
ನಮ್ಮ ಸಮಾಜ, ಸಮುದಾಯ, ಸಂಸ್ಕ್ರತಿ, ಸಮಾಜಮುಖಿ ಚಿಂತನೆ ಮತ್ತು ನಾಯಕತ್ವದ ಮೂಲಕ ಬಾಂಧವರ ಒಗ್ಗೂಡುವಿಕೆಯಲ್ಲಿ ಸೃಷ್ಟಿಯಾದ ಸಂಘಟನೆ ವರ್ಷದಿಂದ ವರ್ಷಕ್ಕೆ ಬಲಯುತವಾಗಿ ಸಾಗುತ್ತಿದೆ. ನಮ್ಮ ಬಂಟ್ಸ್ ಅಸೋಸಿಯೇಷನ್ ಕೂಡಾ ಅದೇ ಉದ್ದೇಶದೊಂದಿಗೆ ಸ್ಥಾಪನೆಯಾಗಿ 14 ವರ್ಷಗಳ ತನಕ ಬಂದು, ಸಂಘದ ಮಾಜಿ ಅಧ್ಯಕ್ಷರುಗಳು, ದಾನಿಗಳು, ಸಮಾಜ ಬಾಂಧವರ ಸಹಕಾರದಿಂದ ಹಲವಾರು ಕಾರ್ಯ ಯೋಜನೆಗಳ ಮೂಲಕ, ಸಂಘಟನಾತ್ಮಕವಾಗಿ ಒಗ್ಗೂಡಿಸಿಕೊಂಡು ಬಂದ ನಮ್ಮೆಲ್ಲರ ಶ್ರಮಕ್ಕೆ ಸಿಕ್ಕಿದ ಯಶಸ್ಸು ಇದಾಗಿದೆ. ಮುಂದೆಯೂ ಸಂಘ ಬೆಳೆಯಬೇಕು ಮತ್ತಷ್ಟು ಬಾಂಧವರು ಸಂಘವನ್ನು ನಡೆಸುವ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸಂಘದ ಪ್ರೌಢಾವಸ್ಥೆಯ ಈ ಕಾಲಘಟ್ಟದ ಸಂಭ್ರಮದಲ್ಲಿ ಹದಿನಾಲ್ಕನೇ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದೇವೆ. ಇದು ನಮ್ಮ ಮನೆಯ ಕಾರ್ಯಕ್ರಮ. ಎಲ್ಲರೂ ಒಂದಾಗಿ ಶಿಸ್ತು ಬದ್ದವಾಗಿ ಸಮಾರಂಭ ನಡೆಸುವ ಜವಾಬ್ದಾರಿ ಎಲ್ಲರಿಗೂ ಇದೆ. ಸಮಾಜ ಬಾಂಧವರನ್ನು ಒಗ್ಗೂಡಿಕೊಂಡು ಸರ್ವರ ಸಹಕಾರದಿಂದ ಈ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸುವ. ತಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರೋಹಿತ್ ಶೆಟ್ಟಿಯವರು ತಿಳಿಸಿದರು.

ಪುಣೆ ಬಂಟ್ಸ್ ಅಸೋಸಿಯೇಷನ್ ನ 14ನೇ ವಾರ್ಷಿಕೊತ್ಸವ ಸಮಾರಂಭವು ಫೆಬ್ರವರಿ 6 ಶುಕ್ರವಾರದಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ನಡೆಯಲಿದೆ. ಈ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕ್ಯಾಂಪ್ ಲೇಡೀಸ್ ಕ್ಲಬ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ರೋಹಿತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ನ ನಿಕಟಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು, ಮಾಜಿ ಅಧ್ಯಕ್ಷ ನಾರಾಯಣ ಕೆ ಶೆಟ್ಟಿ, ಉಪಾದ್ಯಕ್ಷರಾದ ಸತೀಶ್ ರೈ ಕಲ್ಲಂಗಳ ಗುತ್ತು, ಪ್ರ.ಕಾರ್ಯದರ್ಶಿ ದಿನೇಶ್ ಶೆಟ್ಟಿ, ಕೋಶಾಧಿಕಾರಿ ಮನೋಹರ್ ಶೆಟ್ಟಿ, ಸಾಂಸ್ಕ್ರತಿಕ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ,ಪ್ರಮುಖರಾದ ಮಹೇಶ್ ಹೆಗ್ಡೆ ಪೊಳಲಿ, ರವೀಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ಸುರೇಶ ಶೆಟ್ಟಿ ಗಂಧರ್ವ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇಷ್ಮಾ ಆರ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆ ಸುಧಾ ಎನ್ ಶೆಟ್ಟಿ, ಕಾರ್ಯದರ್ಶಿ ಶರ್ಮಿಳಾ ಟಿ ರೈ, ಸಾಂಸ್ಕ್ರತಿಕ ಕಾರ್ಯಾಧ್ಯಕ್ಷೆ ಶಾಲಿನಿ ಎಂ ಶೆಟ್ಟಿ, ಪ್ರಮುಖರಾದ ಸೌಮ್ಯ ಆರ್ ಶೆಟ್ಟಿ, ಪೂರ್ಣಿಮಾ ಎ ಶೆಟ್ಟಿ ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೇಶ್ ಶೆಟ್ಟಿಯವರು ಸ್ವಾಗತಿಸಿ, ಸಂಘದ ವಾರ್ಷಿಕೋತ್ಸವ ಬಗ್ಗೆ ತಿಳಿಸಿದರು. ರೋಹಿತ್ ಶೆಟ್ಟಿಯವರು ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು. ಸಭೆಯಲ್ಲಿದ್ದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿದ್ದ ಗಣೇಶ್ ಹೆಗ್ಡೆ, ನಾರಾಯಣ ಶೆಟ್ಟಿ, ರೇಷ್ಮಾ ಶೆಟ್ಟಿ ಮಾತನಾಡಿದರು. ದಿನೇಶ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ, ಪುಣೆ





















































































































