
ಫೆಬ್ರವರಿ 20 ರಂದು ಕೊಪ್ಪ ತಾಲೂಕಿನ ಅಗಳಗಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರುಗಿದ್ದು, ಈ ಕಾರ್ಯಕ್ರಮದಲ್ಲಿ ಸುಧಾಕರ್ ಶೆಟ್ಟಿಯವರ ಅಮ್ಮ ಫೌಂಡೇಶನ್ ವತಿಯಿಂದ ಹಳ್ಳಿಗಾಡಿನ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಎಸ್.ಎಸ್.ಎಲ್. ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯುತ್ ಶಕ್ತಿಯ ಅಭಾವ ಇರುವ ಹಳ್ಳಿಗಳಲ್ಲಿ ರಾತ್ರಿ ಓದುವುದಕ್ಕೆ ಆಗುವುದಿಲ್ಲ. ಅಂತಹ ಮನೆಗಳ ಮಕ್ಕಳನ್ನು ಕಂಡುಹಿಡಿದು ಸುಮಾರು 16 ಮಕ್ಕಳಿಗೆ ಸೋಲಾರ್ ಲೈಟ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಮ್ಮ ಫೌಂಡೇಶನ್ ನಿರ್ದೇಶಕರಾದ ಪ್ರಭಾಕರ್ ಶೆಟ್ಟಿಯವರು, ಸಮಾಜದಲ್ಲಿ ನಿಜವಾದ ಬದಲಾವಣೆ ತರಬಲ್ಲ ಶಕ್ತಿ ಶಿಕ್ಷಣದಲ್ಲಿದೆ ಎಂದು ತಿಳಿಸಿದರು. ಹಳ್ಳಿಗಳಲ್ಲಿ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ಅನೇಕ ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ಹಾಕಲು ಸಾಧ್ಯವಾಗದೆ ಹಿಂದುಳಿಯುತ್ತಿದ್ದಾರೆ. ಇಂತಹ ಮಕ್ಕಳಿಗೆ ಕನಿಷ್ಠ ಓದುವ ಬೆಳಕು ಒದಗಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ದಲಿತರು, ಬಡವರು ಮತ್ತು ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಪದವೀಧರರಾಗಬೇಕು. ಅವರು ಅಧಿಕಾರದ ಹುದ್ದೆಗಳಿಗೆ ಏರಿದಾಗ ಮಾತ್ರ ಸಮಾಜದಲ್ಲಿರುವ ಅಸಮತೋಲನೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಜೀವನದ ಕಷ್ಟಗಳನ್ನು ಅನುಭವಿಸಿರುವವರಿಗೆ ವಾಸ್ತವ ಪರಿಸ್ಥಿತಿ ಅರಿವಾಗುತ್ತದೆ. ಅಂತಹವರು ಅಧಿಕಾರದಲ್ಲಿದ್ದರೆ ಸಮಾಜಕ್ಕೆ ನಿಜವಾದ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.


ಅಮ್ಮ ಫೌಂಡೇಶನ್ನ ಧ್ಯೇಯವು ಹಿಂದುಳಿದ ವರ್ಗದ ಪ್ರತಿಯೊಂದು ಮಗುವಿಗೂ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಿ, ಅವರನ್ನು ಸ್ವಾವಲಂಬಿಗಳಾಗಿಸಿ, ಸಮಾಜದಲ್ಲಿ ಗೌರವದಿಂದ ಬದುಕುವ ಸ್ಥಿತಿಗೆ ತಲುಪಿಸುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಗೀತಾ ಚಂದನ್ ರವರು ವಹಿಸಿದ್ದು, ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್, ಎಸ್.ಡಿ.ಎಂ.ಸಿ ಸದಸ್ಯರುಗಳಾದ ಗುರುಮೂರ್ತಿ, ಶ್ರೀಮತಿ ಪೂರ್ಣಿಮಾ, ಚಂದ್ರಶೇಖರ್, ಹಿರಿಯ ನಾಟಿ ವೈದ್ಯೆ ಶ್ರೀಮತಿ ವೇದಮ್ಮ, ನಿವೃತ್ತ ಶಿಕ್ಷಕಿ ಶ್ರೀಮತಿ ವಿನೋದ, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿಯಾದ ಶ್ರೀಮತಿ ಯಶೋದಾ, ಅಮ್ಮ ಫೌಂಡೇಶನ್ ನ ಯೋಜನಾಧಿಕಾರಿಗಳಾದ ವೆಂಕಪ್ಪ ಆಚಾರ್, ಅಮ್ಮ ಫೌಂಡೇಶನ್ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್, ಸ್ಥಳೀಯರಾದ ಜಯಂತ್ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಪೋಷಕ ವೃಂದದವರು ಉಪಸ್ಥಿತರಿದ್ದರು.

























































































































