
ಗೋರೆಗಾಂವ್ ಕರ್ನಾಟಕ ಸಂಘ ಇದರ 67 ನೇಯ ನಾಡಹಬ್ಬ ಸಮಾರಂಭ ಹಾಗೂ ವಿಚಾರಗೋಷ್ಠಿ ಸಮಾರಂಭವು ಮಾರ್ಚ್ 1 ರಂದು ಬೆಳಿಗ್ಗೆ ಮಲಾಡ್ ಪಶ್ಚಿಮ ಸುಂದರ ನಗರದ ಹಿಂದಿರುವ ಡಿ.ಜಿ ಕೇತನ್ ಇಂಟರ್ನ್ಯಾಷನಲ್ ಸಭಾಗೃಹದಲ್ಲಿ ಜರಗಿತು. ಕಾರ್ಯಕ್ರಮದ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭವನ್ನು ಸಮಾಜಸೇವಕ ಸತೀಶ್ ಶೆಟ್ಟಿ ಕೊಟ್ರಪಾಡಿ ಉದ್ಘಾಟಿಸಿ ಶುಭ ಹಾರೈಸುತ್ತಾ, ಗೋರೆಗಾಂವ್ ಕರ್ನಾಟಕ ಸಂಘದ ನಮ್ಮ ನಾಡಿನ ಭಾಷೆ ಮಾತ್ರವಲ್ಲದೆ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತವಾಗಿದ್ದು ಈ ಸಂಘಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಕನ್ನಡಪರ ಕಾರ್ಯಕ್ರಮಗಳನ್ನು ಆಗಾಗ ನಡೆಸುತ್ತಾ, ತುಳು ಕನ್ನಡಿಗರನ್ನು ಒಂದೆಡೆ ಸೇರಿಸುತ್ತಾ ಬಂದಿರುವ ಗೋರೆಗಾಂವ್ ಕರ್ನಾಟಕ ಸಂಘವು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ| ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕನ್ನಡದ ಕಾರ್ಯಕ್ರಮಗಳಲ್ಲಿ ಬಾಗವಹಿಸಲು ನನಗೆ ಸಂತೋಷವಾಗುತ್ತಿದೆ. ಕನ್ನಡಿಗರಾದ ನಾವು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯನಿರತರಾಗಬೇಕು. ಈ ನಿಟ್ಟಿನಲ್ಲಿ ಗೋರೆಗಾಂವ್ ಕರ್ನಾಟಕ ಸಂಘಕ್ಕೆ ಅಭಿನಂದನೆ ಸಲ್ಲಿಸುತ್ತಿರುವೆನು. ದೇಶ ವಿದೇಶಗಳಲ್ಲಿನ ಹೆಚ್ಚಿನ ಎಲ್ಲಾ ಕನ್ನಡ ಸಂಘಟನೆಗಳು ನಾಡಹಬ್ಬವನ್ನು ಆಚರಿಸುತ್ತಿದ್ದು, ನಮ್ಮವರು ಎಲ್ಲಿದ್ದರೂ ಕನ್ನಡವನ್ನು ಮರೆಯುವಂತಿಲ್ಲ. ಕನ್ನಡವನ್ನು ಉಳಿಸುವುದು ನಮ್ಮ ಮುಖ್ಯ ಗುರಿಯಾಗಲಿ. ನಮ್ಮ ಬಾಷೆಯನ್ನು ಪ್ರೀತಿಸುವುದರೊಂದಿಗೆ ಇತರ ಬಾಷೆಯನ್ನೂ ಗೌರವಿಸೋಣ. ಇಂತಹ ಸಂಘಕ್ಕೆ ನನ್ನ ಬೆಂಬಲ ಸದಾ ಇದೆ ಎಂದರು.


ಗೌರವ ಅತಿಥಿಯಾಗಿ ಥಾಣೆ ಬಂಟ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷ ಚಂದ್ರಶೇಖರ ಎಸ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೊರುತ್ತಾ, ನಾಡಹಬ್ಬ ಕನ್ನಡಿಗರ ಸಡಗರ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕರಾವಳಿ ಕನ್ನಡಿಗರ ಪಾತ್ರ ಮಹತ್ವದ್ದು. ಹೊರನಾಡಿನಲ್ಲಿರುವ ಎಲ್ಲಾ ಕನ್ನಡ ಸಂಘಟನೆಗಳು ಕನ್ನಡ ಉಳಿಸುವಲ್ಲಿ ಸದಾ ಕ್ರಿಯಾಶೀಲವಾಗಿದೆ. ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸುವ ಅಗತ್ಯವಿದೆ ಎಂದರು. ಸಂಘದ ಮುಖವಾಣಿ ‘ಮುಂಬೆಳಕು’ ವಾರ್ಷಿಕ ಸಂಚಿಕೆಯನ್ನು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ ಶೆಟ್ಟಿಯವರು ವೇದಿಕೆಯಲ್ಲಿದ್ದ ಇತರ ಗಣ್ಯರೊಂದಿಗೆ ಬಿಡುಗಡೆ ಮಾಡಿ, ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಉಪವಿಭಾಗಗಳ ಎಲ್ಲಾ ಕಾರ್ಯಕರ್ತರು ಸಂಘದ ನಾಡಹಬ್ಬ ಸಮಾರಂಭ ಸೇರಿ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ನಿರಂತರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘದ ಕಾರ್ಯಾಲಯವು ಪುನರ್ನಿಮಾಣದ ಹಂತದಲ್ಲಿದ್ದು ಸಂಘಕ್ಕೆ ಯಾವುದೇ ಆದಾಯವಿಲ್ಲದ ಕಾರಣ ನಮಗೆ ದಾನಿಗಳ ಸಹಾಯ ಅನಿವಾರ್ಯವಾಗಿದೆ. ನಮಗೆ ಪ್ರೋತ್ಸಾಹಿಸುವ ಎಲ್ಲರಿಗೂ ಅಭಿನಂದನೆಗಳು ಎಂದರು.
