
ನಿರಂತರ ಅಧ್ಯಯನ, ಉಚ್ಛ ವೈದ್ಯಕೀಯ ಶಿಕ್ಷಣ, ದೀರ್ಘ ಕಾಲೀನ ವೃತ್ತಿಪರ ಅನುಭವ ಮುಪ್ಪುರಿಗೊಂಡು ವಿಜ್ಞಾನದ ಜೀವಶಾಸ್ತ್ರ ಸೇರಿದಂತೆ ಸರ್ವಾಂಗೀಣ ಮಾನವ ಆರೋಗ್ಯ ಜ್ಞಾನದ ಸಮೃದ್ಧ ಅನುಭವ ಹೊಂದಿದ ವೈದ್ಯಭೂಷಣ ನರೇನ್ ಶೆಟ್ಟಿ ವೈದ್ಯಕೀಯ ಕ್ಷೇತ್ರದ ವಿಸ್ಮಯವೇ ಸರಿ. ಇವರ ಜೀವವಿಜ್ಞಾನ ಕುರಿತ ಸಂಶೋಧನೆ ಪ್ರಕಟಣೆಗಳು ಮಾನವ ಜೀವಜಗತ್ತಿಗೆ ಬಹುಮೂಲ್ಯ ಕೊಡುಗೆಗಳಾಗಿವೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ ನರೇನ್ ಶೆಟ್ಟಿ ತನ್ನ ಅವಿಶ್ರಾಂತ ಸೇವೆಯ ಮೂಲಕ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಂದ ಮೊದಲ್ಗೊಂಡು ಮಾನವ ದೇಹದ ವಿವಿಧ ವಿಭಾಗಗಳ ಕಾರ್ಯ ನಿರ್ವಹಣೆ ಮತ್ತವುಗಳಲ್ಲಿನ ತೊಡಕು ಸೋಂಕು ಡ್ಯಾಮೇಜ್ ಕುರಿತ ವಿಶೇಷ ಜ್ಞಾನ ಇರುವ ನರೇನ್ ಶೆಟ್ಟಿ ಪ್ಲಾಸ್ಟಿಕ್ ಸರ್ಜರಿ ಹಾಗೂ ಪುನರ್ ಸ್ಥಾಪನೆ ಕುರಿತ ಸ್ಪೆಷಲಿಸ್ಟ್ ಆಗಿದ್ದಾರೆ. ವೈದ್ಯಕೀಯ ವಿಭಾಗದ ಎಂ.ಬಿ.ಬಿ.ಎಸ್, ಎಂ.ಎಸ್, ಎಂ.ಸಿ.ಎಚ್ ಪದವಿಗಳು ಸೇರಿದಂತೆ ಮಾನವ ದೇಹದ ಅಂಗ ಪ್ರತ್ಯಂಗಗಳ ಕುರಿತ ವಿಶೇಷ ಉಪಪದವಿ ಡಿಪ್ಲೋಮಾ ಗೀಳನ್ನು ಹೊಂದಿದ ಅಪರೂಪದ ವೈದ್ಯಕೀಯ ಕ್ಷೇತ್ರದ ವಿಚಕ್ಷಣ ಮೇಧಾವಿ.

ಬೆಂಗಳೂರು, ಮುಂಬಯಿ ವಿಶ್ವವಿದ್ಯಾಲಯಗಳಿಂದ ವಿವಿಧ ವೈದ್ಯಕೀಯ ಪದವಿಗಳ ಹೊಂದಿದ ಡಾ. ನರೇನ್ ಶೆಟ್ಟಿ ಅವರು ದೇಶದ ಹೆಸರಾಂತ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳ ಉಚ್ಛ ಗೌರವ ಉಪಾದಿಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿ ತನ್ನ ಜ್ಞಾನ ಸಂಪತ್ತನ್ನು ವೃದ್ಧಿಗೊಳಿಸಿದ್ದಾರೆ. ಸೈಂಟ್ ಜೋನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್, ಸಹಾಯಕ ಪ್ರೊಫೆಸರ್ ಆಗಿ ಉಪನ್ಯಾಸ ನೀಡಿದ ವಿಸ್ತೃತ ಅನುಭವ ಡಾ. ನರೇನ್ ಶೆಟ್ಟಿ ಅವರಿಗಿದೆ. ವೈದ್ಯಕೀಯ ಪತ್ರಿಕೆಗಳಲ್ಲಿ ಇವರ ಸಂಶೋಧನೆ ಹಾಗೂ ವೈದ್ಯಕೀಯ ಚಿಂತನೆಯ ಬರಹಗಳು ಪ್ರಕಟವಾಗಿವೆ. ಇವರ ಅನೇಕ ಶಸ್ತ್ರಚಿಕಿತ್ಸೆಗಳು ಮರಣೋನ್ಮುಖ ರೋಗಿಗಳಿಗೆ ಜೀವದಾನ ನೀಡಿ ದಾಖಲೆ ನಿರ್ಮಿಸಿವೆ. ತುರ್ತು ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ಇವರ ಅತಿ ಅಮೂಲ್ಯ ಸಲಹೆಗಳು ಧನಾತ್ಮಕ ಫಲಿತಾಂಶ ನೀಡಿ ಅಮೂಲ್ಯ ಪ್ರಾಣಗಳನ್ನು ಉಳಿಸಿವೆ. ಕಳೆದ 18 ವರ್ಷಗಳಿಂದ ಸೈಂಟ್ ಜೋನ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ, ಪ್ರಸ್ತುತ ಸಾವಯವ ಕೃಷಿಕರಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನಡೂರು ರವೀಂದ್ರನಾಥ ಶೆಟ್ಟಿ ಹಾಗೂ ಸರಸ್ವತಿ ಶೆಟ್ಟಿಯವರ ಸುಪುತ್ರ ಡಾ. ನರೇನ್ ಶೆಟ್ಟಿಯವರು ಉಷಾ ಶೆಟ್ಟಿಯವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ವೈದ್ಯೋ ನಾರಾಯಣ ಹರಿ: ಎಂಬ ಆರ್ಯೋಕ್ತಿಯಂತೆ ವ್ಯಾಪಕ ಸಮೃದ್ಧ ಅಮೂಲ್ಯ ಜ್ಞಾನ ಸಂಪನ್ನ ಡಾ. ನರೇನ್ ಶೆಟ್ಟಿ ನಿಜವಾಗಿಯೂ ಓರ್ವ ಅದ್ಭುತ ಸಾಧಕ. ಇವರು ನಮ್ಮ ಬಂಟರ ಮಾತ್ರವಲ್ಲ ಒಟ್ಟು ಮಾನವ ಸಮುದಾಯದ ಹೆಮ್ಮೆಯೇ ಸರಿ. ಬಂಟ್ಸ್ ನೌ ಶ್ರೀಯುತರಿಗೆ ಉತ್ತರೋತ್ತರ ಶ್ರೇಯಸ್ಸು ಹಾಗೂ ಇನ್ನಷ್ಟು ಸೇವೆ ಸಲ್ಲಿಸುವ ಉತ್ಸಾಹ ಆರೋಗ್ಯ ಆಯುಷ್ಯ ನೀಡಲೆಂದು ಹಾರೈಸುತ್ತದೆ.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು























































































































