ಈಗ ಎಲ್ಲವೂ ಫಾಸ್ಟ್ ಫಾಸ್ಟ್. ಹೊಟ್ಟೆಯಿಂದ ಹೊರ ಬರುವಾಗಲೇ ತಿಂಗಳಾದರೂ ಆಗಿಲ್ಲದಿದ್ದರೂ ಕಾಯುವ ಪ್ರಮೇಯವೇ ಇಲ್ಲ. ಮುಂಚಿನ ದಿವಸದವರೆಗೆ ಎಲ್ಲವೂ ನಾರ್ಮಲ್ ಎಂದ ಡಾಕ್ಟರ್ ಗಳು ಮರು ದಿವಸ ಹೇಳ್ತಾರೆ ಮಗು ತಿರುಗಿದೆ, ಕುತ್ತಿಗೆಗೆ ಕರುಳು ಸಿಕ್ಕಿ ಹಾಕಿಕೊಂಡಿದೆ, ಉಸಿರಾಟ ನಿಧಾನವಾಗಿದೆ ಹಾಗಾಗಿ ಸಿಜೇರಿಯನ್ ಮಾಡಿದರೆ ಉತ್ತಮ. ಮತ್ತೆ ನೀವು ರಿಸ್ಕ್ ತೊಗೋಳ್ತೀರಾದರೆ ಓಕೆ ಎಂದು. ನಾವು ಹೆದರಿ ನೀವೇ ದೇವರು! ಏನು ಹೇಳ್ತೀರೋ ಹಾಗೇ ಡಾಕ್ಟರ್ ಸಿಜೇರಿಯನ್ ಮಾಡಿಸಲು ಒಪ್ಪುತ್ತೇವೆ. ಹೀಗೆ ಗಡಿಬಿಡಿಯಲ್ಲೇ ಬಂದ ಮಕ್ಕಳು ಗಡಿಬಿಡಿಯಲ್ಲೇ ಫಾಸ್ಟ್ ಜಂಕ್ ಫುಡ್ ತಿಂದು ಬೆಳೆದು ಶಾಲೆಯಲ್ಲಿ ಕೆಜಿ ಕ್ವಿಂಟಾಳ್ ತೂಗಿ ಎಸ್.ಎಸ್.ಎಲ್.ಸಿ ಮುಗಿಸಿಕೊಂಡು ಕಾಲೇಜು ಮೆಟ್ಟಲು ಹತ್ತುವಾಗ ಏನು ಕಲಿ ಪ್ರಭಾವವೋ, ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟ ಬುದ್ದಿಯನ್ನೇ ಕಲಿಯುತ್ತಿದ್ದಾರೆ !. ಇದಕ್ಕೆ ಕಾರಣ ಈಗಿನ ನಮ್ಮ ಜೀವನ ಶೈಲಿ. ಹೆಚ್ಚಿನ ತಂದೆ ತಾಯಿಗೆ ಮಕ್ಕಳ ಬಗ್ಗೆ ಗಮನ ಕೊಡಲು ಪುರುಸೊತ್ತೇ ಇಲ್ಲ, ಮತ್ತೆ ಆಸಕ್ತಿಯೂ ಕಡಿಮೆಯಾಗಿದೆ. ಕಾರಣ ವ್ಯವಹಾರದ ಇಲ್ಲವೇ ಉದ್ಯೋಗದ ಒತ್ತಡ. ಈ ಕಾರಣದಿಂದ ಮಕ್ಕಳು ಅಡ್ಡದಾರಿ ಹಿಡಿಯುವ ಸಂದರ್ಭಗಳು ಹೆಚ್ಚಾಗಿವೆ. ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಕ್ಕಳಿಗೆ ಶಾಲೆಯಲ್ಲದೇ ಗಮನ ಹರಿಸಲು ಬೇರೆ ಬೇರೆ ವಿಚಾರಗಳಿತ್ತು. ಕೃಷಿ ಚಟುವಟಿಕೆಯೋ, ತಂದೆ ತಾಯಿಯ ವ್ಯವಹಾರವೂ ಇರುತ್ತಿತ್ತು. ಆದರೆ ಈಗ ಶಾಲೆ, ಕಾಲೇಜ್, ಟ್ಯೂಷನ್, ಇತರ ಕ್ಲಾಸ್ಗಳು ಎಂದು ಇಡೀ ದಿವಸ ಮನೆಯಿಂದ ಹೊರಗೆ ಇರುವ ಸಂದರ್ಭಗಳೇ ಹೆಚ್ಚು. ಬೇರೆ ಆಸಕ್ತಿಗಳು ಹುಟ್ಟುವ ಪ್ರಮೇಯವೇ ಕಡಿಮೆ. ಮತ್ತೆ ಕೆಲವಷ್ಟು ಸಂಗತಿಗಳ ಬಗೆಗೆ ಕೀಳರಿಮೆ. ಹಾಗಾಗಿ ಇಂತಹ ಮಕ್ಕಳಿಗೆ ಸಿಗುವ ಗೆಳೆಯರೂ ಅಂತವರೇ ಆಗಿರುತ್ತಾರೆ. ಮನೆಯವರು ತಿಳಿಯುವುದು ಮಕ್ಕಳು ಓದುತ್ತಿದ್ದಾರೆ ಅಥವಾ ಬೇರೆ ಕ್ಲಾಸ್ ಗಳಲ್ಲಿ ಇದ್ದಾರೆ ಎಂದು. ಆದರೆ ಮಕ್ಕಳು ಕೆಟ್ಟ ಚಟಗಳ ದಾಸರಾಗುತ್ತಿದ್ದಾರೆ. ಅದು ಸಿಗರೇಟು, ಬೀಯರ್ ನಿಂದ ಪ್ರಾರಂಭವಾಗಿ ಗಾಂಜಾ ಅಫೀಮುವರೆಗೂ ಬಂದು ಮುಟ್ಟಿದೆ!. ಈ ಕತೆಗಳು ಕೆಲವೇ ವರ್ಷದ ಹಿಂದೆ ಕೇವಲ ಮುಂಬೈ, ಬೆಂಗಳೂರು ಇಂತಹ ದೊಡ್ಡ ಸಿಟಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇತ್ತೀಚಿನ ಅಂದ್ರೆ ಕಳೆದೊಂದು ದಶಕದಿಂದ ಶಿಕ್ಷಣ ಕಾಶಿಯಂತಿರುವ ನಮ್ಮ ಕರಾವಳಿ ನಗರಗಳಾದ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡುವರೆಗೂ ವ್ಯಾಪಿಸಿದೆ. ಇದರ ಮಾಯಾಜಾಲದ ಕಬಂಧ ಬಾಹುಗಳು ಎಲ್ಲಾ ಕಡೆ ಹರಡಿವೆ!!!. ನಮ್ಮ ಜೆಲ್ಲೆಯು ಹತ್ತಕ್ಕೂ ಹೆಚ್ಚು ಗಡಿ ರಸ್ತೆಗಳನ್ನು ಹೊಂದಿದ್ದು, ಮುಖ್ಯವಾಗಿ ಕೇರಳದಿಂದ ಅವ್ಯಾಹತವಾಗಿ ಈ ಡ್ರಗ್ಸ್ ಗಳು ನಮ್ಮಲ್ಲಿ ಹರಿದು ಬರುತ್ತಿರುವುದು ದೃಢಪಟ್ಟಿದೆ. ಅದಲ್ಲದೇ ವಿದೇಶ, ಮುಂಬೈ ಮತ್ತು ದೆಹಲಿಯಿಂದಲೂ ಅತಿ ದೊಡ್ಡ ಡ್ರಗ್ಸ್ ಪೂರೈಕೆಯಾಗುತ್ತಿದೆ. ಕಳೆದ ಮಾರ್ಚ್ ನಲ್ಲಿ ಮಂಗಳೂರು ಪೋಲಿಸರು 75 ಕೋಟಿ ರೂ ಬೆಲೆಬಾಳುವ ಎಮ್ಡಿಎಮ್ ಡ್ರಗ್ಸ್ ನ್ನು ವಶಪಡಿಸಿಕೊಂಡಿರುವುದು ಬಹು ದೊಡ್ಡ ಗಾಬರಿಯ ಸಂಗತಿಯಾಗಿದೆ.

