

ಪ್ರಸ್ತುತ ಕಾಲದಲ್ಲಿ ಜನಪ್ರತಿನಿಧಿಯೆಂದರೇ ಏನೋ ರಾಜ ಎಂಬಂತೆ ಭಾಸವಾಗುತ್ತದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವೆ ಮಾಡುವುದಕ್ಕಾಗಿ ಎಂಬುದನ್ನು ಮರೆತಂತಿದೆ. ಕಾರಿನಲ್ಲಿ ನಾಲ್ಕು ಜನರೊಂದಿಗೆ ಬಂದು ಇಳಿದು ಅದನ್ನು ನಮ್ಮೂರ ಕಾಯೋ ದೊರೆಯೇ ಎಂಬ ಹಾಡಿಗೆ ವಿಡಿಯೋ ಮಾಡಿ ಹಾಕಿದರೇ ಆಗಲಿಲ್ಲ. ಎಷ್ಟೇ ದೊಡ್ಡ ಜನಪ್ರತಿನಿಧಿಯಾಗಲಿ ಜನಸಾಮಾನ್ಯ ಕರೆ ಮಾಡಿದರೆ ಸ್ವೀಕರಿಸುವ ಸೌಜನ್ಯತೆ ಇರಬೇಕು. ಒಂದೊಮ್ಮೆ ಕಾರ್ಯಕ್ರಮದಲ್ಲೋ, ಸಭೆಯಲ್ಲೋ ಇದ್ದರೆ ಮಿಸ್ ಕಾಲ್ ನೋಡಿ ವಾಪಾಸು ಕರೆ ಮಾಡುವ ಪರಿಜ್ಞಾನ ಇರಬೇಕು. ಜನರ ತೆರಿಗೆಯ ಹಣದಿಂದ ಓಡಾಡಲು ಕಾರು, ಪೋನ್ ಬಿಲ್, ಸಂಬಳ ತಿನ್ನುವ ನೀವುಗಳು ಜನರ ಸಮಸ್ಯೆ ಅಥವಾ ನೋವಿಗೆ ಸ್ಪಂದಿಸುವ ಗುಣ, ಯೋಚನೆ ನಿಮ್ಮಲ್ಲಿ ಇಲ್ಲದಿದ್ದರೆ ನೀವು ಯಾವ ಕೆಲಸ ಮಾಡಿದರೂ, ಎಷ್ಟೇ ದೊಡ್ಡ ವ್ಯಕ್ತಿಯಾದರೂ ನಗಣ್ಯವೇ. ಗೆದ್ದು ಶಾಸಕರಾಗಿ, ಸಂಸದರಾಗಿ, ಪರಿಷತ್ ನ ಹುದ್ದೆಯನ್ನು ಪಡೆದ ನಂತರ ಜನಸಾಮಾನ್ಯರ ಜೊತೆ ಬೆರೆಯುವುದನ್ನು ಕಳಿಯಿರಿ. ಗೆದ್ದ ನಂತರ ನೀವು ಒಂದು ಪಕ್ಷದ ವ್ಯಕ್ತಿಯಲ್ಲ ಆಯಾ ಕ್ಷೇತ್ರದ ಜನಪ್ರತಿನಿಧಿಯಾಗಿರುತ್ತೀರಿ ನೆನಪಿಡಿ. (ಕೆಲವರು ಕರೆ ಸ್ವೀಕರಿಸುವ ಹಾಗೂ ವಾಪಾಸ್ ಕರೆ ಮಾಡುವವರು ಇದ್ದರೆ). ಕೆಲವೊಂದು ಜನಪ್ರತಿನಿಧಿಗಳಲ್ಲಿ ಪೋನ್ ಇಲ್ಲ ಅಂದುಕೊಳ್ಳಬೇಕು ಆ ರೀತಿಯವರು ಇದ್ದಾರೆ. ಅದರಂತೆ ಅವರ ಪಿಎ ಗಳೋ ಅವರಲ್ಲಿ ಮಾತಾಡಲು ಲೈಸೆನ್ಸ್ ಪಡೆಯಬೇಕು. ಅವರೇ ಜನಪ್ರತಿನಿಧಿಗಳಂತೆ ಬಿಂಬಿಸುತ್ತಾರೆ.

