
ನಾಗಮಂಡಲ ಎಂಬ ಪೂಜಾ ವಿಧಾನದ ಬಗ್ಗೆ ನನಗೆ ಇನ್ನೂ ಪೂರ್ಣ ವಿಶ್ವಾಸ ಬಂದಿಲ್ಲ. ಯಾಕೋ ಏನೋ ನಾಗ ಪಾತ್ರಿ ಹಾಗೂ ವೈದ್ಯರು (ನಾಗ ಕನ್ನಿಕೆಯಂತೆ) ಪರಸ್ಪರರನ್ನು ಸಾರ್ವಜಿನಿಕವಾಗಿ ಅಪ್ಪಿ ಹಿಡಿಯುವುದೂ ಆರಾಧನೆಯ ಒಂದು ಭಾಗ ಅಂತ ನಂಬಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅಲ್ಲಿ ವೈದ್ಯರು ಹೇಳುವುದು ಯಾವುದೇ ನಾಗನ ಕುರಿತಾದ ಮಂತ್ರಗಳಲ್ಲ. ಪುರಂದರ ದಾಸರ ಭಜನೆಗಳು. ನಾಗಮಂಡಲಗಳು ಬಹಳ ಹಳೆಯ ಅರಾಧನಾ ಪದ್ದತಿ ಅಲ್ಲ ಅನ್ನುವುದಕ್ಕೆ ಇದೂ ಒಂದು ಸಾಕ್ಷಿ. ನಿಜ ನಾಗರ ಹಾವುಗಳು ಪರಸ್ಪರ ಮೈಥುನ ಸ್ಥಿತಿಯಲ್ಲಿರುವ ದೃಶ್ಯ ಹಳ್ಳಿಗಳಲ್ಲಿ ಕಾಣ ಸಿಗುವುದು ಅಪರೂಪವೇನಲ್ಲ. ಆದರೆ ಅವುಗಳನ್ನು ನೋಡುವುದು ಪಾಪ ಎಂಬುದು ನಮ್ಮ ತುಳುನಾಡಿನ ಜನರ ಬಲವಾದ ನಂಬಿಕೆ. ತಕ್ಷಣ ಅಲ್ಲಿಂದ ದೂರ ಹೋಗುವುದು ನಮ್ಮ ಕ್ರಮ. ಹಾಗಿರುವಾಗ ನಾಗಪಾತ್ರಿಗಳು ಹಾಗೂ ವೈದ್ಯರು ಸಾರ್ವಜನಿಕವಾಗಿ ಪರಸ್ಪರ ಅಪ್ಪಿಕೊಳ್ಳಬಹುದೇ ಎಂಬುದಕ್ಕೆ ಬಲ್ಲವರಿಂದ ಉತ್ತರ ಬಯಸುತ್ತೇನೆ. ಈ ಇಡೀ ಆರಾಧನಾ ಪದ್ದತಿಯನ್ನು ಕುಟುಂಬ ಸಮೇತರಾಗಿ ನೋಡಲು ಅಸಹ್ಯವಾಗುತ್ತದೆ. ಇದು ನಾಗನ ಮೇಲಿನ ಜನಸಾಮಾನ್ಯರ ಭಕ್ತಿಯ ದುರುಪಯೋಗವಲ್ಲದೆ ಬೇರೇನೂ ಅಲ್ಲ. ವಿದ್ವಾಂಸರ ಪ್ರಕಾರ ಸುಮಾರು ಇನ್ನೂರು ಮುನ್ನೂರು ವರ್ಷಗಳ ಹಿಂದೆ ನಾಗಾರಾಧನೆಯೂ ಭೂತಾರಾಧನೆಯಂತೆ ತೌಳವರಿಂದಲೇ ಭೂತಾರಾಧನೆಯ ರೀತಿಯಲ್ಲಿಯೇ ನಡೆಯುತ್ತಿತ್ತಂತೆ. ಶಿರ್ವ ನಡಿಬೆಟ್ಟಿನಲ್ಲಿ ಒಂದು ಕಡೆ ಈಗಲೂ ಮುಗ್ಗೇರ ಜನಾಂಗದವರಿಂದಲೇ ಆರಾಧಿಸಲ್ಪಡುವ ನಾಗ ಬನ ಇದೆ. ಅಲ್ಲಿಗೆ ಪೂಜೆಯ ವೇಳೆಗೆ ಜಾಗದ ಮಾಲಕರಾದ ಬಂಟರಿಗೂ ಒಳಗೆ ಪ್ರವೇಶ ಇಲ್ಲ. ಅಲ್ಲಿ ಯಾವುದೇ ಮಂತ್ರಘೋಷ ಇಲ್ಲ. ಶುದ್ಧ ತೌಳವ ರೀತಿಯ ಪೂಜೆ. ಈ ಮಧ್ಯದಲ್ಲಿ ಎಲ್ಲಿಯೋ ನಾಗಪಾತ್ರಿಗಳ ಪ್ರವೇಶ ಆಯಿತು. ನಮ್ಮದೇ ದನದ ಹಾಲು ಕುಡಿದ ನಾಗ ತುಳು ಬಿಟ್ಟು ಕನ್ನಡ ಮಾತಾಡಲು ಶುರು ಮಾಡಿತು.