ರಿಲಯನ್ಸ್ ನ ಕಾರ್ಪೋರೇಟ್ ಮೀಡಿಯಾ ಎಂಡ್ ಕಂಟೆಂಟ್ ವಿಭಾಗದ ಮುಖ್ಯಸ್ಥ, ಪತ್ರಕರ್ತ ದಯಾಸಾಗರ್ ಚೌಟ ಇವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆದಿದ್ದು, ಸಾಮಾಜಿಕ ಶೈಕ್ಷಣಿಕ ನೆಲೆಯಲ್ಲಿ ಕನ್ನಡಿಗರ ಕೊಡುಗೆ ವಿಷಯದಲ್ಲಿ ಅಮೃತಾ ಎ ಶೆಟ್ಟಿ ಮತ್ತು ಧಾರ್ಮಿಕ, ಸಾಂಸ್ಕೃತಿಕ ನೆಲೆಯಲ್ಲಿ ಕನ್ನಡಿಗರ ಕೊಡುಗೆ ಬಗ್ಗೆ ಜಿ.ಟಿ ಆಚಾರ್ಯ ಉಪನ್ಯಾಸ ನೀಡಿದರು. ಉಷಾ ಬಿ ಶೆಟ್ಟಿ, ಉಷಾ ಎಸ್ ಶೆಟ್ಟಿ, ಸುಜಾತಾ ಆಚಾರ್ಯ, ಪ್ರಮೀಳಾ ಆಚಾರ್ಯ, ಶಕುಂತಳಾ ಆಚಾರ್ಯ ಪರಿಚಯಿಸಿದರು. ವಾಣಿ ಶೆಟ್ಟಿಯವರು ಕಾರ್ಯಕ್ರಮವನ್ನು ನಿರ್ವಹಿಸಿ, ಹರಿಶ್ಚಂದ್ರ ಆಚಾರ್ಯ ವಂದನಾರ್ಪಣೆ ಮಾಡಿದರು. ಮನೋರಂಜನೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಘದ ರಂಗಸ್ಥಳದ ವತಿಯಿಂದ ಪ್ರಶಸ್ತಿ ವಿಜೇತ ಕಿರುನಾಟಕ “ನಮ ಒಂಜಿ ಎನ್ನಿಯಡಾ” ಪ್ರದರ್ಶನವಿತ್ತರು. ಸತೀಶ್ ಶೆಟ್ಟಿ ಕಣಂಜಾರ್ ರಚಿಸಿ ನಿರ್ದೇಶಿಸಿದ ಈ ನಾಟಕದಲ್ಲಿ ಪ್ರತಿಮಾ ಬಂಗೇರ, ಉಷಾ ಸತೀಶ್ ಶೆಟ್ಟಿ, ಲೀಲಾ ಗಣೇಶ್ ಕಾರ್ಕಳ, ವಾಣಿ ಶೆಟ್ಟಿ, ಸಹಾನಿ ಶೆಟ್ಟಿ ಮತ್ತು ಸಂಧ್ಯಾ ಅಭಿನಯಿಸಿದ್ದು, ರಾಜೇಶ್ ಹೆರ್ಮುಂಡೆ ಸಂಗೀತ ನೀಡಿದ್ದರು. ದಿನಪೂರ್ತಿ ನಡೆದ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಂಘದ ಇತರ ಸದಸ್ಯರೊಂದಿಗೆ ಪಾರುಪತ್ಯಗಾರರಾದ ನಾರಾಯಣ ಆರ್ ಮೆಂಡನ್, ನಿತ್ಯಾನಂದ ಡಿ. ಕೋಟ್ಯಾನ್, ಉಪಾಧ್ಯಕ್ಷೆ ಸರಿತಾ ಸುರೇಶ್ ನಾಯಕ್, ಗೌರವ ಕೋಶಾಧಿಕಾರಿ ಕರುಣಾಕರ ಕೆ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷೆ ವಿಶಾಲಾಕ್ಷಿ ಊಳೂವಾರ, ಸಮಿತಿಯ ಸದಸ್ಯರಾದ ಎಂ ಆನಂದ ಶೆಟ್ಟಿ, ಸುರೇಶ್ ಪೂಜಾರಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಸಚ್ಚೀಂದ್ರ ಕೆ ಕೋಟ್ಯಾನ್, ಸುಧಾಕರ ಎಲ್ಲೂರು, ವಿಶೇಷ ಆಮಂತ್ರಿತರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ರಮೇಶ್ ಶೆಟ್ಟಿ ಪಯ್ಯಾರ್, ಪದ್ಮಜಾ ಮಣ್ನೂರು, ಸುಚಲತ ಪೂಜಾರಿ, ಭಾಸ್ಕರ ಟಿ ಸಫಲಿಗ, ಗುಣೋದಯ ಎಸ್, ವನಿತಾ ಪಾಲನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣಾ ಎಸ್. ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿವಾನಿ ಎಚ್. ಆಚಾರ್ಯ, ಗ್ರಂಥಾಯನದ ನಿರ್ದೇಶಕಿ ಶೈಲಾ ಎಸ್ ನಾಯಕ್, ರಂಗಸ್ಥಳದ ನಿರ್ದೇಶಕಿ ಲೀಲಾ ಗಣೇಶ್ ಕಾರ್ಕಳ, ಉಪಸಮಿತಿಗಳ ಇತರ ಪದಾಧಿಕಾರಿಗಳು, ಸಂಚಾಲಕರು ಮತ್ತು ಸದಸ್ಯರುಗಳು ಸಹಕರಿಸಿದರು