ಬದಲಾದ ಕಾಲಘಟ್ಟದಲ್ಲಿ ಒಂದು ಸಲ ಆಯ್ಕೆಯಾದವರು ನಂತರ ಚುನಾವಣೆಗೆ ನಿಂತರೇ ತಮ್ಮ ಸ್ವಂತ ಬಲದಲ್ಲಿ, ಜನಸಾಮಾನ್ಯರ ನೈಜ ಪ್ರೀತಿ ಆಶೀರ್ವಾದದಿಂದ ಗೆಲ್ಲಬೇಕು ವಿನಃ ಅನ್ಯತವಲ್ಲ. ಮೊದಲು ಜನಪ್ರತಿನಿಧಿಗಳಾದ ನೀವುಗಳು ನಮ್ಮ ಅಂದರೇ ಜನರ ಸೇವಕರು ಹೊರತು ನಾಯಕರಲ್ಲ. ಒಂದೊಮ್ಮೆ ಒಂದು/ ಎರಡು/ಮೂರು ಅವಧಿ ಸೇವೆ ಮಾಡಲು ಅವಕಾಶ ಸಿಕ್ಕಿದರೆ ಅದನ್ನು ಸರಿಯಾಗಿ ಬಳಸಿಕೊಂಡು ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸವನ್ನು ಜನರ ವಿಶ್ವಾಸವನ್ನು ಪಡೆದು ಮುನ್ನಡೆಯುವ ಗುಣ ನಿಮಗಿರಲಿ. ಕೆಲವು ನಾಯಕರು ಹೇಳೋ ಮಾತು ಅಂತ ಸಣ್ಣ ಸಣ್ಣ ಕೆಲಸ ಮಾಡುವುದು ನಮ್ಮ ಕೆಲಸವಲ್ಲ ಅಥವಾ ಎಷ್ಟು ಸಲ ಕರೆ ಮಾಡುತ್ತಾನೆ ಎಂದು ಹೇಳೋ ನಾಯಕರೇ, ಅವೆಲ್ಲವನ್ನೂ ಸಹಿಸುವ ತಾಳ್ಮೆ ನಿಮ್ಮಲ್ಲಿ ಇಲ್ಲದಿದ್ದರೆ ನೀವುಗಳು ಜನಪ್ರತಿನಿಧಿಯಾಗಲು ಅರ್ಹರಲ್ಲ. ಮತ್ತೊಮ್ಮೆ ಹೇಳ ಬಯಸುತ್ತೇನೆ ಒಂದು ಜಿಲ್ಲೆಯ ಸಂಸದರಿಗೂ ಮತ್ತು ಒಂದು ಜಿಲ್ಲೆಯ ಯಾವುದೇ ತಾಲೂಕಿನಿಂದ ಯಾವ ಕ್ಷೇತ್ರದ ಶಾಸಕರಿಗೂ ಅಥವಾ ಅವರ ಅಪ್ತ ಸಹಾಯಕರಿಗೂ ಕರೆ ಮಾಡಿದರೆ ಕರೆ ಸ್ವೀಕರಿಸಿ, ಇಲ್ಲವೇ ವಾಪಾಸ್ ಕರೆ ಮಾಡಿ ಯಾಕೆಂದರೆ ಅವರು ನಿಮ್ಮ ಮೇಲೆ ನಂಬಿಕೆ, ಆಸೆಯನ್ನಿಟ್ಟು ನಮ್ಮ ಕೆಲಸ, ಸಮಸ್ಯೆ ಪರಿಹಾರ ಇವರಿಂದ ಆಗಬಹುದು ಎಂದು ಕರೆ ಮಾಡುತ್ತಾರೆ. ಅವರಿಗೆ ನೋವುಂಟು ಮಾಡದೇ ಮಾತಾನಾಡಿ ಪರಿಹರಿಸುವ ವ್ಯವಸ್ಥೆ ಮುಂದಾಗಿ. ಯಾಕೆಂದರೆ ಎಲ್ಲಾ ಕ್ಷೇತ್ರದ ಜನಪ್ರತಿನಿಧಿಗಳು ಆತ್ಮೀಯರೇ ಆಗಿರುವಿರಿ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗದೇ ಎಲ್ಲರಿಗೂ ಸೇರಿಸಿ ಬರೆದಿದ್ದೇನೆ. (ಸ್ವೀಕರಿಸುವವರು ಯಾರು, ಸ್ವೀಕರಿಸದವರಾರು ನಮಗೆ ತಿಳಿದಿದೆ. ಮುಂದೆ ಮರುಕಳಿಸಿದರೆ ದಾಖಲೆ ಸಮೇತ ಬರೆಯೋಣ) ಕುಂಬಳಕಾಯಿ ಕದ್ದವ ಮಾತ್ರ ಹೆಗಲು ನೋಡಿಕೊಂಡರೇ ಸಾಕು ಅನ್ಯರಿಗೆ ಇದು ಅನ್ವಯಿಸುವುದಿಲ್ಲ.
ತಪ್ಪಿದರೆ ತಿದ್ದುವ ಗುಣ ನಮ್ಮ ತುಳುವರಲ್ಲಿದೆ. ತಿದ್ದಿಕೊಳ್ಳುವ ದೊಡ್ಡ ಮನಸ್ಸು ನಮ್ಮ ಜನಪ್ರತಿನಿಧಿಗಳಲ್ಲಿದೆ. ಯಾಕೆಂದರೆ ತುಳುನಾಡ ಮಣ್ಣಿನಲ್ಲಿ ಜನಪ್ರತಿನಿಧಿಯಾಗಲು ದೈವ ದೇವರ ಆಶೀರ್ವಾದ ಬೇಕು. ಅದು ನಿಮಗೆ ಸಿಕ್ಕಿದೆ. ಹೋಯ್ ಇದು ನನ್ನ ಸಮಸ್ಯೆಯಲ್ಲ, ಸಾಮಾನ್ಯ ಜನರ ಸಮಸ್ಯೆ.
ಬರಹ : ಮನ್ಮಥ ಶೆಟ್ಟಿ ಪುತ್ತೂರು (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)

























































































































