
ಗ್ರಾಮೀಣ ಪ್ರದೇಶದ ಬಂಟ ಸಮಾಜ ಬಂಧುಗಳ ಆಶೋತ್ತರಗಳಿಗೆ ಸ್ಪಂದಿಸುವ ಮಹತ್ವದ ಯೋಜನೆಯ ಮೂಲಕ ವಿರಾರ್ ಪರಿಸರದ ಪ್ರಸಿದ್ಧ ಸಮಾಜ ಸೇವಕ ಉದ್ಯಮಿ ಡಾ| ವಿರಾರ್ ಶಂಕರ್ ಬಿ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ಮೀರಾ- ಡಹಾಣು ಬಂಟರ ಸಂಘದ 17ನೇ ವರ್ಷದ ವಾರ್ಷಿಕೋತ್ಸವವು ಮಾರ್ಚ್ 14ರಂದು ಸಂಜೆ 3.30ಕ್ಕೆ ಮೂರನೇ ಮಹಡಿ ಆರ್ಣಾ ಸ್ವರ್ಣ ಬ್ಯಾಂಕ್ವೆಟ್ ಹಾಲ್, ದತ್ತಾನಿ ಮಾಲ್, ವಸಾಯಿ ಪಶ್ಚಿಮ ಇಲ್ಲಿ ಗಣ್ಯಾತಿ ಗಣ್ಯರ ಕೂಡುವಿಕೆಯಲ್ಲಿ ಬೇರೆಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಮಹಿಳಾ ವಿಭಾಗದಿಂದ ಹಳದಿ ಕುಂಕುಮ ಕಾರ್ಯಕ್ರಮ, ಮಕ್ಕಳಿಂದ ಮತ್ತು ಮಹಿಳೆಯರಿಂದ ನೃತ್ಯ ವೈಭವ ನಡೆಯಲಿದೆ. ಜಗದೀಶ್ ಶೆಟ್ಟಿ ಕೆಂಚನಕೆರೆ ಅವರು ಬರೆದು ನಿರ್ದೇಶಿಸಿದ ತುಳು ಸಾಮಾಜಿಕ ನಾಟಕ ‘ಇಲ್ಲ್ – ಒಕ್ಕೆಲ್’ ಪ್ರದರ್ಶನಗೊಳ್ಳಲಿದೆ. ಬಂಟರ ಸಮುದಾಯವು ಭಾರತದ ಪ್ರಮುಖ ಮತ್ತು ಗೌರವನೀಯ ಸಮುದಾಯಗಳಲ್ಲಿ ಒಂದಾಗಿದೆ. ಈ ಸಮುದಾಯವು ಬಹುಕಾಲದಿಂದ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶ್ರಮ, ಪ್ರಾಮಾಣಿಕತೆ ಮತ್ತು ಒಗ್ಗಟ್ಟಿನ ಮೂಲಕ ಬಂಟರ ಸಮುದಾಯವು ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಪಡೆದಿದೆ. ಬಂಟರ ಸಂಘ ಮುಂಬಯಿ ಬೇರೆ ಬೇರೆ ಪ್ರಾದೇಶಿಕ ಸಮಿತಿಯ ಮೂಲಕ ತಮ್ಮದೇ ಆದ ರೀತಿಯಲ್ಲಿ ಕಾರ್ಯಚಟುವಟಿಕೆಯನ್ನು ಮಾಡುತ್ತಾ, ಸಮಾಜದ ಬಂಧುಗಳಿಗೆ ಉಪಯುಕ್ತವಾದ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಆದರೆ, ಮುಂಬಯಿಯಲ್ಲಿದ್ದ ಬಂಟರ ಸಂಘದಲ್ಲಿ ಮೀರಾರೋಡ್ ನಿಂದ ಡಹಾಣುವರೆಗಿನ ಗ್ರಾಮೀಣ ಪ್ರದೇಶದ ಸಮಾಜ ಬಾಂಧವರಿಗೆ ಭಾಗವಹಿಸುವುದು ಬಹಳ ಕಷ್ಟಕರ ಸಂಗತಿಯಾಗಿತ್ತು. ಈ ಪ್ರದೇಶದಲ್ಲಿಯೂ ಬಂಟರ ಸಮುದಾಯದ ಜನರನ್ನು ಒಗ್ಗೂಡಿಸಲು ಒಂದು ಸಂಘಟನೆಯ ಅವಶ್ಯಕತೆ ಇತ್ತು. ಇಲ್ಲಿಯೂ ಸಮಾಜ ಬಾಂಧವರು ಒಗ್ಗೂಡಲು ಬಹಳ ಅವಶ್ಯವಾಗಿ ಸಂಘ ಸ್ಥಾಪಿಸಲೇಬೇಕಾದ ಅನಿವಾರ್ಯವಿತ್ತು. ಅಂತಹ ಸಂದರ್ಭದಲ್ಲಿ ಧೀಮಂತ ಗೌರವಯುತ ನಾಯಕ, ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿರುವ ಡಾ| ವಿರಾರ್ ಶಂಕರ್ ಬಿ ಶೆಟ್ಟಿ ಅವರ ಮುಂದಾಳತ್ವದಲ್ಲಿ 2009ರಲ್ಲಿ ಉಡುಪಿ ಪೇಜಾವರ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಸ್ವಾಮೀಜಿಗಳ ಹಸ್ತದಿಂದ ಉದ್ಘಾಟನೆಗೊಂಡ ಸಂಸ್ಥೆಯೇ ಮೀರಾ-ಡಹಾಣು ಬಂಟರ ಸಂಘ. ಮುಂಬಯಿಯಲ್ಲಿ ಇಂತಹ ಉಪನಗರ ಪ್ರದೇಶಗಳ ಬಂಟರ ಸಮುದಾಯದ ಜನರನ್ನು ಒಗ್ಗೂಡಿಸಲು ಸ್ಥಾಪಿತವಾದ ಪ್ರಮುಖ ಸಾಮಾಜಿಕ ಸಂಘಟನೆಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು.

ಈಗ ಸಂಸ್ಥೆಯು ಯಶಸ್ವಿ 17 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ಸಂಘ ಸ್ಥಾಪನೆಗೊಳ್ಳಲು ಹಲವಾರು ವ್ಯಕ್ತಿಗಳ ಶ್ರಮವೂ ಇದೆ. ಅವರುಗಳಲ್ಲಿ ಬೊಯಿಸರ್ ನ ಭುಜಂಗ ಶೆಟ್ಟಿ ಅವರಂತಹ ಸಮರ್ಥ ಸಂಘಟಕರು ಹಾಗೂ ಮೀರಾ ಭಾಯಂದರ್ ನ ಸುರೇಶ್ ಶೆಟ್ಟಿ ಗಂಧರ್ವ, ಸಂತೋಷ್ ರೈ ಬೆಳ್ಳಿಪಾಡಿ ಹಾಗೂ ಪಾಲ್ಘರ್ ವಿಭಾಗದ ಘಟಾನುಘಟಿಗಳು ಡಹಾಣು ವಲಯದ ರವೀಂದ್ರ ಶೆಟ್ಟಿ ಸಹೋದರರು, ದಾಮೋದರ ಶೆಟ್ಟಿ , ಸಂತೋಷ್ ಶೆಟ್ಟಿ ಬಳಗ, ನಾಯ್ಗಾಂವು ವಿರಾರ್ ವಲಯದ ಪ್ರಕಾಶ್ ಎಂ ಹೆಗ್ಡೆ, ನಾಗರಾಜ್ ಎನ್ ಶೆಟ್ಟಿ, ರಮೇಶ್ ವಿ ಶೆಟ್ಟಿ ಕಾಪು, ದಿ. ಭಾಸ್ಕರ್ ಶೆಟ್ಟಿ ಕುಬೇರ, ಅಡ್ವಕೇಟ್ ರಾಮಪ್ರಸಾದ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ (ಮಾಮ)ಇವರೆಲ್ಲರ ಆಸಕ್ತಿಯಿಂದ, ಮುತುವರ್ಜಿಯಿಂದ, ಸಹಕಾರದಿಂದ ಈ ಸಂಘವು ಬೆಳೆದು ನಿಂತಿದೆ. ಸಂಘವು 4 ಮುಖ್ಯ ವಲಯಗಳನ್ನು ಹೊಂದಿದ್ದು, ಅವುಗಳೆಂದರೆ ಮೀರಾ-ಭಾಯಂದರ್ ವಲಯ, ನಾಯ್ಗಾಂವು – ವಿರಾರ್ ವಲಯ, ಪಾಲ್ಘರ್ – ಬೊಯಿಸರ್ ವಲಯ, ಡಹಾಣು ವಲಯಗಳು ತನ್ನದೇ ಆದ ರೀತಿಯಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ಸಂಘದ ಸ್ಥಾಪಕ ಅಧ್ಯಕ್ಷರಾಗಿ ಪ್ರಕಾಶ್ ಎಂ ಹೆಗ್ಡೆ ವಸಾಯಿ, ನಂತರದ ಅಧ್ಯಕ್ಷರುಗಳಾದ ಭುಜಂಗ ಶೆಟ್ಟಿ ಬೊಯಿಸರ್, ಅರವಿಂದ ಶೆಟ್ಟಿ ಮೀರಾ ರೋಡ್ ಇವರುಗಳ ಸೇವಾ ಕಾರ್ಯಗಳು ಸಮಾಜದ ಏಳಿಗೆಗಾಗಿ ಬಹಳಷ್ಟು ಶ್ರಮಿಸುತ್ತಿರುತ್ತಾರೆ. ಪ್ರಸ್ತುತ ಅಧ್ಯಕ್ಷರಾಗಿ ಪ್ರಕಾಶ್ ಎಂ ಹೆಗ್ಡೆಯವರು ಸಂಘದ ಜವಾಬ್ದಾರಿಯನ್ನು ಹೊತ್ತು ಕಾರ್ಯ ನಿರ್ವಹಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಸಮಾಜ ಬಾಂಧವರಿಗಾಗಿ ಸ್ಥಾಪಿತಗೊಂಡ ಸಂಸ್ಥೆಯು ಆರಂಭದಲ್ಲಿ ಸಣ್ಣಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಂತರ ಸದಸ್ಯರ ಪರಿಶ್ರಮ ಮತ್ತು ಸಹಕಾರದಿಂದ ಅದು ದೊಡ್ಡ ಸಂಸ್ಥೆಯಾಗಿ ಬೆಳೆಯಿತು. ಸಮುದಾಯದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಪರಸ್ಪರ ಸಹಾಯ ಮಾಡುವುದು ಮತ್ತು ಸಮುದಾಯದ ಒಗ್ಗಟ್ಟನ್ನು ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಈ ಸಂಘವು ಶಿಕ್ಷಣ ಸಂಸ್ಕೃತಿ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವೈದ್ಯಕೀಯ ನೆರವುಗಳನ್ನು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಶಿಕ್ಷಣ ಸಹಾಯ ಮತ್ತು ಮಾರ್ಗದರ್ಶನ, ಸಮುದಾಯದ ಆರ್ಥಿಕವಾಗಿ ಹಿಂದುಳಿದವರಿಗಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯ ಹಸ್ತ ನೀಡಲಾಗುತ್ತಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಬ್ಬಗಳು ಮತ್ತು ಸಾಧನೆ ಮಾಡುತ್ತಿರುವ ಸಮುದಾಯದ ಜನರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ತಮ್ಮ ತಮ್ಮ ವಲಯಗಳಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ, ವೈದ್ಯಕೀಯ, ಭಜನಾ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜದ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬರುತ್ತಿದೆ. ಮೀರಾ- ಡಹಾಣು ಬಂಟ್ಸ್ ನ ಮಹಿಳಾ ವಿಭಾಗವು ಬಹಳಷ್ಟು ಸದಸ್ಯರನ್ನು ಹೊಂದಿದ್ದು, ಪ್ರಭಾ ಸುರೇಂದ್ರ ಶೆಟ್ಟಿ ಪಾಲ್ಘರ್, ಸಹಾನಿ ವಾಮನ್ ಶೆಟ್ಟಿ ನಾಲಾಸೋಪಾರ, ಶುಭಾ ಸತೀಶ್ ಶೆಟ್ಟಿ ವಿರಾರ್ ಕಾರ್ಯಾಧ್ಯಕ್ಷೆಯರಾಗಿ ಕಾರ್ಯನಿರ್ವಹಿಸಿ ಬಹಳಷ್ಟು ಮಹಿಳಾಪರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಕಾರ್ಯಾಧ್ಯಕ್ಷೆಯಾಗಿರುವ ಸುಜಾತ ಜಿ. ಶೆಟ್ಟಿಯವರು ತಮ್ಮ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ತನ್ನದೇ ಛಾಪನ್ನು ಮೂಡಿಸಿದ್ದಾರೆ. ಮಹಿಳಾ ವಿಭಾಗದವರು ಬಹಳಷ್ಟು ಸಂಘದ ಏಳಿಗೆಗಾಗಿ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಾ ಬರುತ್ತಿದ್ದಾರೆ. ಅಲ್ಲದೇ ಸಂಘದ ಏಳಿಗೆಗಾಗಿ ಹೋಟೆಲ್ ಉದ್ಯಮಿಗಳು, ಕೈಗಾರಿಕೋದ್ಯಮಗಳು, ಯಶಸ್ವಿಯಾಗಲು ಪ್ರೋತ್ಸಾಹಿಸಿದ ಕಾರಣ ಈ ಸಂಘವು ಮುಂಬೈ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ – ಮಂಗಳೂರಿನಲ್ಲೂ ಸಹ ತನ್ನದೇ ಆದ ಛಾಪನ್ನು ಮೂಡಿಸಿದೆ. ಸಂಘದ ಏಳಿಗೆಗಾಗಿ ಇನ್ನಷ್ಟು ಉತ್ತಮ ಯೋಜನೆಗಳನ್ನು ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಬಂಟರ ಸಂಘ ಮುಂಬಯಿ ಹಾಗೂ ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಲ್ಲದೇ ಹಲವಾರು ಬಂಟರ ಸಂಘಗಳ ಪದಾಧಿಕಾರಿಗಳು ಸದಸ್ಯರು ಸಂಘದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಪ್ರೋತ್ಸಾಹಿಸುತ್ತಾ ಬಂದಿರುವುದು ಬಹಳ ಹೆಮ್ಮೆಯ ಸಂಗತಿ. ವರುಷ ಪೂರ್ತಿ ಗ್ರಾಮೀಣ ಪ್ರದೇಶದ ಬಂಟ ಬಂಧುಗಳಿಗೆ ವಿವಿಧ ರೀತಿಯ ಯೋಜನೆಗಳನ್ನು ರೂಪಿಸುತ್ತಾ ಸೇವೆಯಲ್ಲಿ ನಿರತವಾಗಿದೆ.
ಇದೀಗ ಸಂಘ 17ರ ಸಂಭ್ರಮದಲ್ಲಿದೆ. ಮಾರ್ಚ್ 14ರಂದು ಸಂಜೆ 3:30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷರಾಗಿರುವ ಡಾ| ವಿರಾರ್ ಶಂಕರ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷರಾದ ಪ್ರಕಾಶ ಎಂ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ, ವಸಾಯಿ ವಿರಾರ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಭಾಯಂದರ್ ನ ಸಾಯಿಬಾಬಾ ಹಾಸ್ಪಿಟಲ್ ನ ಆಡಳಿತ ನಿರ್ದೇಶಕ ಡಾ. ಎನ್ ಎ ಹೆಗ್ಡೆ, ಮಾನವ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ಡಾ| ಹರೀಶ್ ಶೆಟ್ಟಿ, ವಸಾಯಿ ತಾಲೂಕ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ವಿ ಶೆಟ್ಟಿ ಕಾಪು, ವಸಾಯಿ ಅಶೋಕ್ ಇಂಡಸ್ಟ್ರೀಸ್ ನ ಮಾಲಕ ಅಶೋಕ್ ಆರ್ ಶೆಟ್ಟಿ ಕಲ್ಪವೃಕ್ಷ ಪೆರ್ಮುದೆ, ವಸಾಯಿ ಹೋಟೆಲ್ ಆದಿತ್ಯ ರೆಸಿಡೆನ್ಸಿ ಸಿಎಂಡಿ ರತ್ನಾಕರ್ ಎಂ ಶೆಟ್ಟಿ, ರೆಂಟನ್ ಪೇ ಸಹ ಸ್ಥಾಪಕಿ ಮತ್ತು ಸಿಇಓ ಸಾರಿಕಾ ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಸಂಚಾಲಕ ನಾಗರಾಜ್ ಶೆಟ್ಟಿ ಮತ್ತು ಯಶೋಧ ಶೆಟ್ಟಿ ದಂಪತಿಯನ್ನು, ವಸಾಯಿ ಹೋಟೆಲ್ ರಿಷಿಕೇಶ್ ರಾಧಾಕೃಷ್ಣ ಶೆಟ್ಟಿ, ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಪ್ರಭಾ ಸುರೇಂದ್ರ ಶೆಟ್ಟಿ, ಸಹಾನಿ ವಾಮನ್ ಶೆಟ್ಟಿ, ಶುಭ ಸತೀಶ್ ಶೆಟ್ಟಿ ಮತ್ತು ಕ್ರೀಡಾ ಕ್ಷೇತ್ರದ ಸಾಧಕಿ ಶರಿತಾ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.



ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘದ ಉಪಾಧ್ಯಕ್ಷರಾದ ಕರ್ನೂರು ಶಂಕರ್ ಆಳ್ವ, ಸಂಚಾಲಕರಾದ ನಾಗರಾಜ್ ಶೆಟ್ಟಿ, ಟ್ರಸ್ಟಿಗಳಾದ ಭುಜಂಗ ಶೆಟ್ಟಿ ಬೊಯಿಸರ್, ಅರವಿಂದ್ ಆನಂದ ಶೆಟ್ಟಿ, ಮೀರಾರೋಡ್ ಸುರೇಶ್ ಶೆಟ್ಟಿ ಗಂಧರ್ವ, ವಕ್ತಾರ ಚಂದ್ರಶೇಖರ್ ವಿ ಶೆಟ್ಟಿ ಭಾಯಂದರ್, ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್ ವಿ ರೈ, ಕೋಶಾಧಿಕಾರಿ ರವಿ ರೈ ಬೊಯಿಸರ್, ಜೊತೆ ಕಾರ್ಯದರ್ಶಿ ಪ್ರಕಾಶ್ ಎಂ. ಶೆಟ್ಟಿ ಬೊಯಿಸರ್, ಜೊತೆ ಕೋಶಾಧಿಕಾರಿ ವಿನಯ ಅಡಪ್ಪ ಬೊಯಿಸರ್, ಯುವ ವಿಭಾಗದ ಮತ್ತು ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಮುಕೇಶ್ ಜಿ ಶೆಟ್ಟಿ ವಿರಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಜಿ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಲತಾ ಎ ಶೆಟ್ಟಿ, ಕಾರ್ಯದರ್ಶಿ ಯಶೋಧ ಬಿ ಶೆಟ್ಟಿ ಬೊಯಿಸರ್, ಕೋಶಾಧಿಕಾರಿ ಉಷಾ ವಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ಎಸ್ ಶೆಟ್ಟಿ ಪಾಲ್ಘರ್, ಮೀರಾ ಭಾಯಂದರ್ ವಲಯದ ಕಾರ್ಯಾಧ್ಯಕ್ಷ ವಸಂತ್ ಆರ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ರಾಜೇಂದ್ರ ಶೆಟ್ಟಿ ಮತ್ತು ಪದಾಧಿಕಾರಿಗಳು, ನಾಯ್ಗಾಂವ್ ವಿರಾರ್ ವಲಯದ ಕಾರ್ಯಾಧ್ಯಕ್ಷ ಅಶೋಕ್ ಕೆ ಶೆಟ್ಟಿ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣ ಬಿ ಶೆಟ್ಟಿ ವಸಾಯಿ ಮತ್ತು ಪದಾಧಿಕಾರಿಗಳು, ಪಾಲ್ಘರ್ ಬೊಯಿಸರ್ ವಲಯದ ಕಾರ್ಯಾಧ್ಯಕ್ಷ ವಿಜಯ ಎ. ಶೆಟ್ಟಿ ಮತ್ತು ಪದಾಧಿಕಾರಿಗಳು, ಡಹಾಣು ವಲಯದ ಕಾರ್ಯಾಧ್ಯಕ್ಷ ರವೀಂದ್ರ ಡಿ. ಶೆಟ್ಟಿ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೈಶಾಲಿ ಎ. ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಸಲಹೆ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸಲಹಾ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.


























































































