ನಮ್ಮ ನಗರಗಳು ಅಷ್ಟೇನೂ ದೊಡ್ಡದು ಅಲ್ಲವಾದರೂ ನಮ್ಮೂರ ಜನಗಳ ಕಾರ್ಬಾರ್ ಅಂತರಾಷ್ಟ್ರೀಯ ಮಟ್ಟದ್ದು ಮತ್ತು ಯಾವುದೇ ವಿಷಯಗಳಲ್ಲೂ ನಾವು ಹಿಂದೆ ಇಲ್ಲ. ಆದರೆ ಇದರ ಪ್ರಭಾವ ನಮ್ಮ ಮಕ್ಕಳ ಮೇಲೆ ಆಗಿದೆ. ಕಾರಣ ನಾವೆಲ್ಲಾ ಕಷ್ಟದ ಅಥವಾ ಮಧ್ಯಮ ವರ್ಗದ ಇಲ್ಲವೇ ಬಡತನದ ಹಿನ್ನೆಲೆಯಿಂದ ಬಂದರೂ ಕಠಿಣ ಪರಿಶ್ರಮದಿಂದ ಒಂದಲ್ಲ ಒಂದು ಸಾಧನೆ ಮಾಡಿದವರೇ. ಹಾಗಾಗಿ ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರದು ಎಂಬುದು ಎಲ್ಲಾ ಹೆಚ್ಚಿನ ಮಾತಾ ಪಿತರ ಬಯಕೆ. ಇದು ವ್ಯಾಮೋಹವೆಂದರೂ ತಪ್ಪಲ್ಲ. ನಮ್ಮ ತಂದೆ ತಾಯಿ ನಮ್ಮನ್ನು ಪ್ರೀತಿಯಿಂದ ಆದರೆ ಶಿಸ್ತು ಮತ್ತು ಮರ್ಯಾದೆಯಿಂದ ಬೆಳೆಸಿದರೆ ಹೊರತು ಅತಿ ಮೋಹದಿಂದ ಅಲ್ಲ. ಆದರೆ ಈಗಿನ ನಮ್ಮ ಮಕ್ಕಳನ್ನು ನಾವು ಮೋಹ ಮತ್ತು ಬಿಂದಾಸ್ ಆಗಿ ಕೇಳಿದ್ದೆಲ್ಲದಕ್ಕೂ ಸೈ ಎಂದು ಬೆಳೆಸುತ್ತಿದ್ದೇವೆ. ಇದರ ಪರಿಣಾಮವಾಗಿ ನಮ್ಮ ಮಕ್ಕಳು ಸೊಂಪಾಗಿ ಮನೆಯಲ್ಲಿನ ಯಾವುದೇ ಒತ್ತಡವನ್ನೂ ಅನುಭವಿಸದೆ ಶಾಲೆಯ, ಕಾಲೇಜಿನ ಯಾವುದೇ ಖರ್ಚಿಗೆ ಕ್ಯಾರೇ ಎನ್ನದೆ ಕೇಳಿದ್ದೆಲ್ಲ ಕ್ಷಣ ಮಾತ್ರದಲ್ಲಿ ಪಡೆದು ಮಜಾದಿಂದಲೇ ಬದುಕುತ್ತಿದ್ದಾರೆ. ಆದರೆ ಇದರ ಋಣಾತ್ಮಕ ಪರಿಣಾಮ ಮಾತ್ರ ಘೋರವಾಗುತ್ತಿದೆ. ನಮ್ಮ ಜಿಲ್ಲೆಗೆ ಶಿಕ್ಷಣದ ನೆಪದಲ್ಲಿ ಹೊರ ರಾಜ್ಯಗಳ ವಿದ್ಯಾರ್ಥಿಗಳೂ ಹೆಚ್ಚು ಸಂಖ್ಯೆಯಲ್ಲಿ ಬರುತ್ತಲೇ ಇದ್ದಾರೆ. ಅವರು ಅವರ ತಂದೆ ತಾಯಿಯಿಂದ ದೂರವಾಗಿದ್ದು ಇಲ್ಲಿಯ ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ಶಿಸ್ತೇ ಇಲ್ಲದೆ “ವಿದ್ಯಾರ್ಥಿ ಜೀವನ ಬಂಗಾರದ ಜೀವನ” ಮಜಾ ಮಾಡಲು ಸಿಕ್ಕ ಅವಕಾಶ ಎಂಬ ತಪ್ಪು ತಿಳುವಳಿಕೆಯಿಂದ ತಮಗೆ ದೊರೆತ ಸುಂದರ ದಿನಗಳನ್ನು ಉತ್ತಮ ಅಂಕ ಪಡೆದು ಸಾರ್ಥಕ ಪಡಿಸಿ ಮುಂದೆ ಸಮರ್ಥ ಜೀವನ ನಡೆಸುವ ತಳಹದಿಯಾಗಿಸುವ ಬದಲು ಅಂಕೆಯೇ ಇಲ್ಲದೆ ಕೆಟ್ಟ ಚಟದ ದಾಸರಾಗುತ್ತಿದ್ದಾರೆ. ಅವರ ಜೊತೆ ನಮ್ಮ ಮನೆಯ ಮಕ್ಕಳೂ “ಹಂದಿಯ ಜೊತೆ ಸೇರಿ ಆಕಳ ಕರುವೂ ಹೊಲಸು ತಿನ್ನಲು ಕಲಿಯಿತು” ಎಂಬ ಹಾಗೆ ತಮಗೆ ಸಿಕ್ಕ ಈ ಸ್ವತಂತ್ರವಾದ ಜೀವನವನ್ನು ಬೇಕಾಬಿಟ್ಟಿ ಕಳೆಯುವ ಮಟ್ಟಕ್ಕೆ ಬಂದಿದ್ದಾರೆ. ನಮ್ಮ ಯುವ ಜನತೆ ಈ ತಾತ್ಕಾಲಿಕ ಸುಖದ ಗುಂಡಿಗೆ ಇಳಿದಿರುವುದು ಈಗ ಬಟಾ ಬಯಲಾಗಿದೆ. ನೇರವಾಗಿ ಹೇಳಬೇಕೆಂದರೆ ಸುಸಂಸ್ಕೃತರ ನಾಡೆಂದು ಹೆಮ್ಮೆ ಪಡುತ್ತಿದ್ದ ನಮ್ಮ ಊರು ಈಗ ಡ್ರಗ್ಸ್ ದಂಧೆಯಲ್ಲೂ ಮುಂಚೂಣಿಯಲ್ಲಿದೆ ಎಂದರೆ ನಂಬಲೇಬೇಕಾಗಿದೆ. ನಮ್ಮ ಮಕ್ಕಳೇ ತಮಗೆ ಸಿಕ್ಕ ಈ ಐಷಾರಾಮಿ ಜೀವನವನ್ನು ಮತ್ತಷ್ಟು ಮಜಾದಿಂದ ಕಳೆಯಲು ಗಾಂಜಾ ಗಿರಾಕಿಗಳಾಗಿ, ಸಿಗರೇಟು, ಅಫೀಮು, ಡ್ರಗ್ಸ್ ಮತ್ತು ಇತರ ಅಮಲು ಪದಾರ್ಥಗಳ ದಾಸರಾಗಿ ಮುಂದುವರಿಯುತ್ತಿರುವುದು ಬಹಳಾನೇ ಖೇದಕರ ವಿಚಾರ. ಒಂದು ಸಣ್ಣ ಒತ್ತಡವನ್ನೂ ಸಹಿಸದ ಸ್ಥಿತಿಗೆ ಬಂದು ತಲುಪಿದೆ ಅವರ ದಿನಚರಿ.
ಇದು ಕೇವಲ ಗಂಡು ಹುಡುಗರಿಗೆ ಸೀಮಿತವಾಗಿರದೆ ಈಗ ಗಂಡುಹೆಣ್ಣು ಎಂಬ ಭೇದವಿಲ್ಲದೆ ಅವ್ಯಾಹತವಾಗಿ ಮುಂದುವರಿದಿರುವುದು ಬಹಳ ಗಾಬರಿ ಮತ್ತು ಆತಂಕ ತರುವ ವಿಚಾರವಾಗಿದೆ. ಉತ್ಸಾಹದಿಂದ ಇರಬೇಕಾದ ಈ ಎಳೆಯ ಮನಸ್ಸುಗಳು ಯಾವುದೋ ಖಿನ್ನತೆಯಿಂದ ಬಳಲುತ್ತಾ ಇದೆ. ಒಳ್ಳೆಯ ಮನೆತನದ, ಗೌರವಾನ್ವಿತ ಕುಟುಂಬದಿಂದ ಶಾಲಾ ಕಾಲೇಜುಗಳಿಗೆ ಹೋಗುತ್ತಿರುವ ನಮ್ಮ ಮುದ್ದಿನ ಮಕ್ಕಳನ್ನು ಹದ್ದಿನಂತೆ ಗುರಿಯಿಟ್ಟು ಕೆಟ್ಟ ಚಟಕ್ಕೆ ಲಪಟಾಯಿಸುವ ಸ್ವಾರ್ಥಿ ಕಂತ್ರಿಗಳು ಹೆಚ್ಚಿನ ವಿದ್ಯಾಲಯಗಳ ಆಸುಪಾಸಿನಲ್ಲಿ ಸದ್ದಿಲ್ಲದೆ ತಮ್ಮ ಮಸಲತ್ತು ನಡೆಸುತ್ತಿದ್ದಾರೆ. ಮೊದಲು ಸಣ್ಣ ಪುಟ್ಟ ದುಡ್ಡಿನ ಆಸೆಗಾಗಿ ನಮ್ಮ ಮನೆಯ ಮಕ್ಕಳು ಈ ಪೆಡ್ಲರ್ಗಳಾಗಿ ವಹಿವಾಟು ನಡೆಸುತ್ತಿದ್ದಾರೆ!. ಇದು ಸುಲಭವಾಗಿ ಯಾರಿಗೂ ತಿಳಿಯದ ವಿಚಾರ ಕೂಡಾ. ಮನೆಯಲ್ಲಿ ಬೆಕ್ಕಿನ ರೀತಿ ಸಜ್ಜನರಂತೆ ಇರುವ ನಮ್ಮ ಮಕ್ಕಳೇ ಈ ವಿಕಾರ ಚಟದ ದಾಸರಾಗುತ್ತಿದ್ದಾರೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ಡ್ರಗ್ಸ್ ಸೇವನೆಯ ಖಚಿತತೆ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ!. ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವಿಡಿಯೋ, ಜಾಗ್ರತಿ ಚಿತ್ರಗಳು ಬರುತ್ತಲೇ ಇವೆ. ಆದರೆ ನಾವೆಲ್ಲಾ ಗಮನಿಸಿದಂತೆ ಇತ್ತೀಚಿಗೆ ನಡೆಯುತ್ತಿರುವ ಯುವಕರ ಆತ್ಮಹತ್ಯೆಯ ಹಿನ್ನೆಲೆಗಳೂ ಈ ಘಾತಕ ಚಟದ ಮಾಯೆಯಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ನಮ್ಮ ಮಂಗಳೂರಿನ ಪ್ರಸ್ತುತ ದಕ್ಷ ಹಾಗೂ ಶಿಸ್ತಿನ ಸಿಪಾಯಿ ಪೋಲೀಸ್ ಅಧಿಕಾರಿಯಾದ ಸುಧೀರ್ ಕುಮಾರ್ ರೆಡ್ಡಿಯವರು ಈ ಬಗ್ಗೆ ಬಹಳಷ್ಟು ಕಾರ್ಯತತ್ಪರರಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ತೀವ್ರ ನಿಗಾ ಇರಿಸಲಾಗಿದೆ. ಮುಖ್ಯವಾಗಿ ಸ್ಥಳೀಯ ಪೆಡ್ಲರ್ ಗಳನ್ನು ಗುರುತಿಸಿ ಬಂಧಿಸಲಾಗುತ್ತಿದೆ. ಈ ಡ್ರಗ್ಸ್ ಜಾಲದ ಮಾಹಿತಿ ನೀಡಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕ್ಯು ಆರ್ ಕೋಡ್ ಗಳನ್ನು ನೀಡಲಾಗುತ್ತಿದೆ. ಆ ಕ್ರಮದಿಂದ ಈಗಾಗಲೇ ಶೇಕಡಾ 25 ರಷ್ಟು ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳ ಡ್ರಗ್ಸ್ ಪರೀಕ್ಷೆಯನ್ನೂ ಸತತವಾಗಿ ನಡೆಸಲಾಗುತ್ತಿದೆ. ಈ ಕೆಲಸಕ್ಕೆ ನಾವೆಲ್ಲಾ ಕೈ ಜೋಡಿಸಬೇಕಾಗಿದೆ. ಇದು ನಮ್ಮ ನಿಮ್ಮ ನಡುವೆಯೇ ಸುಬಗರಂತೆ ಇರುವ ಈ ಮನೆಹಾಳರನ್ನು ನಾವೇ ಗುರುತಿಸುವ ಕೆಲಸವಾಗಬೇಕಾಗಿದೆ. ಸರಕಾರ ಪೋಲೀಸ್ ಇಲಾಖೆಯೇ ಎಲ್ಲವನ್ನೂ ನೋಡಿಕೊಳ್ಳಲು ಕಷ್ಟ ಸಾಧ್ಯ. ಹಾಗಾಗಿ ಇದು ನಮ್ಮ ಮನೆ ಮಕ್ಕಳ ನಾಳಿನ ಭವಿಷ್ಯದ ಪ್ರಶ್ನೆ. ಈಗಾಗಲೇ ಕೆಲವಷ್ಟು ಯುವ ಹೃದಯಗಳು ಈ ಚಟಕ್ಕೆ ಬಲಿಯಾಗಿ ಆಸ್ಪತ್ರೆಗಳಲ್ಲಿ ಒದ್ದಾಡುವ ವಿಡಿಯೋ ಕಥೆಗಳು ನಮ್ಮ ಕಣ್ಣೆದುರೇ ಇದೆ. ಸಾಮಾನ್ಯವಾಗಿ ನಮ್ಮ ಆಲೋಚನೆಯೆಂದರೆ ಅದು ನನ್ನ ಮನೆಯ ಮಗು ಅಲ್ಲ ತಾನೇ? ನನಗೇನು ಎಂಬ ಅಸಡ್ಡೆ ಮತ್ತು ಒಂದು ರೀತಿಯ ಸ್ವಾರ್ಥ ಭಾವ. ಆದರೆ ಒಂದು ನೆನಪಿಡಿ ಊರಿಗೆ ಬಂದ ಮಾರಿ ಮನೆಗೂ ಬರಬಹುದು ಎಂಬ ಕನಿಷ್ಠ ಪ್ರಜ್ಞೆ ನಮಗೆ ಬೇಕೇ ಬೇಕು. ಊರೇ ಸೂರೆ ಹೋದ ಮೇಲೆ ಕೋಟೆಯ ಬಾಗಿಲು ಹಾಕಿದರೆ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ನಮ್ಮ ಮನೆಯ ಮಕ್ಕಳ ಬಗ್ಗೆ ನಿಗಾ ಇಡುತ್ತಾ, ಅವರ ಚಟುವಟಿಕೆಗಳನ್ನು, ಮೊಬೈಲ್ ಗಳನ್ನು ಪರಿಶೀಲಿಸುತ್ತಾ ಪ್ರೀತಿಯ ಜೊತೆ ಕಾಳಜಿಯನ್ನೂ, ಶಿಸ್ತಿನ ಜೀವನವನ್ನೂ ಕಲಿಸಿಕೊಡಬೇಕಾದ್ದು ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯವಾಗಿದೆ. ಇದರಿಂದ ನಮ್ಮ ಮಕ್ಕಳ ಭವಿಷ್ಯ ಮಾತ್ರವಲ್ಲದೆ ಇಡೀ ಸಮಾಜದ ಸ್ವಾಸ್ಥ್ಯವೂ ಉತ್ತಮವಾಗಲು ಸಾಧ್ಯ. “ಉಪ್ಪು ತಿಂದವನು ನೀರು ಕುಡಿಯಲೇ ಬೇಕು” ತಪ್ಪು ಯಾರೇ ಮಾಡಲಿ ಅದಕ್ಕೆ ಸರಿಯಾದ ಶಿಕ್ಷೆ ಅನುಭವಿಸಲೇ ಬೇಕು. ಅದು ಪರಿಚಯದವನಾಗಿರಲಿ, ನೆರೆಕರೆಯವನಾಗಿರಲಿ, ಸಂಬಂಧಿಕನಾಗಿರಲಿ ಈ ಬಗ್ಗೆ ಮಾಹಿತಿಯಿದ್ದಲ್ಲಿ ಮುಲಾಜೇ ಇಲ್ಲದೆ ಕೂಡಲೇ ಪೋಲೀಸರಿಗೆ ಮಾಹಿತಿ ಕೊಡಿ. ಇದು ದೇವರು ಮೆಚ್ಚುವ ಸತ್ಕಾರ್ಯ. ಡ್ರಗ್ಸ್ ಬಗ್ಗೆ ಮಾಹಿತಿ ಇದ್ದಲ್ಲಿ ನೀವು ಕಾಲ್ ಮಾಡಬೇಕಾದ ನಂಬರ್ – MANASA Helpline- 1933. ಹಾಗೆಯೇ ಇದರ ಜೊತೆ ಇರುವ QR ಕೋಡ್ ನ್ನು ಸ್ಕ್ಯಾನ್ ಮಾಡಬಹುದು.
ಬರಹ : ಶರತ್ ಶೆಟ್ಟಿ ಪಡುಪಳ್ಳಿ

















































































