ಅತಿಥಿಗಳನ್ನು ಮತ್ತು ಉಪನ್ಯಾಸಕರುಗಳನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣ ಬಂಗೇರ, ಜೊತೆ ಕಾರ್ಯದರ್ಶಿ ಸಹನಿ ವಿ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಮೇರಿ ಲಿಲ್ಲಿ ಡಿಸೋಜಾ, ರಂಗಸ್ಥಳದ ನಿರ್ದೇಶಕಿ ಲೀಲಾ ಗಣೇಶ್, ಗ್ರಂಥಾಲಯದ ನಿರ್ದೇಶಕಿ ಶೈಲಾ ನಾಯಕ್ ಪರಿಚಯಿಸಿದರು. ಪ್ರಮೀಳಾ ಆಚಾರ್ಯ, ಶಕುಂತಲಾ ಆಚಾರ್ಯ, ಶೋಭಾ ಆಚಾರ್ಯ, ಸುಜಾತ ಆಚಾರ್ಯ ಮತ್ತು ಲೀಲಾ ಗಣೇಶ್ ಸ್ವಾಗತ ಗೀತೆ ಹಾಡಿದರು. ಸೀಮಾ ಕುಲಕರ್ಣಿ, ವಸಂತಿ ಕೋಟೆಕಾರ್, ಶೋಭಾ ಆಚಾರ್ಯ, ಸುಜಾತ ಆಚಾರ್ಯ, ಲೀಲಾ ಗಣೇಶ್ ಉದ್ಘಾಟನಾ ಗೀತೆ ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಧಾಕರ ಎಲ್ಲೂರು ಮತ್ತು ಸಭಾ ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಶಾಂತಾ ಎನ್ ಶೆಟ್ಟಿ ನಿರ್ವಹಿಸಿದರು. ಸಹನಿ ವಿ ಶೆಟ್ಟಿ ವಂದನಾರ್ಪಣೆ ಮಾಡಿದರು. ಸಂಘದ ಮಹಿಳಾ ಸದಸ್ಯರಿಂದ, ದೇವಾಡಿಗ ಸಂಘ ಮುಂಬಯಿಯ ಸ್ಥಳೀಯ ಸಮಿತಿಯ ಮಹಿಳಾ ಸದಸ್ಯರಿಂದ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಇದರ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಲ್ಲದೇ ಸಂಗೀತ ಕಾರ್ಯಕ್ರಮ ನಡೆಯಿತು. ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ ಶೆಟ್ಟಿ, ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸರಿತಾ ನಾಯಕ್, ಗೌರವ ಪ್ರಧಾನ ಕಾರ್ಯದರ್ಶಿ ಶಾಂತಾ ಎನ್ ಶೆಟ್ಟಿ, ಜೊತೆ ಕೋಶಾಧಿಕಾರಿ ಉಷಾ ಶೆಟ್ಟಿ, ಪಾರುಪತ್ಯಗಾರರುಗಳಾದ ದೇವಲ್ಕುಂದ ಭಾಸ್ಕರ್ ಶೆಟ್ಟಿ, ನಾರಾಯಣ ಮೆಂಡನ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಸರಿತಾ ಸುರೇಶ್ ನಾಯಕ್, ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸೀಮಾ ಕುಲಕರ್ಣಿ, ವಸಂತಿ ಕೋಟೆಕಾರ್ ಮತ್ತು ಶೈಲಾ ನಾಯಕ್ ಪ್ರಾರ್ಥನೆ ಮಾಡಿದರು.


























































































































