
ಪ್ರಸ್ತುತ ಹಲವಾರು ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಯಶಸ್ವಿ ಉದ್ಯಮಿಯಾಗಿರುವ ಕಟಪಾಡಿ ಎಸ್.ವಿ.ಎಸ್ ನ ಹಳೆ ವಿದ್ಯಾರ್ಥಿ ನರೇಂದ್ರ ಶೆಟ್ಟಿ, ಉದ್ಯಮಿ, ಕವಿ, ಸಾಹಿತಿ ಹಾಗೂ ಐಲೇಸಾ ಪ್ರವರ್ತಕ ಶಾಂತಾರಾಮ್ ಶೆಟ್ಟಿ, ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತಿ ಪಡೆದ ಯಕ್ಷ ಕಲಾವಿದ ಉದ್ಯಮಿ ಅರುಣ್ ಐರೋಡಿ ಉಡುಪಿ ಇವರೆಲ್ಲರ ಸಹಕಾರದೊಂದಿಗೆ ಅಧ್ಯಾಯ ಟ್ರಸ್ಟ್ ಶಿರಸಿ ಇದರ ನಿರ್ದೇಶಕರಾದ ಕಿರಣ್ ಉಪಾಧ್ಯಾಯ ಇವರು ಫೆಬ್ರವರಿ 3 ರಂದು ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲಾ ವಿಭಾಗದ ಮೂರು ತರಗತಿಗಳ ವಿದ್ಯಾರ್ಥಿಗಳಿಗಾಗಿ ಆಶುಭಾಷಣ ಸ್ಪರ್ಧೆ ಏರ್ಪಡಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಏಣಗುಡ್ಡೆ ಸಾರ್ವಜನಿಕ ಗ್ರಂಥಾಲಯ ಹಾಗೂ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯಗಳಿಗೂ ಕೂಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಅನೇಕ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಟ್ರಸ್ಟಿನ ವತಿಯಿಂದ ವಿತರಿಸಿದರು.
ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಯಶಸ್ವಿ ಉದ್ಯಮಿ, ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಸಂಸ್ಥೆಯ ಸಂಚಾಲಕರೂ ಆಗಿರುವ ಸತ್ಯೇಂದ್ರ ಪೈ ಇವರು ವಹಿಸಿದ್ದರು. ಟ್ರಸ್ಟಿನ ನಿರ್ದೇಶಕ ಕಿರಣ್ ಉಪಾಧ್ಯಾಯರು ಕನ್ನಡದ ಏಳಿಗೆಗಾಗಿ ದುಡಿಯುವ ತಮ್ಮ ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಸಾಹಿತಿ ಶಾಂತರಾಮ್ ಶೆಟ್ಟಿ ವಿದ್ಯಾರ್ಥಿಗಳಿಗೆ ಆಶುಭಾಷಣಕ್ಕೂ, ಸಾಹಿತ್ಯಕ್ಕೂ ಸಂಬಂಧ ಪಟ್ಟ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು.





ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿ ಕಟಪಾಡಿ ನರೇಂದ್ರ ಶೆಟ್ಟಿ ಇವರು ತನ್ನ ಶಾಲಾ ದಿನಗಳನ್ನು ಮೆಲುಕು ಹಾಕುತ್ತಾ, ತನ್ನ ವ್ಯಕ್ತಿತ್ವವನ್ನು ತಿದ್ದಿ ತೀಡಿದ್ದ ಗುರುಗಳನ್ನು ಸ್ಮರಿಸಿದರು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೀಳರಿಮೆಯನ್ನು ತೊರೆದು ಕನ್ನಡದಲ್ಲಿ ಪ್ರೌಢಿಮೆ ಗಳಿಸಿಕೊಂಡರೆ ಉಳಿದ ಭಾಷೆಗಳು ತಾನಾಗಿ ಕೈವಶವಾಗುವವೆಂದು ಕಿವಿಮಾತು ಹೇಳಿದರು. ಸಭಾಧ್ಯಕ್ಷರು ದಾನಿಗಳ ನೆರವಿನಿಂದಲೇ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳು ಮುನ್ನಡೆಯಬೇಕಾಗಿದೆ ಎಂಬುದನ್ನು ವಿವರಿಸಿ ಕಾರ್ಯಕ್ರಮದ ಆಯೋಜಕರಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದಲೂ ಅತಿಥಿಗಳನ್ನು ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವೆಂಕಟರಮಣ ಭಟ್, ಗಣೇಶ್ ಕಿಣಿ, ಶ್ರೀನಿವಾಸ ಕಿಣಿ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಶಾನಭಾಗ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ಶಿಕ್ಷಕ ವಿವೇಕಾನಂದ ಎನ್ ಸ್ಪರ್ಧೆಯನ್ನು ಆಯೋಜಿಸಿ, ಬಹುಮಾನ ಘೋಷಿಸಿದರು. ಕನ್ನಡ ಶಿಕ್ಷಕಿ ವಿದ್ಯಾ, ವಿಜ್ಞಾನ ಶಿಕ್ಷಕ ರಂಗನಟ, ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಮತ್ತು ಅತಿಥಿ ನರೇಂದ್ರ ಶೆಟ್ಟಿ ಇವರು ತೀರ್ಪುಗಾರರಾಗಿ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕಿರಣ್ ಶೆಟ್ಟಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಇತರ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.





















































































































