
ಶಾಸಕ ಎಂದರೆ ಕೇವಲ ಚುನಾವಣೆಯಲ್ಲಿ ಗೆದ್ದು ಕುರ್ಚಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಅಲ್ಲ. ಜನರ ಬದುಕಿಗೆ ದಿಕ್ಕು ನೀಡುವ ನಾಯಕ. ಮತದಾನ ದಿನದಲ್ಲಿ ಜನರು ಬಟನ್ ಒತ್ತುವುದು ವಿಶ್ವಾಸಕ್ಕೆ. ಆ ವಿಶ್ವಾಸವನ್ನು ಕಾಪಾಡುವುದು ಶಾಸಕನ ಕರ್ತವ್ಯ. ಆದ್ದರಿಂದ ಒಬ್ಬ ಉತ್ತಮ ಶಾಸಕನಿಗೆ ಕೆಲವು ಮುಖ್ಯ ಗುಣಗಳು ಅನಿವಾರ್ಯ. ಮೊದಲನೆಯದು ಜನಸೇವೆ ಮನೋಭಾವ. ಅಧಿಕಾರ ಸಿಕ್ಕ ನಂತರ ಜನರನ್ನು ಮರೆಯುವವನು ನಾಯಕನಾಗಲಾರ. ರಸ್ತೆ ಕುಸಿದಾಗ, ಆಸ್ಪತ್ರೆಯಲ್ಲಿ ಔಷಧಿ ಇಲ್ಲದಾಗ, ನೆರೆ ಬಂದಾಗ ಜನರ ಜೊತೆ ನಿಂತು ಸಮಸ್ಯೆ ಪರಿಹರಿಸುವವನೇ ಜನಪ್ರತಿನಿಧಿ. ಕಚೇರಿಯಲ್ಲಿ ಕುಳಿತು ಫೋಟೋ ಹಾಕುವುದರಿಂದ ಸೇವೆ ಆಗುವುದಿಲ್ಲ. ಎರಡನೆಯದು ತಮ್ಮ ಕ್ಷೇತ್ರದ ಅರಿವು. ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ, ಯಾವ ಶಾಲೆಗೆ ಶಿಕ್ಷಕರು ಇಲ್ಲ, ಯಾವ ರೈತರಿಗೆ ಕಾಲುವೆ ಬೇಕು ಇವು ಗೊತ್ತಿಲ್ಲದಿದ್ದರೆ ಶಾಸಕನಾಗಿರುವುದಕ್ಕೆ ಅರ್ಥವೇ ಇಲ್ಲ. ಕ್ಷೇತ್ರದ ನಕ್ಷೆ ಮನಸ್ಸಿನಲ್ಲಿ ಇರಬೇಕು.

ಮೂರನೆಯದು ಕಾನೂನು ಮತ್ತು ಆಡಳಿತ ಜ್ಞಾನ. ವಿಧಾನಸಭೆ ಕೂಗಾಟ ಮಾಡುವ ಸ್ಥಳವಲ್ಲ; ಜನರ ಹಕ್ಕುಗಳಿಗಾಗಿ ಮಾತಾಡುವ ವೇದಿಕೆ. ಅಧ್ಯಯನ ಮಾಡಿ ಪ್ರಶ್ನೆ ಕೇಳುವ ಶಾಸಕನ ಮಾತಿಗೆ ಸರ್ಕಾರವೂ ಗೌರವ ಕೊಡುತ್ತದೆ. ನಾಲ್ಕನೆಯದು ಪ್ರಾಮಾಣಿಕತೆ. ಆಗದ ಕೆಲಸಕ್ಕೆ ಸುಳ್ಳು ಭರವಸೆ ಕೊಡುವುದು ಸುಲಭ, ಆದರೆ ನಿಜ ಹೇಳುವುದು ದೊಡ್ಡ ನಾಯಕತ್ವ. ಈಗ ಸಾಧ್ಯವಿಲ್ಲ, ಆದರೆ ಪ್ರಯತ್ನ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ ನಾಯಕನ ಮೇಲೆ ಜನರಿಗೆ ಹೆಚ್ಚು ನಂಬಿಕೆ ಇರುತ್ತದೆ. ಐದನೆಯದು ಸಮಾನತೆ. ಮತ ಹಾಕಿದವರಿಗೂ, ಹಾಕದವರಿಗೂ ಒಂದೇ ರೀತಿಯ ಸೇವೆ ಮಾಡಿದಾಗ ಮಾತ್ರ ಆತ ಜನನಾಯಕ. ರಾಜಕೀಯ ಪಕ್ಷ ಜನರನ್ನು ವಿಭಜಿಸಲು ಅಲ್ಲ ಅಭಿವೃದ್ಧಿಗೆ ಬಳಸಬೇಕು. ಕೊನೆಯದಾಗಿ, ಜನರ ಜೊತೆ ಸಂಪರ್ಕ. ಜನರು ಸಮಸ್ಯೆ ಹೇಳಲು ಭಯಪಡುವ ಶಾಸಕ ಎಂದಿಗೂ ಯಶಸ್ವಿಯಾಗಲಾರ. ಜನರನ್ನು ಕೇಳುವ ಗುಣ ಇದ್ದರೆ ಅರ್ಧ ಸಮಸ್ಯೆ ಅಲ್ಲಿ ಪರಿಹಾರವಾಗುತ್ತದೆ. ಒಳ್ಳೆಯ ಶಾಸಕರ ಪರಿಚಯ ಪೋಸ್ಟರ್ಗಳಲ್ಲಿ ಕಾಣುವುದಿಲ್ಲ; ಅವನ ಕ್ಷೇತ್ರದ ರಸ್ತೆ, ಶಾಲೆ, ಆಸ್ಪತ್ರೆಗಳಲ್ಲಿ ಕಾಣುತ್ತದೆ. ಪದವಿ ಐದು ವರ್ಷ ಇರಬಹುದು, ಆದರೆ ಒಳ್ಳೆಯ ಕೆಲಸ ಮಾಡಿದರೆ ಹೆಸರು ಪೀಳಿಗೆಗಳ ಕಾಲ ಉಳಿಯುತ್ತದೆ. ಅದೇ ನಿಜವಾದ ಶಾಸಕನ ಮಹತ್ವ.
























































































































