ಜೇಸಿಐ ವಲಯದ ಅತ್ಯಂತ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಗಣೇಶಪುರದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಬೈಕಂಪಾಡಿಯ ಕೈಗಾರಿಕಾ ಭವನದಲ್ಲಿ ಜನವರಿ 11ರಂದು ನಡೆಯಿತು. ಘಟಕದ 11 ನೇಯ ಅಧ್ಯಕ್ಷರಾಗಿ ಚೇಳ್ಯಾರು ಗುತ್ತು ಮನೆತನದ ಖ್ಯಾತ ವಾಗ್ಮಿ, ಸಾಹಿತಿ, ಪ್ರತಿಷ್ಠಿತ ಎಂ.ಆರ್.ಪಿ.ಎಲ್ ಸಂಸ್ಥೆಯ ನಿವೃತ್ತ ಮಹಾ ಪ್ರಬಂಧಕರಾದ ಶ್ರೀಮತಿ ವೀಣಾ ಟಿ ಶೆಟ್ಟಿ ಮತ್ತು ಉದ್ಯಮಿ ತಾರನಾಥ ಶೆಟ್ಟಿ ದಂಪತಿಗಳ ಸುಪುತ್ರ ಜೇ.ಎಫ್.ಎಂ ದೇವಿಚರಣ್ ಟಿ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಜೆ.ಎಫ್.ಎಂ ಅಶ್ವಿನ್ ಶೇಖರವರು ನೂತನ ಅಧ್ಯಕ್ಷ ರಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯದರ್ಶಿಯಾಗಿ ಜೇಸಿ ಅಶ್ವತ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜೇಸಿ ರಜತ್ ಶೆಟ್ಟಿ, ಖಜಾಂಚಿಯಾಗಿ ಜೇಸಿ ರಿತೇಶ್, ಮಹಿಳಾ ಜೇಸಿ ಸಂಯೋಜಕರಾಗಿ ಜೇಸಿ ಶುಭ ಶರತ್, ಯುವ ಜೇಸಿ ಸಂಯೋಜಕರಾಗಿ ಜೇಜೇಸಿ ವಿನೀತ್ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ಮೂವರು ಹೊಸ ಜೇಸಿ ಸದಸ್ಯರನ್ನು ವಲಯ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಪ್ರಮಾಣವಚನ ಬೋಧಿಸಿ ಬರಮಾಡಿಕೊಂಡರು. ಜೇಸಿ ವಲಯದ 15ರ ಉಪಾಧ್ಯಕ್ಷ ಜೇಸಿ ಅರುಣ್ ಕುಮಾರ್ ಮಾಂಜ ಅವರು ನೂತನ ಸದಸ್ಯರಿಗೆ ಜೇಸಿಐ ಲಾಂಛನದ ಪಿನ್ ನೀಡಿ ಶುಭ ಹಾರೈಸಿದರು.





ವಲಯ ಅಧ್ಯಕ್ಷರಾದ ಜೇಸಿ ಸಂತೋಷ್ ಶೆಟ್ಟಿ ಅವರು ಮಾತನಾಡಿ, ಜೇಸಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಏಕೈಕ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಮೂಲಕ ಉತ್ತಮ ರೀತಿಯ ತರಬೇತಿಯನ್ನು ಪಡೆಯುವ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ, ನಾಯಕರಾಗಿ ರೂಪುಗೊಳ್ಳಲು ಸಾಧ್ಯ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮಾಲಾಡಿ ಅವರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರು ಹಾಗೂ ತಂಡಕ್ಕೆ ಸಾಮಾಜಿಕ ಕಳಕಳಿಯ ಸಂದೇಶ ನೀಡಿ ಹೃತ್ಪೂರ್ವಕವಾಗಿ ಶುಭ ಹಾರೈಸಿದರು. ಸಮಾರಂಭದಲ್ಲಿ ಗಣೇಶಪುರ ಘಟಕದ ಪೂರ್ವ ಅಧ್ಯಕ್ಷರುಗಳು ಮತ್ತು ಸರ್ವ ಸದಸ್ಯರನ್ನು ಜೇಸಿ ಆಂದೋಲನಕ್ಕೆ ಅವರ ನಿರಂತರ ಕೊಡುಗೆ ಮತ್ತು ಬೆಂಬಲವನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜೇಸಿ ಶ್ರೀಶ ಕರ್ಮಾರನ್ ರವರ ಪೀಠಿಕೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ನೂತನ ಕಾರ್ಯದರ್ಶಿ ಜೇಸಿ ಅಶ್ವತ್ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ವಲಯ 15 ರ ಹಲವಾರು ಜೇಸಿ ಅಧಿಕಾರಿಗಳು, ಇತರ ಘಟಕಗಳ ಸದಸ್ಯರು ಸೇರಿದಂತೆ ಜೇಸಿಯೇತರ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

















































































































