
ಕಳೆದ 33 ವರ್ಷಗಳಿಂದ ಮುಂಬಯಿಯಲ್ಲಿ ವೈವಿಧ್ಯಮಯ ಕಲಾ ಕಾರ್ಯಕ್ರಮಗಳ ಮೂಲಕ ಹೆಸರಾಗಿರುವ ಕಲಾ ಸೌರಭ ಸಂಸ್ಥೆ ಹಿರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಪದ್ಮನಾಭ ಸಸಿಹಿತ್ಲು ಅವರ ಸಾರಥ್ಯದಲ್ಲಿ ಪ್ರಸಕ್ತ ವರ್ಷ ‘ಸಂಸ್ಕಾರ -26’ ಸರಣಿಯನ್ನು ನಡೆಸುತ್ತಿದೆ. ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಆರಂಭಗೊಂಡ ಸರಣಿಯ ಮೂರನೇ ಕಾರ್ಯಕ್ರಮವಾಗಿ ಸಸಿಹಿತ್ಲು ಭಗವತಿಗೆ ವಿಶಿಷ್ಟ ಸ್ವರ ಸಂಗೀತಾಭಿಷೇಕದ ಮೂಲಕ ಕಲಾ ಸಂಸ್ಕಾರಕ್ಕೆ ಧಾರ್ಮಿಕ ಸ್ಪರ್ಶ ನೀಡಿದೆ ಎಂದು ಕರ್ನಾಟಕ ಯಕ್ಷಗಾನ, ಜಾನಪದ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕಲಾ ಸೌರಭ ಮುಂಬಯಿ ಆಶ್ರಯದಲ್ಲಿ ಜರಗಿದ ‘ಶ್ರೀ ಭಗವತೀ ಅಮ್ಮ ಸ್ವರ ಸಂಗೀತಾಭಿಷೇಕ’ ಎಂಬ ಭಕ್ತಿ, ಭಾವ ಜಾನಪದ, ಯಕ್ಷಗಾಯನ ಹಾಗೂ ನೃತ್ಯ ರಂಜನೆಯ ಜುಗಲ್ಬಂದಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶಯ ಭಾಷಣ ಮಾಡಿದರು.

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವಾಮನ ಇಡ್ಯಾ ಸಾಂಪ್ರದಾಯಿಕ ರೀತಿಯಲ್ಲಿ ತೆಂಗಿನಕಾಯಿ ಒಡೆದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ ಗುಂಪೆಮನೆ ಮತ್ತು ವೇದಪ್ರಕಾಶ್ ಶ್ರೀಯಾನ್ ಕಲಾವಿದರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಂಬಯಿ ಬಿಲ್ಲವ ಹಿತವರ್ಧಕ ಸಂಘದ ಅಧ್ಯಕ್ಷ ಸತೀಶ್ ಕೋಟ್ಯಾನ್, ಸಾರಂತಾಯ ಗರಡಿ ಉಪಾಧ್ಯಕ್ಷ ಅನಿಲ್ ಪೂಜಾರಿ ಮತ್ತು ಕ್ಷೇತ್ರಾಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು. ಕಲಾಸೌರಭದ ಅಧ್ಯಕ್ಷ ಪದ್ಮನಾಭ ಸಸಿಹಿತ್ಲು ಸ್ವಾಗತಿಸಿದರು. ಪತ್ರಕರ್ತ ನವೀನ್ ಶೆಟ್ಟಿ ಎಡ್ಮೆಮಾರ್ ವಂದಿಸಿದರು.
‘ಸ್ವರ ಸಂಗೀತಾಭಿಷೇಕಂ’ ಕಾರ್ಯಕ್ರಮವನ್ನು ಭಕ್ತಿ ಭಾವ ಗಾನಸುಧೆ, ಜಾನಪದ ಹಾಡು, ಯಕ್ಷ ಸಂಗೀತ ಮತ್ತು ನಾಟ್ಯಗಳ ಮೂಲಕ ವರ್ಣರಂಜಿತವಾಗಿ ಪ್ರಸ್ತುತಪಡಿಸಲಾಯಿತು. ಗಾಯಕ ಪದ್ಮನಾಭ ಸಸಿಹಿತ್ಲು ಶ್ರೀ ಗಣೇಶ ಸ್ತುತಿಯೊಂದಿಗೆ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು. ಅಪೂರ್ವ ಕುಂದಾಪುರ ಮತ್ತು ಹಿಮಾಂಗಿ ಉಳ್ಳಾಲ್ ಭಕ್ತಿ, ಭಾವ ಹಾಗೂ ಜಾನಪದ ಗೀತೆಗಳನ್ನು ಹಾಡಿದರು. ಹಿನ್ನೆಲೆ ಸಂಗೀತದಲ್ಲಿ ಸತೀಶ್ ಸುರತ್ಕಲ್ (ಕೀಬೋರ್ಡ್), ದೀಪಕ್ ರಾಜ್ ಉಳ್ಳಾಲ್ (ತಬ್ಲಾ), ಸಂತೋಷ್ ವಿಟ್ಲ (ಕೊಳಲು) ಮತ್ತು ಸಂತೋಷ್ ಪಾನ (ರಿದಂ ಪ್ಯಾಡ್ ) ಭಾಗವಹಿಸಿದರು. ‘ಕೃಷ್ಣಾ ನೀ ಬೇಗನೆ ಬಾರೋ…’ ಹಾಡನ್ನು ಸಂಗೀತದ ಜುಗಲ್ಬಂದಿಯೊಂದಿಗೆ ವಿಶೇಷವಾಗಿ ಪ್ರಸ್ತುತ ಪಡಿಸಲಾಯಿತು.