ಇತ್ತೀಚೆಗೆ ತುಳುನಾಡಿನ ಗರೋಡಿ ಒಂದರಲ್ಲಿ ಬಿಲ್ಲವ ಯುವಕರಿಬ್ಬರು ನಾಗ ಪಾತ್ರಿಗಳಾದದ್ದು ಸ್ವಾಗತಾರ್ಹ ಬೆಳವಣಿಗೆ. ಆ ಮಟ್ಟಿಗೆ ಬಿಲ್ಲವ ಬಂಧುಗಳನ್ನು ನಾನು ಅಭಿನಂದಿಸುತ್ತೇನೆ. ತಮ್ಮದೇ ಜಾತಿಯವರಿಗೆ ಪೂಜೆ ಮಾಡುವ ವಿಧಿ ವಿಧಾನಗಳನ್ಮು ಕಲಿಸಿ ‘ಶಾಂತಿ’ಗಳನ್ನು ತಯಾರು ಮಾಡಿದುದು ಬಿಲ್ಲವರಲ್ಲಿ ದೊಡ್ಡ ಬೆಳವಣಿಗೆ. ನಾವು ಬಂಟರು ಇನ್ನೂ ಎರಡು ಸಾವಿರದ ಸತ್ಯನಾರಾಯಣ ಪೂಜೆಗೆ ಇಪ್ಪತ್ತು ಸಾವಿರ ಖರ್ಚು ಮಾಡಿದರೆ ಮಾತ್ರ ಸತ್ಯನಾರಾಯಣನ ಅನುಗ್ರಹ ನಮಗೆ ಆಗುವುದೆಂಬ ಭ್ರಮೆಯಲ್ಲಿದ್ದೇವೆ. ಭೂತ ಸ್ಥಾನದಲ್ಲಿ ಬ್ರಹ್ಮಕಲಶ ಮಾಡಿಸುವುದು, ದೈವಗಳನ್ನು ಈಶ್ವರನ ಗಣಗಳೆಂದು ಊಹಿಸಿ ಅದೇ ರೀತಿಯ ಮಧು ಹೇಳುವುದು, ದೈವಗಳ ಹೆಸರನ್ನು ಸಂಸ್ಕ್ರತೀಕರಿಸುವುದು ಮೊದಲಾದ ಅಪಸವ್ಯಗಳನ್ನು ನೋಡುವಾಗ ಮುಂದೊಂದು ದಿನ ಭೂತಾರಾಧನೆಯೂ ನಾಗಾರಾಧನೆಯಂತೆ ವೈದಿಕರ ಪಾಲಾಗುವ ಸಾಧ್ಯತೆ ಇದೆ. ಈ “ಅಬತಾರ”ಗಳಿಂದ ಹೊರಗೆ ಬಾರದಿದ್ದರ ನಮಗೆ ಮಾತ್ರ ಅಲ್ಲ ನಮ್ಮ ದೈವಗಳಿಗೂ ನಾಗನಿಗೂ ಉಳಿಗಾಲ ಇಲ್ಲ. ಇಲ್ಲಿ ನನ್ನದೊಂದು ಸಣ್ಣ ಪ್ರಶ್ನೆ. ಸುಬ್ರಹ್ಮಣ್ಯ ಹಾಗೂ ಕುಡುಪು ದೇವಸ್ಥಾನದಲ್ಲಿ ನಾಗಮಂಡಲ ಯಾಕೆ ಆಗುತ್ತಿಲ್ಲ?
ಬರಹ : ದಾಮೋದರ ಶೆಟ್ಟಿ ಇರುವೈಲು





















































































































