
ಕನ್ನಡ ಸಂಘ ಬಹರೈನ್ ವತಿಯಿಂದ ಜನವರಿ 30 ರಂದು ಜರುಗಿದ ಸದಸ್ಯರ ವಾರ್ಷಿಕ ದಿನಾಚರಣೆಯಂದು ಹಿರಿಯ ಸದಸ್ಯ ರಾಜೇಂದ್ರ ಹೆಗ್ಡೆಯವರಿಗೆ ಸಂಘಕ್ಕೆ ನೀಡಿದ ದೀರ್ಘಕಾಲದ ಸೇವೆಯನ್ನು ಸ್ಮರಿಸಿ ಬೀಳ್ಕೊಡುಗೆ ಸಮಾರಂಭ ನೆರವೇರಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳಾದ ಜಯಶಂಕರ್ ವಿಶ್ವನಾಥನ್ (COO, Uneeco Bahrain), ಹಾಜಿ ಅಬ್ದುಲ್ ರಜಾಕ್ ಹೆಜಮಾಡಿ (Metalco Group), ಪ್ರಕಾಶ್ ಶೆಟ್ಟಿ (ಮಾಲಕರು, Central Cafe) ಹಾಗೂ ಸಂಘದ ಮಾಜಿ ಅಧ್ಯಕ್ಷರುಗಳಾದ ಪ್ರದೀಪ್ ಕುಮಾರ್ ಶೆಟ್ಟಿ, ಅಮರನಾಥ್ ರೈ, ಬಿಲ್ಲವಾಸ್ ಬಹರೈನ್ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ, ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಉಪಾಧ್ಯಕ್ಷ ನಿತಿನ್ ಶೆಟ್ಟಿ ಮತ್ತು ಪದಾಧಿಕಾರಿಗಳು ರಾಜೇಂದ್ರ ಹೆಗ್ಡೆಯವರನ್ನು ಸನ್ಮಾನಿಸಿ ಅಭಿನಂದಿಸಿದರು.

ಅತಿಥಿಗಳು ಮತ್ತು ಅಧ್ಯಕ್ಷರು ರಾಜೇಂದ್ರ ಹೆಗ್ಡೆ, ಶ್ರೀಮತಿ ಚೇತನಾ ರಾಜೇಂದ್ರ ಹೆಗ್ಡೆ ಮತ್ತು ಅವರ ಮಕ್ಕಳು ಸಂಘಕ್ಕೆ ಕಳೆದ ಮೂರು ದಶಕಗಳಿಂದ ನೀಡಿದ ಗಣನೀಯ ಕೊಡುಗೆಯನ್ನು ಗೌರವಿಸಿ ಮಾತನಾಡಿದರು. ಸನ್ಮಾನಿತರಾದ ರಾಜೇಂದ್ರ ಹೆಗ್ಡೆ ತಮ್ಮ ಅನುಭವಗಳನ್ನು ಹಂಚಿಕೊಂಡು ಸಂಘದ ಮುಂದಿನ ಚಟುವಟಿಕೆಗಳಿಗೆ ಶುಭ ಹಾರೈಸಿದರು. ಸಮಾರಂಭವು ಸಂಘದ ಪದಾಧಿಕಾರಿಗಳು, ಸದಸ್ಯರು, ಅತಿಥಿಗಳು ಮತ್ತು ಕು. ಸಾಧನಾ ಹೆಗ್ಡೆ ಸಮ್ಮುಖದಲ್ಲಿ ಭಾವನಾತ್ಮಕ ಮತ್ತು ಸ್ಮರಣೀಯವಾಗಿ ನೆರವೇರಿತು. ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಕಾರ್ಯಕ್ರಮ ನಿರೂಪಿಸಿದರು.





















































































































