
ಸಾವಿರ ಜನರ ಪರಿಚಯವಿರಬಹುದು. ಆದರೆ ಒಂಟಿತನ ಕಾಡಿದಾಗ ನೆನಪಾಗುವ ಆ ಒಬ್ಬನೇ ನಮ್ಮವ. ಯಾರು ಜೀವನದ ಬೆಳಕಿನಲ್ಲಿ ಜೊತೆ ನಡೆಯುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಕತ್ತಲಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕುವವರೇ ನಮ್ಮವರು. ಮುಖ ನೋಡಿ ನಗುವವರಲ್ಲ, ಮನಸ್ಸಿನ ನೋವು ನೋಡಿ ಮಿಡಿಯುವವರೇ ನಿಜವಾದ ನಮ್ಮವರು. ರಕ್ತದ ಸಂಬಂಧಕ್ಕಿಂತ ಹೆಚ್ಚಾಗಿ, ಕಷ್ಟದ ಸಮಯದಲ್ಲಿ ನೆರಳಾಗಿ ನಿಲ್ಲುವ ಸಂಬಂಧವೇ ಶ್ರೇಷ್ಠ. ನಮ್ಮ ಮೌನಕ್ಕೆ ಸಾವಿರ ಅರ್ಥ ಕಲ್ಪಿಸುವವರ ನಡುವೆ, ಆ ಮೌನದ ಹಿಂದಿರುವ ನೋವನ್ನು ಗುರುತಿಸುವವನೇ ನಮ್ಮವ.


ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಅಧಿಕಾರ ಮತ್ತು ಅತ್ತಾಗ ಮಡಿಲಾಗುವ ಪ್ರೀತಿ ಇರೋರೇ ನಮ್ಮವರು. ನಮ್ಮವರು ಎಂದರೆ ಸದಾ ಜೊತೆಗಿರುವವರಲ್ಲ, ಎಷ್ಟೇ ದೂರವಿದ್ದರೂ ನಮ್ಮ ಹಿತ ಬಯಸುವವರು. ತಪ್ಪು ಮಾಡಿದಾಗ ಸಮಾಜದ ಮುಂದೆ ಹೀಯಾಳಿಸದೆ, ಏಕಾಂತದಲ್ಲಿ ತಿದ್ದಿ ಬುದ್ದಿ ಹೇಳಿ ಸರಿ ಹಾದಿಗೆ ತರುವವರು. ಎಲ್ಲವೂ ಸುಗಮವಾಗಿ ಸಾಗುವಾಗ ನೂರಾರು ಮಂದಿ ಜೊತೆಗಿರುತ್ತಾರೆ. ಆದರೆ, ನಾವು ಸೋತಾಗ, ಮಾನಸಿಕವಾಗಿ ಕುಗ್ಗಿದಾಗ ಯಾರು ದೂರ ಸರಿಯದೆ ಹೆಗಲಾಗುತ್ತಾರೋ, ಅವರೇ ನಿಜವಾದ “ನಮ್ಮವರು.”

























































































































