಕ್ಕೆ ಚಿರ ಋಣಿಯಾಗಿದ್ದೇನೆ ಎಂದರು.


ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ಜಗದೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗೌರವ ಅತಿಥಿ ಪನ್ವೇಲ್ ನ ನಗರ ಸೇವಕ ಸಂತೋಷ್ ಶೆಟ್ಟಿ, ಸಂಘದ ನಿಕಟಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷರುಗಳಾದ ಪ್ರಸಾದ್ ಶೆಟ್ಟಿ, ಹರೀಶ್ ಶೆಟ್ಟಿ ಕುರ್ಕಾಲ್, ಪ್ರಧಾನ ಕಾರ್ಯದರ್ಶಿ ರವಿ ಶೆಟ್ಟಿ, ಕಾರ್ಯಾಧ್ಯಕ್ಷರುಗಳಾದ ಲೀಲಾಧರ್ ಶೆಟ್ಟಿ, ಮಹೇಶ್ ಎಸ್ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಶೆಟ್ಟಿ ಉಜಿರೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ಪೆಲತ್ತೂರು, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಭಾ ಎಸ್ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯ ಶೆಟ್ಟಿ ರೆಂಜಾಳ, ಯುವ ವಿಭಾಗದ ಕಾರ್ಯಾಧ್ಯಕ್ಷ ಶುಭಂ ಶೆಟ್ಟಿ, ಕಾರ್ಯಾಧ್ಯಕ್ಷೆ ಕು. ಅನ್ವಿತಾ ವೈ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ದೀಪ ಪ್ರಜ್ವಲಿಸಿ, ಕಲ್ಪವೃಕ್ಷದ ಹೂ ಅರಳಿಸಿ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ಎರ್ಮಾಳ್ ಸೀತಾರಾಮ್ ಶೆಟ್ಟಿ, ಮಹೇಶ್ ಹೆಗ್ಡೆ, ವಿಜಯ್ ಶೆಟ್ಟಿ ಬೋರ್ಕಟ್ಟೆಯವರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿಯನ್ನು ಅವಿನಾಶ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ವರದಿಯನ್ನು ದೀಪಾ ಪಿ ಶೆಟ್ಟಿ ಸಭೆಯಲ್ಲಿ ಮಂಡಿಸಿದರು. ಅತಿಥಿ ಗಣ್ಯರನ್ನು ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಗೌರವಿಸಿದರು. ಮೀರಾ ಭಯಂದರ್ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಉದಯ್ ಶೆಟ್ಟಿ ಪೆಲತ್ತೂರು ಹಾಗೂ ಪುಣೆ ಪಿಂಪ್ರಿ ಚಿಂಚ್ವಾಡ್ ನ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳನ್ನು ಗೌರವಿಸಲಾಯಿತು.


ಮುಖ್ಯ ಅತಿಥಿಗಳಾದ ಉದಯ್ ಶೆಟ್ಟಿ ಮುನಿಯಾಲು ಮತ್ತು ಗೌರವ ಅತಿಥಿಗಳಾದ ಸಂತೋಷ್ ಶೆಟ್ಟಿಯವರನ್ನು ಶಾಲು, ಹಾರ, ಸ್ಮರಣಿಕೆ, ಭಕ್ತಿ ಶಕ್ತಿ ಪ್ರತಿಮೆ ನೀಡಿ, ಸಂಘದ ವತಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು. ಇವರ ಪರಿಚಯವನ್ನು ಕ್ರಮವಾಗಿ ಅನುಸೂಯ ಎಸ್ ಶೆಟ್ಟಿ ಮತ್ತು ಮಲ್ಲಿಕಾ ಡಿ ಶೆಟ್ಟಿಯವರು ಓದಿದರು. ಎರ್ಮಾಳ್ ತೆಂಕ ಬಡಾ ಕಂಬಳದ ಆಯೋಜಕರಲ್ಲಿ ಪ್ರಮುಖರು ಹಾಗೂ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಾಗೂ ಎರ್ಮಾಳ್ ಕಂಬಳದಲ್ಲಿ ಪ್ರಥಮ ಬಂಗಾರ ಪದಕ ಪಡೆದ ಸಂಘದ ಪ್ರಮುಖರಾದ ಪುಚ್ಚೊಟ್ಟು ಬೀಡು ಎರ್ಮಾಳ್ ಬಾಲಚಂದ್ರ ಶೆಟ್ಟಿ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಸಮಾಜ ಸೇವಕ ಸೀತಾರಾಮ್ ಶೆಟ್ಟಿ ಎರ್ಮಾಳ್ ರವರನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಸತ್ಕರಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಸಮಾಜಕ್ಕೆ ಮತ್ತು ಸಮಾಜ ಸೇವೆಗೆ ಉತ್ತೇಜನ ನೀಡುವಂತಹ ನುಡಿಗನ್ನಾಡಿದರು. ಈ ಬಾರಿ ಬಂಟ್ಸ್ ಒಲಂಪಿಕ್ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಕೆಲಸ ಮಾಡಿದ ಯುವ ವಿಭಾಗದ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಸತ್ಕರಿಸಲಾಯಿತು. ಇವರ ವರದಿಯನ್ನುಸುಧಾಕರ್ ಶೆಟ್ಟಿ ಪೆಲತ್ತೂರು ಓದಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸುಧಾಕರ್ ಶೆಟ್ಟಿ ಪೆಲತ್ತೂರುರವರ ನಿರ್ದೇಶನದಲ್ಲಿ ಸಮಾಜದ ಏಳಿಗೆಯ ಮತ್ತು ಸಮಾಜ ಸೇವೆಯ ಬಗ್ಗೆ ಅರ್ಥಪೂರ್ಣ ಸಾಂಸ್ಕ್ರತಿಕ ಕಥಾ ನೃತ್ಯ ವೈಭವ ರೂಪಕ ನಡೆಯಿತು. ಹೆಚ್ಚಿನ ಸಂಖ್ಯೆಯ ಬಂಟ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು, ಹಿರಿಯರು, ದಾನಿಗಳು, ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗದವರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ನಂತರ ತುಳುನಾಡ ಶೈಲಿಯ ಪ್ರೀತಿ ಭೋಜನ ನಡೆಯಿತು. ಶ್ರೀಮತಿ ಅರ್ಪಿತಾ ಪಿ ಶೆಟ್ಟಿ, ಅವಿನಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಶೆಟ್ಟಿಯವರು ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ, ಪುಣೆ


























































































































