
ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮನನೊಂದು ಮುಂಬಯಿಯ ಖ್ಯಾತ ಉದ್ಯಮಿ ಹಾಗೂ ದಾನಿ ಡಾ| ಕನ್ಯಾನ ಸದಾಶಿವ ಶೆಟ್ಟಿ ಅವರು ಸಂಘ ಸಂಸ್ಥೆಗಳ ಸಮಾಜ ಸೇವಾ ಕಾರ್ಯಗಳಿಗೆ ವಿದಾಯ ಘೋಷಿಸಿದ್ದಾರೆ. ಇನ್ಮುಂದೆ ಯಾವುದೇ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲೆಕ್ಕಪತ್ರ ವಿಚಾರದಲ್ಲಿ ಉಂಟಾದ ವಿವಾದ ಮತ್ತು ತಮ್ಮ ವಿರುದ್ಧ ನಡೆಯುತ್ತಿರುವ ತೇಜೋವಧೆಯಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ತಮ್ಮ ನೋವನ್ನು ತೋಡಿಕೊಂಡಿರುವ ಡಾ| ಕನ್ಯಾನ, ನಾನು ಬಡತನದ ಹಿನ್ನೆಲೆಯಿಂದ ಬಂದವನು. ಊರು ಬಿಟ್ಟು ಪರ ಊರಿಗೆ ಹೋಗಿ, ಕಷ್ಟಪಟ್ಟು ಉದ್ಯೋಗ ಮಾಡಿ ಉದ್ಯಮ ಕಟ್ಟಿದೆ. ಕಳೆದ ಆರು ವರ್ಷಗಳಿಂದ ಆತ್ಮತೃಪ್ತಿಗಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಲೆಕ್ಕಪತ್ರ ಕೇಳಿದ್ದನ್ನೇ ದೊಡ್ಡ ತಪ್ಪು ಎಂದು ಬಿಂಬಿಸಿ ನನ್ನ ತೇಜೋವಧೆ ಮಾಡಲಾಗುತ್ತಿದೆ. ಇದು ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿಯಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 16 ರಂದು ಮುಂಬಯಿಯಲ್ಲಿ ದಾನಿಗಳು ಸೇರಿ ಕರೆದಿರುವ ಸಭೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ದಾನಿಗಳೇ ಕರೆದ ಸಭೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡಿ ಲಾಯರ್ ನೋಟೀಸ್ ಕಳುಹಿಸುವ ಕೆಲಸಕ್ಕೆ ಮುಂದಾಗಿರುವುದು ಯಾವ ರೀತಿಯಿಂದಲೂ ಸಮಂಜಸವಲ್ಲ. ದಾನ ಕೊಟ್ಟವರಿಗೆ ಲೆಕ್ಕ ಕೇಳುವ ಹಕ್ಕೂ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಹೇಳಿಕೆಗಳು ಹರಿದಾಡುತ್ತಿದ್ದು, ಇದರ ವಿರುದ್ಧ ಕೇರಳದಲ್ಲಿ ಈಗಾಗಲೇ ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಸಂಘ ಸಂಸ್ಥೆಗಳಿಗೆ ನೀಡುವ ದೇಣಿಗೆಯನ್ನು ಫೆಬ್ರವರಿ 14 (ಶನಿವಾರ) ದಿಂದಲೇ ಸ್ಥಗಿತಗೊಳಿಸಿರುವುದಾಗಿ ಘೋಷಿಸಿರುವ ಡಾ| ಕನ್ಯಾನ ಅವರು, ಬಡವರ ಬಗೆಗಿನ ತಮ್ಮ ಕಾಳಜಿ ಮುಂದುವರಿಯಲಿದೆ ಎಂದಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಬರುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಿಗೆ ನೆರವು ವಿತರಣೆಯನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.























































































































