
ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಇನ್ನಿತರ ಸಮಾಜಪರ ಕಾರ್ಯಗಳಲ್ಲಿ ತೊಡಗಿ ಅವನ್ನು ತಮ್ಮ ಆದ್ಯ ಕರ್ತವ್ಯ ಎಂದುಕೊಂಡು ವರ್ಷಂಪ್ರತಿ ಹಲವು ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ಬಯಲಾಟ ಹಾಗೂ ಇನ್ನಿತರ ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮುಂದುವರಿಯುತ್ತಿರುವ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಮುಂದಾಳತ್ವದಲ್ಲಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬೈ ಇವರಿಂದ ಶ್ರೀಮದ್ ರಾಮಾಯಾಣದೊಳಗಣ ತಾಳಮದ್ದಳೆ ಸಪ್ತಾಹದ ಪ್ರಯುಕ್ತ ‘ಶ್ರೀರಾಮ ನಿರ್ಯಾಣ’ ಎಂಬ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವು ಫೆಬ್ರವರಿ 14 ರಂದು ಸಾಯಂಕಾಲ ಗಂಟೆ 3.30 ಕ್ಕೆ ಸರಿಯಾಗಿ ಬಂಟ್ಸ್ ಸೆಂಟರ್ ಸೆಕ್ಟರ್ 24, ಜೂಯಿನಗರ ನವಿ ಮುಂಬಯಿ ಇಲ್ಲಿ ಬಹಳ ಸಂಭ್ರಮದಿಂದ ನಡೆಯಿತು. ತವರೂರ ಭಾಗವತರಾದ ವಾಸುದೇವ ಭಟ್ ಎರ್ಮಾಳ್ ಇವರ ಇಂಪಾದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಬಾಂಬೆ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಆನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷರು, ಧಾರ್ಮಿಕತೆ, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಯಕ್ಷಗಾನ ತಾಳಮದ್ದಳೆಗಳಂತಹ ಕಲೆಗಳನ್ನು ಬೆಳೆಸುವಲ್ಲಿ ಸಂಘ ಸಂಸ್ಧೆಗಳ ಪಾತ್ರವೂ ಅತ್ಯಂತ ಮುಖ್ಯ ಹಾಗೂ ಹಿರಿದಾಗಿದೆ. ಆ ದೃಷ್ಟಿಯಿಂದಲೇ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮೊದಲಿನಿಂದಲೂ ನಿರಂತರವಾಗಿ ತಾಳಮದ್ದಲೆ, ಯಕ್ಷಗಾನಗಳಂತಹ ಕಾರ್ಯಕ್ರಮಗಳಿಗೆ ಆದ್ಯತೆಯನ್ನು ನೀಡುತ್ತಾ ಬಂದಿದೆ. ಮುಂದೆಯೂ ಇದೇ ರೀತಿಯಲ್ಲಿ ನಡೆಸುತ್ತಾ ಬರುತ್ತದೆ. ಇದಕ್ಕೆ ಸದಸ್ಯರ ಮತ್ತು ಅಭಿಮಾನಿಗಳ ಪ್ರೋತ್ಸಾಹ, ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಯಕ್ಷಗಾನ ಕಲಾವಿದ, ಸಂಘಟಕ ಹಾಗೂ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬೈ ಇದರ ಸಹ ರೂವಾರಿಗಳಾದ ವಾಸುದೇವ ಶೆಟ್ಟಿ ಮಾರ್ನಾಡು ಇವರು ಕಲಾವಿದರನ್ನು ಪರಿಚಯಿಸಿದರೆ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ನ್ಯಾಯವಾದಿ ಶೇಖರ ಆರ್ ಶೆಟ್ಟಿ, ಖಜಾಂಜಿ ಸಿಎ ವಿಶ್ವನಾಥ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷರುಗಳು ಕಲಾವಿದರನ್ನು ಹೂಗುಚ್ಛಗಳನ್ನಿತ್ತು ಗೌರವಿಸಿದರು. ತಾಳಮದ್ದಲೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಭಟ್ ಎರ್ಮಾಳ್, ಚೆಂಡೆ ಮದ್ದಲೆಗಳಲ್ಲಿ ಸತ್ಯಜಿತ್ ರಾಯಿ ಮತ್ತು ಪ್ರವೀಣ್ ಶೆಟ್ಟಿ ಕಟೀಲು ಸಹಕರಿಸಿದರೆ ಮುಮ್ಮೇಳದಲ್ಲಿ ಅರ್ಥದಾರಿಗಳಾದ ಸುರೇಶ ಶೆಟ್ಟಿ ನಂದ್ರೊಳ್ಳಿ ಶ್ರೀರಾಮನಾಗಿ, ವಾಸುದೇವ ಶೆಟ್ಚಿ ಮಾರ್ನಾಡು ಲಕ್ಷ್ಮಣನಾಗಿ, ಅಶೋಕ ಪಕ್ಕಳ ದೂರ್ವಾಸನಾಗಿ, ರಾಘವೇಂದ್ರ ಬಗ್ವಾಡಿ ಕಾಲಪುರುಷನಾಗಿ ಮತ್ತು ಮಾನಸ್ ಶೆಟ್ಟಿ ಹನಮಂತನಾಗಿ ಪಾತ್ರಗಳನ್ನು ನಿರ್ವಹಿಸಿದರು. ಪಾಂಡಿತ್ಯಪೂರ್ಣ ವಾಕ್ಚಾತುರ್ಯದಿಂದ ಅರ್ಥದಾರಿಗಳು ಕಲಾರಸಿಕರನ್ನು ಮಂತ್ರಮುಗ್ಧರನ್ನಾಗಿಸಿದರೆ ಸುರೇಶ ಶೆಟ್ಟಿ ಮತ್ತು ವಾಸುದೇವ ಶೆಟ್ಟಿಯವರು ತಮ್ಮ ಸಾಹಿತ್ಯಭರಿತ, ಪರಮೋಚ್ಛ ಶಬ್ದ ಭಂಡಾರದಿಂದ ಕೂಡಿದ ಅರ್ಥಗಾರಿಕೆ ಹಾಗೂ ಅಣ್ಣತಮ್ಮಂದಿರ ಅಗಲುವಿಕೆಯ ಸನ್ನಿವೇಶವನ್ನು ಭಾವುಕತ್ವದಿಂದ ಸಭಿಕರ ಕಣ್ಣಂಚಿನಲ್ಲಿ ನೀರಿಳಿಯುವಂತೆ ಮಾಡಿದ ಅವರುಗಳು, ತವರೂರ ನಾಮಾಂಕಿತ ಕಲಾವಿದರಿಂದ ತಾವೇನು ಕಡಿಮೆಯಲ್ಲವೆಂದು ತೋರಿಸಿದರೆ, ಭಾಗವತರಂತೂ ತಮ್ಮ ಸುಶ್ರಾವ್ಯ ಹಾಡಿನಿಂದ ಪ್ರೇಕ್ಷಕರಿಂದ ಕರತಾಡನಗಳ ಮೆಚ್ಚುಗೆ ಪಡೆದರು. ಕಾರ್ಯಕ್ರಮದ ಕೊನೆಯವರೆಗೂ ಸಭಿಕರನ್ನು ಹಿಡಿದಿಡುವಲ್ಲಿ ಇದೊಂದು ಅಪೂರ್ವ ಯಶಸ್ಸು ಕಂಡ ತಾಳಮದ್ದಲೆಯಾಯಿತು.
ಕಾರ್ಯಕ್ರಮದ ನಂತರ ಪ್ರತಿಯೊಬ್ಬರೂ ಕಲಾವಿದರನ್ನು ಅಭಿನಂದಿಸಿ, ಇಂತಹ ಕಾರ್ಯಕ್ರಮಗಳು ನಡೆಯುತ್ತಾ ಇರಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಇದು ಒಂದು ಅತ್ಯುತ್ತಮ ಕಾರ್ಯಕ್ರಮವಾಗಿ ಮೂಡಿಬಂದಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಉಪಸಮಿತಿಯ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ, ಸದಸ್ಯರು ಮತ್ತು ವಿವಿಧ ಗಣ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕರಿಸಿದರು.
























































































