ತೆಂಕುತಿಟ್ಟಿನ ಯುವ ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಮತ್ತು ಬಡಗುತಿಟ್ಟಿನ ಕು. ಇಂಚರ ಶಿವಪುರ ಯಕ್ಷ ಗಾಯನದಲ್ಲಿ ಭಾಗವಹಿಸಿದರು. ಹಿಮ್ಮೇಳದಲ್ಲಿ ಲವಕುಮಾರ್ ಐಲ ಮತ್ತು ಅನಿರುದ್ಧ ಅತ್ತಾವರ (ತೆಂಕು), ಶಶಿಕುಮಾರ್ ಆರ್ಚಾರ್ಯ, ಶ್ರೀನಿವಾಸ ಪ್ರಭು (ಬಡಗು) ಸಹಕರಿಸಿದರು. ಪಾತ್ರಧಾರಿಗಳಾಗಿ ತೆಂಕಿನ ಪುಂಡು ವೇಷದಲ್ಲಿ ಕು. ಶಿವಾನಿ ಸುರತ್ಕಲ್ ಹಾಗೂ ಬಡಗುತಿಟ್ಟಿನ ಸ್ತ್ರೀ ಭೂಮಿಕೆಯಲ್ಲಿ ಕು. ಸ್ವಸ್ತಿ ಶ್ರೀ ಯಕ್ಷ ನಾಟ್ಯವನ್ನು ಪ್ರಸ್ತುತಪಡಿಸಿದರು. ಪ್ರಥಮ ಸುತ್ತಿನಲ್ಲಿ ಗಣಪತಿ ಸ್ತುತಿ ಮತ್ತು ದೇವಿ ಸ್ತುತಿಯನ್ನು ಹೇಳಿ ಬಳಿಕ ಭಾಸ್ಕರ ರೈ ಕುಕ್ಕುವಳ್ಳಿ ರಚನೆಯ ‘ಸ್ವರ ಸಂಗೀತಾಭಿಷೇಕಂ’ ಶೀರ್ಷಿಕೆ ಗೀತೆಯನ್ನು ಉಭಯ ಭಾಗವತರು ಹಾಡಿದರು. ದ್ವಿತೀಯ ಸುತ್ತಿಗೆ ತೆಂಕು ಹಾಗೂ ಬಡಗು ಶೈಲಿಯ ಯಕ್ಷ ನಾಟ್ಯವನ್ನು ಬೇರೆ ಬೇರೆಯಾಗಿ ಪ್ರಸ್ತುತ ಪಡಿಸಲಾಯಿತು. ಕೊನೆಯಲ್ಲಿ ಸಂಗೀತ, ಯಕ್ಷಗಾನ ಹಾಗೂ ನೃತ್ಯ ಸಂಗಮದೊಂದಿಗೆ ಅಪೂರ್ವ ಜುಗಲ್ಬಂದಿ ಪ್ರೇಕ್ಷಕರನ್ನು ರಂಜಿಸಿತು. ಭಾಸ್ಕರ ರೈ ಅವರು ಸಾಂದರ್ಭಿಕ ವಿವರಗಳೊಂದಿಗೆ ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮುಂಬಯಿಯ ಕಲಾಪೋಷಕಿ ದಿ| ದಿವಿಜ ಚಂದ್ರಶೇಖರ ಬೆಳ್ಚಡ ಅವರ ಸಂಸ್ಮರಣೆಯನ್ನು ನಡೆಸಲಾಯಿತು. ಮುಂಬಯಿ ವಿದ್ಯಾವಿಹಾರ್ ನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್, ಮಯೂರಿ ಫೌಂಡೇಶನ್ನಿನ ಸ್ಥಾಪಕರು ಜಯ ಕೆ. ಶೆಟ್ಟಿ, ಸುರಕ್ಷಾ ಕೇಟರರ್ಸ್ ಸುರತ್ಕಲ್ ಮಾಲಕ ಕೇಶವ ಸನಿಲ್, ದಯಾನಂದ ಎಸ್ ಸಸಿಹಿತ್ಲು ಮತ್ತು ಪುಷ್ಪ ದಯಾನಂದ ಶುಭ ಹಾರೈಸಿದರು. ಕೃಷ್ಣ ಶೆಟ್ಟಿಗಾರ್ ಅಂಧೇರಿ ಮುಂಬಯಿ, ರಮೇಶ್ ಸನಿಲ್ ಸಸಿಹಿತ್ಲು, ಸದಾಶಿವ ಪೂಜಾರಿ ದಾದರ್, ಜಯಂತ್ ಶ್ರೀಯಾನ್ ಮುಂಬಯಿ, ಪದ್ಮನಾಭ ಕೋಟ್ಯಾನ್ ಭಿವಂಡಿ, ಆರ್ಯನ್ ಪ್ರಸಾದ್ ಸುರತ್ಕಲ್, ರಮೇಶ್ ರೈ ಪೊವಾಯಿ, ನಾಗೇಶ್ ಸಹಕರಿಸಿದರು.


























































































































